Arif Murder, Seven Arrested, Mangalore: ಟ್ಯಾಬ್ಲೆಟ್ ಆರಿಫ್ ಹತ್ಯೆ ; ಏಳು ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು, ದುಬೈನಿಂದ ಹಣಕಾಸು ನೆರವು, ಕರಾರುವಾಕ್ ಪ್ಲಾನಿಂಗ್, ಸಂವಹನಕ್ಕೆ ವಿದೇಶಿ ವಾಟ್ಸಪ್ ಬಳಸಿದ್ದ ಹಂತಕರು !

08-04-26 07:48 pm       HK News Staffer   ಕ್ರೈಂ

ಇತ್ತೀಚೆಗೆ ತೊಕ್ಕೊಟ್ಟಿನಲ್ಲಿ ಕೊಲೆಯಾದ ರೌಡಿಶೀಟರ್ ಟ್ಯಾಬ್ಲೆಟ್ ಆರಿಫ್ ಹತ್ಯೆ ಪ್ರಕರಣದಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಕೊನೆಗೂ ಏಳು ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಹತ್ಯೆಗೆ ವಿದೇಶದಿಂದ ಹಣಕಾಸು ನೆರವು ನೀಡಿರುವುದು, ಕರಾರುವಾಕ್ ಪ್ಲಾನಿಂಗ್ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.‌

ಮಂಗಳೂರು, ಎಪ್ರಿಲ್ 8: ಇತ್ತೀಚೆಗೆ ತೊಕ್ಕೊಟ್ಟಿನಲ್ಲಿ ಕೊಲೆಯಾದ ರೌಡಿಶೀಟರ್ ಟ್ಯಾಬ್ಲೆಟ್ ಆರಿಫ್ ಹತ್ಯೆ ಪ್ರಕರಣದಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಕೊನೆಗೂ ಏಳು ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಹತ್ಯೆಗೆ ವಿದೇಶದಿಂದ ಹಣಕಾಸು ನೆರವು ನೀಡಿರುವುದು, ಕರಾರುವಾಕ್ ಪ್ಲಾನಿಂಗ್ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.‌

ಕೃತ್ಯದಲ್ಲಿ ನೇರ ಭಾಗಿಯಾಗಿರುವ ರಿಫಾತ್, ಜುಟ್ಟು ಅಶ್ಫಾಕ್, ಖಲೀಲ್, ಶಾಕಿರ್, ಇರ್ಫಾನ್, ರಿಜ್ವಾನ್ ಮತ್ತು ಇವರಿಗೆ ಪರಾರಿಯಾಗಲು ಸಹಕರಿಸಿದ್ದ ಇರ್ಶಾದ್ ಎಂಬವರನ್ನು ಸದ್ಯಕ್ಕೆ ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 27ರ ನಸುಕಿನ 3.30ರ ವೇಳೆಗೆ ಆರಿಫ್ ತನ್ನ ಕೆಸಿ ರೋಡ್ ಬಳಿಯ ಅಜ್ಜಿನಡ್ಕದ ಮನೆಯಿಂದ ಮಂಗಳೂರಿನ ಬಂದರು ದಕ್ಕೆಗೆ ಎಂದಿನಂತೆ ಮೀನು ವ್ಯಾಪಾರದ ಕೆಲಸಕ್ಕಾಗಿ ಬುಲೆಟ್ ಬೈಕಿನಲ್ಲಿ ಬರುತ್ತಿದ್ದ. ಈ ವೇಳೆ, ಆರು ಮಂದಿ ಆರೋಪಿಗಳು ಇನೋವಾ ಕಾರಿನಲ್ಲಿ ಹಿಂಬಾಲಿಸುತ್ತ ಬಂದಿದ್ದು ತೊಕ್ಕೊಟ್ಟು ಫ್ಲೈ ಓವರ್ ನಲ್ಲಿ ಹಿಂದಿನಿಂದ ಡಿಕ್ಕಿಯಾಗಿದ್ದರು. ರಸ್ತೆಗೆ ಬಿದ್ದ ಆರಿಫ್‌ ಮೇಲೆ ತಲವಾರಿನಿಂದ ಕಡಿದು ಸ್ಥಳದಿಂದ ಪರಾರಿಯಾಗಿದ್ದರು.‌

ಆರು ಮಂದಿ ಆರೋಪಿಗಳು ಕೃತ್ಯದಲ್ಲಿ ನೇರ ಭಾಗಿಯಾಗಿದ್ದರೆ, ಇರ್ಷಾದ್ ಎಂಬಾತ ಕೊಲೆ ಕೃತ್ಯಕ್ಕಾಗಿ ಎಲ್ಲವನ್ನೂ ಮಾಡಿಕೊಟ್ಟಿದ್ದ. ಕೊಲೆಗೆ ಮೊದಲು ಆರೋಪಿಗಳಿಗೆ ವಸತಿ ಸೌಕರ್ಯ ಒದಗಿಸಿದ್ದ ಮತ್ತು ಅವರನ್ನು ಅಪರಾಧ ಸ್ಥಳದಿಂದ ಎಸ್ಕೇಪ್ ಆಗಲು ಸಹಕಾರ ನೀಡಿದ್ದ. ಸುಹೇಲ್ ಎನ್ನುವಾತ ಕೃತ್ಯಕ್ಕೆ ಬಳಸಿದ್ದ ವಾಹನವನ್ನು ಬಾಡಿಗೆ ಪಡೆದು, ಅದನ್ನು ರಿಫಾತ್ ಕೈಗೆ ಕೊಟ್ಟು ಸೌದಿ ಅರೇಬಿಯಾಕ್ಕೆ ಪರಾರಿಯಾಗಿದ್ದಾನೆ. ಕೃತ್ಯ ನಡೆಯುವ ಒಂದೆರಡು ದಿನಗಳ ಮೊದಲೇ ಪರಾರಿಯಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ. 

ಅರ್ಶದ್ ಎಂಬಾತ ಕೃತ್ಯ ಎಸಗುವುದಕ್ಕಾಗಿ ಮಾರಕಾಸ್ತ್ರಗಳನ್ನು ಸಂಗ್ರಹಿಸಿದ್ದು ಆರೋಪಿಗಳಿಗೆ ಒದಗಿಸಿದ್ದ. ಅಲ್ಲದೆ, ಪೊಲೀಸರ ಚಲನವಲನದ ಮೇಲೆ ನಿಗಾ ಇಟ್ಟಿದ್ದಲ್ಲದೆ, ಕೃತ್ಯ ನಡೆಯುವ ದಿನದ ಕ್ಷಣ ಕ್ಷಣದ ಮಾಹಿತಿಯನ್ನು ನೀಡಿದ್ದನೆಂಬುದು ತನಿಖೆಯಲ್ಲಿ ಗೊತ್ತಾಗಿದೆ. ಇದಲ್ಲದೆ, ಬೇರೆ ವಾಹನದಲ್ಲಿ ಪರಾರಿಯಾಗಲು ವ್ಯವಸ್ಥೆ ಮಾಡಿದ್ದ‌ ಮತ್ತು ಆರೋಪಿಗಳು ತಲೆಮರೆಸಿಕೊಂಡಿದ್ದ ಅವಧಿಯಲ್ಲಿ ಅವರಿಗೆ ಹಣಕಾಸಿನ ನೆರವನ್ನೂ ನೀಡಿದ್ದ. 

ಆರೋಪಿಗಳು ತಾಂತ್ರಿಕ ಸಾಕ್ಷ್ಯ ತಪ್ಪಿಸುವ ನಿಟ್ಟಿನಲ್ಲಿ ವಿದೇಶಿ ವಾಟ್ಸಪ್ ಖಾತೆಗಳನ್ನು ಬಳಸಿಕೊಂಡಿದ್ದರು. ಇದಕ್ಕಾಗಿ ಅಶ್ವಿರ್ ಎಂಬಾತ ದುಬೈನಿಂದ ಒಟಿಪಿಗಳನ್ನು ಒದಗಿಸಿದ್ದು ಅಂತರಾಷ್ಟ್ರೀಯ ವಾಟ್ಸಾಪ್ ಖಾತೆಗಳನ್ನು ಬಳಸಲು ನೆರವು ನೀಡಿದ್ದ. ಪೊಲೀಸರ ಕಣ್ತಪ್ಪಿಸಿ ಓಡಾಡಲು ಸಹಾಯ ಆಗುವಂತೆ, ಹಳೆಯ ನಂಬರ್‌ಗಳನ್ನು ಪೊಲೀಸರು ಪತ್ತೆ ಮಾಡಿದಾಗ ಹೊಸ ನಂಬರ್ ಗಳನ್ನು ನೀಡುತ್ತಿದ್ದ. ಮಂಗಳೂರು ಮೂಲದ ಮುಸ್ತಫಾ ಮತ್ತು ಅಶ್ವಿರ್ ವಿದೇಶದಲ್ಲಿದ್ದುಕೊಂಡು ಆರೋಪಿಗಳಿಗೆ ಹಣಕಾಸು ನೆರವು ನೀಡಿದ್ದಾರೆ. ತಲೆಮರೆಸಿಕೊಂಡಿದ್ದ ವೇಳೆ ಅವರ ಪ್ರಯಾಣ, ವಸತಿ ಮತ್ತು ಇತರ ಖರ್ಚು ವೆಚ್ಚಗಳಿಗೆ ಇವರೇ ಹಣಕಾಸಿನ ನೆರವು ನೀಡಿದ್ದಾಗಿ ಪೊಲೀಸರು ಪತ್ತೆ ಮಾಡಿದ್ದಾರೆ. 

ಹಳೆ ದ್ವೇಷ ಮತ್ತು ಇತ್ತೀಚೆಗೆ ನಿಗೂಢ ರೀತಿಯಲ್ಲಿ ವೈರಿ ಫೈಸಲ್ ನಗರದ ರೌಡಿ ನೌಫಾಲ್ ಸಾವನ್ನು ಆರಿಫ್ ಸಂಭ್ರಮಿಸಿದ್ದ ಎನ್ನುವ ವಿಚಾರದಲ್ಲಿ ದ್ವೇಷ ಕಟ್ಟಿಕೊಂಡು ಭೀಕರವಾಗಿ ಕೊಲೆ ಕೃತ್ಯ ಎಸಗಿದ್ದಾರೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಇತರೇ ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಲಾಗುವುದು. ಒಟ್ಟು ಕೃತ್ಯದ ಹಿನ್ನಲೆಯನ್ನು ಬಯಲಿಗೆ ತರಲಾಗುವುದು ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.

In a major breakthrough, the Mangaluru City Crime Branch (CCB) has arrested seven accused in connection with the recent murder of rowdy-sheeter ‘Tablet Arif’ in Thokkottu. The investigation has revealed that the crime was meticulously planned and financially backed from abroad. The arrested individuals have been identified as Rifat, Juttu Ashfaq, Khaleel, Shakir, Irfan, Rizwan, and Irshad. Among them, six were directly involved in executing the murder, while Irshad is accused of assisting the main suspects in fleeing after the crime.