ಮಂಗಳೂರು- ವಿಟ್ಲ ಖಾಸಗಿ ಬಸ್ಸಿನಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ; ಉಪ್ಪಿನಂಗಡಿ ಮೂಲದ ಬಸ್ ಕಂಡಕ್ಟರ್ ಬಂಧನ

11-07-26 04:28 pm       HK News Staffer   ಕ್ರೈಂ

ಮಂಗಳೂರು- ವಿಟ್ಲ ಮಾರ್ಗದಲ್ಲಿ ಸಂಚರಿಸುವ ಸೆಲೆನಾ ಹೆಸರಿನ ಖಾಸಗಿ ಬಸ್‌ನಲ್ಲಿ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ವಿಕೃತವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಬಸ್ ಕಂಡಕ್ಟರ್‌ನನ್ನು ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಶುಕ್ರವಾರ (ಜುಲೈ 10) ಬಂಧಿಸಿದ್ದಾರೆ.

ಬಂಟ್ವಾಳ, ಜುಲೈ 11: ಮಂಗಳೂರು- ವಿಟ್ಲ ಮಾರ್ಗದಲ್ಲಿ ಸಂಚರಿಸುವ ಸೆಲೆನಾ ಹೆಸರಿನ ಖಾಸಗಿ ಬಸ್‌ನಲ್ಲಿ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ವಿಕೃತವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಬಸ್ ಕಂಡಕ್ಟರ್‌ನನ್ನು ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಶುಕ್ರವಾರ (ಜುಲೈ 10) ಬಂಧಿಸಿದ್ದಾರೆ. 

ಉಪ್ಪಿನಂಗಡಿ ಕಲ್ಲೇರಿ ನಿವಾಸಿ ಇರ್ಫಾನ್ (32) ಬಂಧಿತ ಆರೋಪಿ. ಮಂಗಳೂರು–ವಿಟ್ಲ ರೂಟ್‌ನಲ್ಲಿ ಸಂಚರಿಸುವ ಖಾಸಗಿ ಬಸ್‌ನಲ್ಲಿ ಕಂಡಕ್ಟರ್ ಆಗಿದ್ದು ಜುಲೈ 9ರಂದು ಸಂಜೆ 5 ಗಂಟೆಯ ವೇಳೆಗೆ ಕಾಲೇಜು ಮುಗಿಸಿ ವಿದ್ಯಾರ್ಥಿನಿಯರು ಬಸ್‌ನಲ್ಲಿ ಮನೆಗೆ ಮರಳುತ್ತಿದ್ದರು. ಈ ವೇಳೆ, ಕಂಡಕ್ಟರ್ ಇರ್ಫಾನ್ ವಿದ್ಯಾರ್ಥಿನಿಯೊಬ್ಬಳನ್ನು ಗುರಿಯಾಗಿಸಿ, ಆಕೆಯ ಸೀಟಿನ ಮುಂಭಾಗ ನಿಂತು ಅತ್ಯಂತ ಅಸಭ್ಯವಾಗಿ ತನ್ನ ಗುಪ್ತಾಂಗ ಪ್ರದರ್ಶಿಸಿದ್ದಾನೆ. ಅಷ್ಟಕ್ಕೇ ನಿಲ್ಲದೆ, ಆಕೆಗೆ ವಿಚಿತ್ರವಾಗಿ ಲೈಂಗಿಕ ಸನ್ನೆಗಳನ್ನು ಮಾಡುತ್ತಾ, ಬಸ್‌ನ ಕೊನೆಯ ಸೀಟಿಗೆ ಬರುವಂತೆ ಕೈಸನ್ನೆ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. 

ಕಂಡಕ್ಟರ್ ತೋರಿದ ಅಸಭ್ಯ ವರ್ತನೆಯ ಬಗ್ಗೆ ವಿದ್ಯಾರ್ಥಿನಿ ಮನೆಗೆ ತೆರಳಿ ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ತಕ್ಷಣವೇ ಅದೇ ದಿನ ರಾತ್ರಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ನೀಡಲಾಗಿತ್ತು. ಪೊಲೀಸರು ಮರುದಿನ ಬೆಳಗ್ಗೆ ದಾಳಿ ನಡೆಸಿ ಆರೋಪಿ ಇರ್ಫಾನ್‌ನನ್ನು ವಶಕ್ಕೆ ಪಡೆದಿದ್ದು ಕೋರ್ಟಿಗೆ ಹಾಜರು ಪಡಿಸಿದ್ದಾರೆ.