14 ವರ್ಷಗಳ ಬಳಿಕ ಸೌಜನ್ಯ ಕೇಸ್ ಮರುತನಿಖೆ ; ಮೃತದೇಹ ಸಿಕ್ಕ ಜಾಗದಿಂದಲೇ ಕಾರ್ಯಾಚರಣೆ, ಮಣ್ಣಸಂಕದಲ್ಲಿ ಬೀಡುಬಿಟ್ಟ ಎಸ್ಐಟಿ, ಕುಟುಂಬಸ್ಥರಿಂದ ಮಾಹಿತಿ ಸಂಗ್ರಹ

31-10-26 05:19 pm       HK News Staffer   ಕರಾವಳಿ

ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಚುರುಕುಗೊಂಡಿದೆ. ಬರೋಬ್ಬರಿ 14 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ ಧರ್ಮಸ್ಥಳದ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದೆ. ಸೌಜನ್ಯ ಮೃತದೇಹ ಪತ್ತೆಯಾಗಿದ್ದ ಸ್ಥಳದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ಸೌಜನ್ಯಾ ಕುಟುಂಬಸ್ಥರಿಂದ ಅಂದಿನ ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ಬೆಳ್ತಂಗಡಿ, ಅಕ್ಟೋಬರ್ 31: ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಚುರುಕುಗೊಂಡಿದೆ. ಬರೋಬ್ಬರಿ 14 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ ಧರ್ಮಸ್ಥಳದ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದೆ. ಸೌಜನ್ಯ ಮೃತದೇಹ ಪತ್ತೆಯಾಗಿದ್ದ ಸ್ಥಳದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ಸೌಜನ್ಯಾ ಕುಟುಂಬಸ್ಥರಿಂದ ಅಂದಿನ ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ಎಸ್‌ಐಟಿ ತನಿಖಾಧಿಕಾರಿ ಲೋಕೇಶ್ ಜಗಲಸಾರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಧರ್ಮಸ್ಥಳದ ಮಣ್ಣಸಂಕದ ಕಾಡಿನಲ್ಲಿ ಸೌಜನ್ಯ ಮೃತದೇಹ ಪತ್ತೆಯಾಗಿದ್ದ ಸ್ಥಳಕ್ಕೆ ತನಿಖಾಧಿಕಾರಿಗಳು ಭೇಟಿ ನೀಡಿದ್ದಾರೆ. ಈ ವೇಳೆ ಸೌಜನ್ಯ ಕುಟುಂಬಸ್ಥರು ಸ್ಥಳವನ್ನು ಗುರುತಿಸಿ ತನಿಖಾ ತಂಡಕ್ಕೆ ಮಾಹಿತಿ ನೀಡಿದ್ದಾರೆ.

ತನಿಖೆಯ ಭಾಗವಾಗಿ ಸೌಜನ್ಯ ಅವರ ಮಾವ ಪುರಂದರ ಗೌಡ ಮತ್ತು ಸಂಬಂಧಿ ತುಕಾರಾಂ ಅವರಿಂದಲೂ ಮಾಹಿತಿ ಸಂಗ್ರಹಿಸಲಾಗಿದೆ. ಸ್ಥಳ ಪರಿಶೀಲನೆ ವೇಳೆ ಎಸ್‌ಐಟಿ ತಂಡದ ಜೊತೆಗೆ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಯೂ ಭಾಗವಹಿಸಿದ್ದಾರೆ.

ಬೆಂಗಳೂರು ಎಫ್‌ಎಸ್‌ಎಲ್ ತಂಡ, ಸೋಕೋ ತಂಡ, ಗ್ರಾಮ ಆಡಳಿತಾಧಿಕಾರಿ, ಪಂಚರು, ವೈದ್ಯರು ಹಾಗೂ ಫೋಟೋ ಮತ್ತು ವಿಡಿಯೋ ದಾಖಲಾತಿ ತಂಡ ಸ್ಥಳಕ್ಕೆ ಆಗಮಿಸಿತ್ತು. ತನಿಖೆಗೆ ಅಗತ್ಯವಾದ ಸಾಕ್ಷ್ಯ ಮತ್ತು ಮಾಹಿತಿಗಳನ್ನು ಸಂಗ್ರಹಿಸುವ ಪ್ರಕ್ರಿಯೆ ನಡೆದಿದೆ.

14 ವರ್ಷಗಳ ಹಿಂದಿನ ಪ್ರಕರಣದ ಮರು ತನಿಖೆಯಲ್ಲಿ ಮೃತದೇಹ ಪತ್ತೆಯಾದ ಸ್ಥಳದಲ್ಲೇ ತನಿಖೆ ಆರಂಭಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ. ಎಸ್‌ಐಟಿ ಮುಂದಿನ ತನಿಖೆಯಲ್ಲಿ ಯಾವೆಲ್ಲ ಅಂಶಗಳು ಹೊರಬರಲಿವೆ ಎಂಬುದು ಕುತೂಹಲ ಮೂಡಿಸಿದೆ. ಎಸ್ಪಿ ಜಗಲ್ಸಾರ್ ಮತ್ತು ಎಸಿಪಿ ಮನೋಜ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ ತಂಡದಲ್ಲಿ ನೇತೃತ್ವ ವಹಿಸಿದ್ದಾರೆ.