Mangalore Railway, Train: ಕಾಲು ಜಾರಿ ರೈಲಿನಡಿ ಬೀಳಲಿದ್ದ ಪ್ರಯಾಣಿಕನ ರಕ್ಷಿಸಿದ ರೈಲ್ವೆ ಸಿಬ್ಬಂದಿ ; ಸಂದೀಪ್ ನಾಯಕ್‌ ಸಮಯಪ್ರಜ್ಞೆಗೆ 10 ಸಾವಿರ ರೂ. ಬಹುಮಾನ

11-08-26 10:23 pm       HK News Staffer   ಕರಾವಳಿ

ಚಲಿಸುತ್ತಿದ್ದ ರೈಲಿಗೆ ಹತ್ತಲು ಯತ್ನಿಸಿ ಆಯತಪ್ಪಿ ರೈಲು ಹಾಗೂ ಪ್ಲಾಟ್‌ಫಾರ್ಮ್ ನಡುವಿನ ಕಿರಿದಾದ ಜಾಗಕ್ಕೆ ಬೀಳುತ್ತಿದ್ದ ಪ್ರಯಾಣಿಕನೊಬ್ಬನನ್ನು ಕರ್ತವ್ಯದಲ್ಲಿದ್ದ ಪಾಯಿಂಟ್ಸ್‌ಮ್ಯಾನ್ ಸಂದೀಪ್ ನಾಯಕ್ ತಮ್ಮ ಸಮಯಪ್ರಜ್ಞೆ ಹಾಗೂ ಧೈರ್ಯದಿಂದ ಕ್ಷಣಾರ್ಧದಲ್ಲಿ ರಕ್ಷಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ರೈಲು ನಿಲ್ದಾಣದಲ್ಲಿ ನಡೆದಿದೆ.

ಮಂಗಳೂರು , ಆ.11: ಚಲಿಸುತ್ತಿದ್ದ ರೈಲಿಗೆ ಹತ್ತಲು ಯತ್ನಿಸಿ ಆಯತಪ್ಪಿ ರೈಲು ಹಾಗೂ ಪ್ಲಾಟ್‌ಫಾರ್ಮ್ ನಡುವಿನ ಕಿರಿದಾದ ಜಾಗಕ್ಕೆ ಬೀಳುತ್ತಿದ್ದ ಪ್ರಯಾಣಿಕನೊಬ್ಬನನ್ನು ಕರ್ತವ್ಯದಲ್ಲಿದ್ದ ಪಾಯಿಂಟ್ಸ್‌ಮ್ಯಾನ್ ಸಂದೀಪ್ ನಾಯಕ್ ತಮ್ಮ ಸಮಯಪ್ರಜ್ಞೆ ಹಾಗೂ ಧೈರ್ಯದಿಂದ ಕ್ಷಣಾರ್ಧದಲ್ಲಿ ರಕ್ಷಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ರೈಲು ನಿಲ್ದಾಣದಲ್ಲಿ ನಡೆದಿದೆ. ಸಂದೀಪ್ ಅವರ ಸಮಯೋಚಿತ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ಭೀಕರ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ.

ಸೋಮವಾರ ಬೆಳಗ್ಗೆ 11.11ಕ್ಕೆ ಸುರತ್ಕಲ್ ರೈಲು ನಿಲ್ದಾಣಕ್ಕೆ ಮಡ್ಗಾಂವ್–ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 10107) ಆಗಮಿಸಿತ್ತು. ಮಧ್ಯಾಹ್ನ 12.12ಕ್ಕೆ ಹಸಿರು ನಿಶಾನೆ ದೊರೆತ ಬಳಿಕ ರೈಲು ನಿಧಾನವಾಗಿ ಚಲಿಸಲು ಆರಂಭಿಸಿತ್ತು. ಈ ವೇಳೆ ರೈಲು ಹೊರಡುತ್ತಿರುವುದನ್ನು ಗಮನಿಸಿದ ಪ್ರಯಾಣಿಕನೊಬ್ಬ ಓಡಿಬಂದು ರೈಲಿಗೆ ಹತ್ತಲು ಪ್ರಯತ್ನಿಸಿದ್ದಾನೆ. ಆತುರದಲ್ಲಿ ಆಯತಪ್ಪಿದ ಪರಿಣಾಮ, ಆತ ಪ್ಲಾಟ್‌ಫಾರ್ಮ್ ಮತ್ತು ರೈಲಿನ ಬೋಗಿಯ ನಡುವಿನ ಕಿರಿದಾದ ಅಂತರಕ್ಕೆ ಬೀಳುವ ಹಂತಕ್ಕೆ ತಲುಪಿದ್ದಾನೆ. ಕ್ಷಣಮಾತ್ರದ ವಿಳಂಬವಾಗಿದ್ದರೂ ಪ್ರಯಾಣಿಕ ರೈಲಿನಡಿ ಸಿಲುಕಿ ಗಂಭೀರ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು.

ಸಮಯಪ್ರಜ್ಞೆ ಮೆರೆದ ಪಾಯಿಂಟ್ಸ್‌ಮ್ಯಾನ್ ಸಂದೀಪ್

ಪ್ರಯಾಣಿಕ ಅಪಾಯಕ್ಕೆ ಸಿಲುಕಿರುವುದನ್ನು ಗಮನಿಸಿದ ಕರ್ತವ್ಯನಿರತ ಪಾಯಿಂಟ್ಸ್‌ಮ್ಯಾನ್ ಸಂದೀಪ್ ನಾಯಕ್ ಕ್ಷಣಾರ್ಧದಲ್ಲೇ ಕಾರ್ಯಪ್ರವೃತ್ತರಾಗಿದ್ದಾರೆ. ತಮ್ಮ ಪ್ರಾಣದ ಹಂಗು ತೊರೆದು ಪ್ರಯಾಣಿಕನತ್ತ ಧಾವಿಸಿದ ಅವರು, ರೈಲಿನ ವೇಗ ಮತ್ತಷ್ಟು ಹೆಚ್ಚುವ ಮುನ್ನವೇ ಆತನನ್ನು ಬಲವಾಗಿ ಹಿಂದಕ್ಕೆ ಎಳೆದು ಪ್ಲಾಟ್‌ಫಾರ್ಮ್‌ಗೆ ಸುರಕ್ಷಿತವಾಗಿ ಕರೆತಂದಿದ್ದಾರೆ.

ಸಂದೀಪ್ ಅವರ ಈ ಕ್ಷಿಪ್ರ ಹಾಗೂ ಧೈರ್ಯಶಾಲಿ ಕಾರ್ಯಾಚರಣೆಯಿಂದಾಗಿ ಸಂಭವಿಸಬಹುದಾಗಿದ್ದ ಭೀಕರ ದುರಂತವೊಂದು ತಪ್ಪಿದೆ. ಕೆಲಕಾಲದ ಆತಂಕದ ಬಳಿಕ ರೈಲನ್ನು ಸುರಕ್ಷಿತವಾಗಿ ಮುಂದಿನ ನಿಲ್ದಾಣದತ್ತ ಕಳುಹಿಸಲಾಯಿತು. ರೈಲು ಮಧ್ಯಾಹ್ನ 12.16ಕ್ಕೆ ಸುರಕ್ಷಿತವಾಗಿ ಮುಂದಿನ ಪ್ರಯಾಣ ಮುಂದುವರಿಸಿತು.

₹10 ಸಾವಿರ ಬಹುಮಾನ ಘೋಷಣೆ;

ಕರ್ತವ್ಯದ ಜತೆಗೆ ಮಾನವೀಯತೆ ಮೆರೆದು ಪ್ರಯಾಣಿಕನ ಜೀವ ಉಳಿಸಿದ ಸಂದೀಪ್ ನಾಯಕ್ ಅವರ ಸಾಹಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅವರ ಸಮಯಪ್ರಜ್ಞೆ ಹಾಗೂ ಧೈರ್ಯವನ್ನು ಶ್ಲಾಘಿಸಿರುವ ಕೊಂಕಣ ರೈಲ್ವೆ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಝಾ, ಸಂದೀಪ್ ಅವರಿಗೆ ₹10,000 ನಗದು ಬಹುಮಾನ ಘೋಷಿಸಿದ್ದಾರೆ.