ಕಾರವಾರದ ಮುದಗಾ ಬಂದರಿನಲ್ಲಿ ಮತ್ತೆ ವಿಷಾನಿಲ ದುರಂತ: ಒಡಿಶಾ ಮೂಲದ ಇಬ್ಬರು ಮೀನುಗಾರರು ಸಾವು

31-10-26 01:05 pm       HK News Staffer   ಕ್ರೈಂ

ಮೀನು ಸಂಗ್ರಹಣಾ ಘಟಕದಿಂದ ಹೊರಹೊಮ್ಮಿದ ವಿಷಾನಿಲಕ್ಕೆ ಉಸಿರುಗಟ್ಟಿ ಇಬ್ಬರು ಮೀನುಗಾರರು ಮೃತಪಟ್ಟಿರುವ ದಾರುಣ ಘಟನೆ ಕಾರವಾರ ತಾಲೂಕಿನ ಮುದಗಾ ಮೀನುಗಾರಿಕಾ ಬಂದರಿನಲ್ಲಿ ನಡೆದಿದೆ. ಬೋಟ್‌ನ ಶೇಖರಣಾ ಘಟಕವನ್ನು ಸ್ವಚ್ಛಗೊಳಿಸುವ ವೇಳೆ ಈ ಅವಘಡ ಸಂಭವಿಸಿದ್ದು, ಮತ್ತೊಬ್ಬ ಮೀನುಗಾರ ಗಂಭೀರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಕಾರವಾರ, ಅಕ್ಟೋಬರ್ 31: ಮೀನು ಸಂಗ್ರಹಣಾ ಘಟಕದಿಂದ ಹೊರಹೊಮ್ಮಿದ ವಿಷಾನಿಲಕ್ಕೆ ಉಸಿರುಗಟ್ಟಿ ಇಬ್ಬರು ಮೀನುಗಾರರು ಮೃತಪಟ್ಟಿರುವ ದಾರುಣ ಘಟನೆ ಕಾರವಾರ ತಾಲೂಕಿನ ಮುದಗಾ ಮೀನುಗಾರಿಕಾ ಬಂದರಿನಲ್ಲಿ ನಡೆದಿದೆ. ಬೋಟ್‌ನ ಶೇಖರಣಾ ಘಟಕವನ್ನು ಸ್ವಚ್ಛಗೊಳಿಸುವ ವೇಳೆ ಈ ಅವಘಡ ಸಂಭವಿಸಿದ್ದು, ಮತ್ತೊಬ್ಬ ಮೀನುಗಾರ ಗಂಭೀರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಬೇಲೆಕೇರಿ ಮೂಲದ ‘ಮೂಕಾಂಬಿಕಾ’ ಹೆಸರಿನ ಬೋಟ್‌ನಲ್ಲಿ ಈ ಘಟನೆ ನಡೆದಿದೆ. ಚಮನ್ ಜಾತಿಯ ಮೀನುಗಳನ್ನು ಹಿಡಿದು ಬಂದರಿಗೆ ಮರಳಿದ್ದ ಮೀನುಗಾರರು, ಬೋಟ್‌ನ ಕೋಲ್ಡ್ ಸ್ಟೋರೇಜ್‌ನಿಂದ ಮೀನುಗಳನ್ನು ಖಾಲಿ ಮಾಡಿ ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಘಟಕದೊಳಗಿದ್ದ ವಿಷಾನಿಲ ಮತ್ತು ತೀವ್ರ ದುರ್ವಾಸನೆಗೆ ಮೀನುಗಾರರು ಸಿಲುಕಿದ್ದಾರೆ ಎನ್ನಲಾಗಿದೆ.

ಒಡಿಶಾ ಮೂಲದ ಪುರಂದರ ಬಿಸರಾ (21) ಮತ್ತು ಆಕಾಶ ನಾಯ್ಕ (24) ಮೃತಪಟ್ಟಿದ್ದಾರೆ. ಗಂಭೀರವಾಗಿ ಅಸ್ವಸ್ಥಗೊಂಡ ಲಾಲಿಂದರ ಧ್ರುವ (41) ಅವರನ್ನು ತಕ್ಷಣ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೂರು ದಿನಗಳ ಅಂತರದಲ್ಲಿ ಮತ್ತೊಂದು ದುರಂತ
ಕೇವಲ ಮೂರು ದಿನಗಳ ಹಿಂದಷ್ಟೇ ಕುಮಟಾ ತಾಲೂಕಿನ ತದಡಿ ಮೀನುಗಾರಿಕಾ ಬಂದರಿನಲ್ಲಿ ಚಮನ್ ಮೀನಿನಿಂದ ಹೊರಹೊಮ್ಮಿದ ವಿಷಾನಿಲಕ್ಕೆ ಸಿಲುಕಿ ಮೂವರು ಮೀನುಗಾರರು ಮೃತಪಟ್ಟಿದ್ದರು. ಇದೀಗ ಮುದಗಾ ಬಂದರಿನಲ್ಲಿಯೂ ಇದೇ ರೀತಿಯ ದುರಂತ ಸಂಭವಿಸಿರುವುದು ಮೀನುಗಾರಿಕಾ ವಲಯದಲ್ಲಿ ಆತಂಕ ಮೂಡಿಸಿದೆ.

ಬೋಟ್‌ಗಳ ಮೀನು ಸಂಗ್ರಹಣಾ ಘಟಕಗಳನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಪಾಲಿಸುವ ಅಗತ್ಯವನ್ನು ಈ ಸರಣಿ ಘಟನೆಗಳು ಎತ್ತಿ ತೋರಿಸಿವೆ. ಘಟಕದೊಳಗೆ ಪ್ರವೇಶಿಸುವ ಮೊದಲು ಸಮರ್ಪಕ ಗಾಳಿ ಸಂಚಾರ, ವಿಷಾನಿಲ ಪರೀಕ್ಷೆ ಮತ್ತು ಅಗತ್ಯ ಸುರಕ್ಷತಾ ಸಾಧನಗಳ ಬಳಕೆ ಅತ್ಯಗತ್ಯವಾಗಿದೆ.