ಬಂಟ್ವಾಳ ; ಯುವಕನಿಗೆ ಬೊಲೆರೋ ಡಿಕ್ಕಿಪಡಿಸಿ ಕೊಲೆಯತ್ನ, ಆರೋಪಿ ವಿಟ್ಲ ಪೊಲೀಸರಿಂದ ಬಂಧನ

11-11-26 03:09 pm       HK News Staffer   ಕ್ರೈಂ

ಯುವಕನೊಬ್ಬ ಬಂಟ್ವಾಳ ಮಾಣಿ ಜಂಕ್ಷನ್ ಬಳಿಯ ಮೈದಾನದಲ್ಲಿ ಪಟಾಕಿ ಅಂಗಡಿ ಬಳಿ ನಿಂತಿದ್ದಾಗ, ಜಗದೀಶ್ ಜೈನ್ ಎಂಬಾತ ಬೊಲೇರೋ ವಾಹನದಲ್ಲಿ ಡಿಕ್ಕಿಪಡಿಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದ್ದು ವಿಟ್ಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮಂಗಳೂರು, ನ.11: ಯುವಕನೊಬ್ಬ ಬಂಟ್ವಾಳ ಮಾಣಿ ಜಂಕ್ಷನ್ ಬಳಿಯ ಮೈದಾನದಲ್ಲಿ ಪಟಾಕಿ ಅಂಗಡಿ ಬಳಿ ನಿಂತಿದ್ದಾಗ, ಜಗದೀಶ್ ಜೈನ್ ಎಂಬಾತ ಬೊಲೇರೋ ವಾಹನದಲ್ಲಿ ಡಿಕ್ಕಿಪಡಿಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದ್ದು ವಿಟ್ಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 

ಆರೋಪಿ ಬೊಲೇರೋ ಜೀಪಿನಲ್ಲಿ ಅತಿ ವೇಗದಿಂದ ಬಂದಿದ್ದು ಮಾಣಿ ನಿವಾಸಿ ವಿಕೇಶ್ (32) ಎಂಬ ಯುವಕ ನಿಂತಿದ್ದಾಗ ಬೊಲೇರೊ ಜೀಪಿನ ಬಾನೆಟ್ ಮೇಲೆ ಹಾರಿ ಅಲ್ಲಿಯೇ ಇದ್ದ ಮಣ್ಣಿನ ಮೇಲೆ ಬಿದ್ದು ತಪ್ಪಿಸಿಕೊಂಡಿದ್ದಾರೆ. ಈ ವೇಳೆ, ಯುವಕನಿಗೆ ಎಡಕಾಲಿನ ಮೊಣಗಂಟಿಗೆ ಗುದ್ದಿದ ಗಾಯವಾಗಿರುತ್ತದೆ. ಜೊತೆಗಿದ್ದ ಸಂಬಂಧಿಕ ತೀರ್ಥಪ್ರಸಾದ್ ಎಂಬವರಿಗೂ ಆರೋಪಿ ಜೀಪಿನಿಂದ ಡಿಕ್ಕಿಪಡಿಸಲು ಯತ್ನಿಸಿದ್ದು ತಪ್ಪಿಸಿಕೊಂಡಿದ್ದಾರೆ. ಈ ವೇಳೆ ಜನರು ಸೇರುವುದನ್ನು ಕಂಡ ಆರೋಪಿ ಜಗದೀಶ್ ಜೈನ್ ವಿಕೇಶ್ ಅವರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ಮುಂದಕ್ಕೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿ ಪರಾರಿಯಾಗಿದ್ದ. 

ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ,ಕ್ರ: 232/2026, ಕಲಂ: 109, 118(1), 352, 351(2) BNS 2023 ರಂತೆ ಪ್ರಕರಣ ದಾಖಲಾಗಿದ್ದು, ಪ್ರಕರಣದ ಆರೋಪಿ ಜಗದೀಶ್ ಜೈನ್ ನನ್ನು ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.