ದಾವಣಗೆರೆಯಿಂದ ಮಂಗಳೂರು ಸಾಗಿಸುತ್ತಿದ್ದ 1.15 ಕೋಟಿ ಹವಾಲಾ ಹಣ ದರೋಡೆ ; ಕಾರವಾರದ ಪೊಲೀಸ್ ಪೇದೆಯೇ ಮಾಸ್ಟರ್‌ಮೈಂಡ್? ಕಾನ್ಸ್‌ಟೇಬಲ್ ಸೇರಿ ಐವರು ಉರ್ವಾ ಪೊಲೀಸರ ಬಲೆಗೆ !

10-11-26 10:01 pm       HK News Staffer   ಕ್ರೈಂ

ಕೋಟ್ಯಂತರ ರೂಪಾಯಿ ಹವಾಲಾ ಹಣ ದರೋಡೆ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಯೇ ಆರೋಪಿಯಾಗಿ ಮಂಗಳೂರಿನಲ್ಲಿ ಬಂಧನಕ್ಕೀಡಾಗಿದ್ದಾರೆ. ದಾವಣಗೆರೆಯಿಂದ ಮಂಗಳೂರಿಗೆ ಸಾಗಿಸುತ್ತಿದ್ದ ಬರೋಬ್ಬರಿ 1.15 ಕೋಟಿ ರೂಪಾಯಿ ಹವಾಲಾ ಹಣವನ್ನು ದೋಚಲು ಸಂಚು ರೂಪಿಸಿ, ಹಣ ಸಾಗಿಸುತ್ತಿದ್ದ ಸತ್ಯನಾರಾಯಣ ಎಂಬವರನ್ನು ಅಪಹರಿಸಿದ ಆರೋಪದಲ್ಲಿ ಕಾರವಾರದ ಪೊಲೀಸ್ ಪೇದೆ ಶ್ರೀಶೈಲ್‌ ಎಂಬವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಯ ಹೆಸರು ಕೇಳಿಬಂದಿರುವುದು ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ.

ಕಾರವಾರ/ಮಂಗಳೂರು, ನ.10: ಕೋಟ್ಯಂತರ ರೂಪಾಯಿ ಹವಾಲಾ ಹಣ ದರೋಡೆ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಯೇ ಆರೋಪಿಯಾಗಿ ಮಂಗಳೂರಿನಲ್ಲಿ ಬಂಧನಕ್ಕೀಡಾಗಿದ್ದಾರೆ. ದಾವಣಗೆರೆಯಿಂದ ಮಂಗಳೂರಿಗೆ ಸಾಗಿಸುತ್ತಿದ್ದ ಬರೋಬ್ಬರಿ 1.15 ಕೋಟಿ ರೂಪಾಯಿ ಹವಾಲಾ ಹಣವನ್ನು ದೋಚಲು ಸಂಚು ರೂಪಿಸಿ, ಹಣ ಸಾಗಿಸುತ್ತಿದ್ದ ಸತ್ಯನಾರಾಯಣ ಎಂಬವರನ್ನು ಅಪಹರಿಸಿದ ಆರೋಪದಲ್ಲಿ ಕಾರವಾರದ ಪೊಲೀಸ್ ಪೇದೆ ಶ್ರೀಶೈಲ್‌ ಎಂಬವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಯ ಹೆಸರು ಕೇಳಿಬಂದಿರುವುದು ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ.

ಹವಾಲಾ ಹಣದ ಮೇಲೆ ಕಣ್ಣು; ಅಪಹರಣಕ್ಕೆ ಸಂಚು!

ಕಾರವಾರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಶೈಲ್, ಹವಾಲಾ ಹಣ ದರೋಡೆ ಮಾಡುವ ಉದ್ದೇಶದಿಂದ ಕಾರವಾರದ ಯುವಕರನ್ನು ಬಳಸಿಕೊಂಡು ಅಪಹರಣಕ್ಕೆ ಯೋಜನೆ ರೂಪಿಸಿದ್ದ ಎನ್ನಲಾಗಿದೆ. ದಾವಣಗೆರೆಯಿಂದ ಮಂಗಳೂರಿಗೆ 1.15 ಕೋಟಿ ರೂಪಾಯಿ ಹಣವನ್ನು ಬಸ್ಸಿನಲ್ಲಿ ತರುತ್ತಿದ್ದ ಬಗ್ಗೆ ಮಾಹಿತಿ ಆಧರಿಸಿ ಪೊಲೀಸರ ಸೋಗಿನಲ್ಲಿ ಸತ್ಯನಾರಾಯಣ ಅವರನ್ನು ಅಪಹರಿಸಿ, ಬಳಿಕ ಹಣವನ್ನು ದೋಚಲಾಗಿತ್ತು.

ಈ ಬಗ್ಗೆ ಸತ್ಯನಾರಾಯಣ ಅವರು ಸೆಪ್ಟೆಂಬರ್ ಕೊನೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಮಂಗಳೂರಿನ ಉರ್ವಾ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದರು. ತನಿಖೆಯ ವೇಳೆ ಅಪಹರಣದ ಹಿಂದಿನ ಸಂಚಿನಲ್ಲಿ ಕಾರವಾರದ ಪೊಲೀಸ್ ಪೇದೆ ಶ್ರೀಶೈಲ್ ಪಾತ್ರವಿರುವುದು ಬೆಳಕಿಗೆ ಬಂದಿದ್ದು ಆತನನ್ನು ಬಂಧಿಸಿ ಕರೆತರಲಾಗಿದೆ.‌

ಕಾರವಾರ ತಾಲೂಕಿನ ಕಿನ್ನರ ಗ್ರಾಮದ ಗಣೇಶ ಕೋಳಂಕರ್ ಎಂಬ ಯುವಕನನ್ನು ಈ ಕೃತ್ಯಕ್ಕೆ ಪೊಲೀಸ್ ಪೇದೆ ಬಳಸಿಕೊಂಡಿರುವುದು ತನಿಖೆಯಲ್ಲಿ ಬಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಈಗಾಗಲೇ ಐವರು ಆರೋಪಿಗಳನ್ನು ಬಂಧಿಸಿದ್ದು, ಪ್ರಮುಖ ಆರೋಪಿ ಎಂದು ಗುರುತಿಸಲಾಗಿರುವ ಗಣೇಶ ಕೋಳಂಕರ್ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಬಂಧಿತರನ್ನು ಉಡುಪಿ ಜಿಲ್ಲೆಯ ಕಾಪು ನಿವಾಸಿ ಅಜೀಜ್, ಹಳಿಯಾಳದ ನಸ್ರುಲ್ಲಾ ಖಾನ್, ಕಾರವಾರದ ನಿತ್ಯಾನಂದ, ಮಂಗಳೂರು ಫರಂಗಿಪೇಟೆಯ ಖಾಲಿದ್ ಎಂದು ಗುರುತಿಸಲಾಗಿದೆ. ಇದಲ್ಲದೆ, ದಾವಣಗೆರೆಯ ಮತ್ತೊಬ್ಬ ಪೊಲೀಸ್ ಅಧಿಕಾರಿ ಶಾಮೀಲಾದ ಬಗ್ಗೆಯೂ ಪೊಲೀಸರು ತನಿಖೆ ನಡೆಸಿದ್ದಾರೆ. 

ಪೇದೆ ಅಮಾನತು; ಇಲಾಖೆಯಲ್ಲಿ ಸಂಚಲನ!

ಹವಾಲಾ ಹಣ ದರೋಡೆ ಮತ್ತು ಅಪಹರಣ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಕಾರವಾರ ಟ್ರಾಫಿಕ್ ಪೊಲೀಸ್ ಠಾಣೆಯ ಪೇದೆ ಶ್ರೀಶೈಲ್ ಅವರನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಅಮಾನತುಗೊಳಿಸಿದ್ದಾರೆ. ಹಣ ಸಾಗಿಸುತ್ತಿದ್ದ ವ್ಯಕ್ತಿಯ ಅಪಹರಣ, ಕೋಟ್ಯಂತರ ರೂಪಾಯಿ ದರೋಡೆ ಮತ್ತು ಅದರ ಹಿಂದಿನ ಸಂಚಿನಲ್ಲಿ ಪೊಲೀಸ್ ಸಿಬ್ಬಂದಿಯೇ ಭಾಗಿಯಾಗಿರುವ ಆರೋಪ ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ತಂದಿದೆ. ದರೋಡೆಯ ಹಿಂದೆ ಇನ್ನೂ ಯಾರ್ಯಾರ ಕೈವಾಡವಿದೆ ಎಂಬುದನ್ನು ಮಂಗಳೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.