ಪುತ್ತೂರು ಬೈಪಾಸ್ ರಸ್ತೆಯಲ್ಲಿ ಎರಡು ಕಾಡುಕೋಣಗಳ ಓಡಾಟ ; ಸ್ಥಳೀಯರಲ್ಲಿ ಆತಂಕ

11-09-26 08:24 pm       HK News Staffer   ಕರಾವಳಿ

ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಕಾಡುಕೋಣಗಳು ಇದೀಗ ಪುತ್ತೂರು ನಗರದತ್ತಲೂ ಲಗ್ಗೆ ಇಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

ಪುತ್ತೂರು, ಸೆ. 11: ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಕಾಡುಕೋಣಗಳು ಇದೀಗ ಪುತ್ತೂರು ನಗರದತ್ತಲೂ ಲಗ್ಗೆ ಇಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

ಪುತ್ತೂರು ಬೈಪಾಸ್ ರಸ್ತೆಯ ದುಗ್ಗಮ್ಮದೇರಣ್ಣ ಶೆಟ್ಟಿ ಸಭಾಂಗಣದ ಮುಂಭಾಗದಲ್ಲಿ ಶುಕ್ರವಾರ ನಸುಕಿನ ಜಾವ ಎರಡು ಕಾಡುಕೋಣಗಳು ಕಾಣಿಸಿಕೊಂಡಿವೆ. ರಸ್ತೆಯಲ್ಲೇ ಎರಡು ಕಾಡುಕೋಣಗಳು ನಿಂತಿರುವುದನ್ನು ಕಂಡ ಸಾರ್ವಜನಿಕರು ಹಾಗೂ ವಾಹನ ಸವಾರರು ಆತಂಕಗೊಂಡಿದ್ದು, ಕೆಲವರು ಮೊಬೈಲ್‌ನಲ್ಲಿ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ.

ಸಾಮಾನ್ಯವಾಗಿ ಅರಣ್ಯ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಕಾಡುಕೋಣಗಳು ಇದೀಗ ನಗರದ ಪ್ರಮುಖ ರಸ್ತೆಯತ್ತ ಆಗಮಿಸಿರುವುದು ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದೆ. ಆಹಾರ ಮತ್ತು ನೀರಿನ ಹುಡುಕಾಟದಲ್ಲಿ ಅರಣ್ಯ ಪ್ರದೇಶದಿಂದ ಕಾಡುಕೋಣಗಳು ಜನವಸತಿ ಪ್ರದೇಶಗಳತ್ತ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ನಗರ ಪ್ರದೇಶದಲ್ಲೇ ಕಾಡುಕೋಣಗಳ ಓಡಾಟ ಕಂಡುಬಂದಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ತಕ್ಷಣ ಗಮನಹರಿಸಿ ಅವುಗಳ ಚಲನವಲನದ ಮೇಲೆ ನಿಗಾ ವಹಿಸಬೇಕು. ಅಲ್ಲದೆ, ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.