ಮಂಗಳೂರಿನ ಮಂಜುಗಡ್ಡೆ ತಯಾರಿಕಾ ಘಟಕಕ್ಕೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ದಾಳಿ ; ಐಸ್ ತಯಾರಿಗೆ ಶುದ್ಧ ನೀರಿನ ಬಳಕೆಗೆ ಸೂಚನೆ, ಮೀನು ಶೇಖರಣೆಗೆ ರಾಸಾಯನಿಕ ಬಳಸದಂತೆ ಎಚ್ಚರಿಕೆ

01-11-26 10:13 pm       HK News Desk   ಕರಾವಳಿ

ಆರೋಗ್ಯ ಸಚಿವ ಯು.ಟಿ ಖಾದರ್ ಅವರ ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳು ಮಂಗಳೂರು ನಗರದಲ್ಲಿ ಹಸಿ ಮೀನು ಸಂರಕ್ಷಿಸಿಡಲು ಬಳಸಲಾಗುವ ಮಂಜುಗಡ್ಡೆ ತಯಾರಿಕಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಂಗಳೂರು, ನ.1: ಆರೋಗ್ಯ ಸಚಿವ ಯು.ಟಿ ಖಾದರ್ ಅವರ ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳು ಮಂಗಳೂರು ನಗರದಲ್ಲಿ ಹಸಿ ಮೀನು ಸಂರಕ್ಷಿಸಿಡಲು ಬಳಸಲಾಗುವ ಮಂಜುಗಡ್ಡೆ ತಯಾರಿಕಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಮಂಗಳೂರಿನ ಬಂದರು ಧಕ್ಕೆಯಲ್ಲಿ ಇರುವ ಮಂಜುಗಡ್ಡೆ ತಯಾರಿಕಾ ಘಟಕಗಳಿಗೆ ತೆರಳಿ ಮಂಜುಗಡ್ಡೆ ಮಾದರಿಯನ್ನು ಸಂಗ್ರಹಿಸಿದರು. ಘಟಕಗಳಲ್ಲಿ ನೀರಿನ ಟ್ಯಾಂಕರ್ ಗಳ ಮುಖಾಂತರ ಸಿಹಿ ನೀರನ್ನು ಖರೀದಿಸಿ ಮಂಜುಗಡ್ಡೆಯನ್ನು ತಯಾರಿಸುವಂತೆ ಸೂಚಿಸಿದರು. ಅಲ್ಲದೆ, ಮಂಜುಗಡ್ಡೆ ತಯಾರಿಸುವುದಕ್ಕೂ ಮುನ್ನ ನೀರಿನ ಶುಚಿತ್ವದ ಬಗ್ಗೆ ಪ್ರಯೋಗಾಲಯ ವರದಿಗಳನ್ನು ಪಡೆದ ಬಳಿಕವೇ ಮಂಜುಗಡ್ಡೆಯನ್ನು ತಯಾರಿಸಲು ಸೂಚಿಸಿದರು. 

ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ವತಿಯಿಂದ ನಡೆಸಲಾಗುವ ಮಂಜುಗಡ್ಡೆ ತಯಾರಿಕಾ ಘಟಕದಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಬಳಸಿ ಶುದ್ಧ ಮಂಜುಗಡ್ಡೆಯನ್ನು ತಯಾರಿಸುವುದು ಕಂಡುಬಂದಿರುತ್ತದೆ. ಇದೇ ವೇಳೆ, ಮಂಜುಗಡ್ಡೆ ತಯಾರಿಸಲು ಬಳಸಲಾಗುವ ನೀರಿನ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 

ಉತ್ತಮ ಗುಣಮಟ್ಟದ ತಾಜಾ ಮೀನುಗಳ ಸಂರಕ್ಷಣೆಗೆ ಉತ್ತಮ ಗುಣಮಟ್ಟದ ನೀರನ್ನು ಬಳಸಿ ತಯಾರಿಸಿದ ಮಂಜುಗಡ್ಡೆಯನ್ನೇ ಬಳಸುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದ್ದು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯಿಂದ ನಿರ್ದೇಶನ ನೀಡಲಾಯಿತು. ಇದಲ್ಲದೆ, ಮೀನಿನ ಸಂರಕ್ಷಣೆಗೆ ಫಾರ್ಮಲಿನ್ ಅಥವಾ ಇನ್ಯಾವುದೇ ರಾಸಾಯನಿಕ ಬಳಸದಂತೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನೂ ನೀಡಲಾಯಿತು.