ಮೂಡುಬಿದಿರೆಯಲ್ಲಿ ಸಿಲಿಂಡರ್ ಸ್ಫೋಟ ; ಆರು ವರ್ಷದ ಬಾಲಕ ಸೇರಿ ಒಂದೇ ಕುಟುಂಬದ ಮೂವರಿಗೆ ಗಂಭೀರ ಗಾಯ

11-08-26 10:03 pm       HK News Staffer   ಕರಾವಳಿ

ಬಾಡಿಗೆ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ದಿಢೀರ್ ಬೆಂಕಿ ಹೊತ್ತಿಕೊಂಡ ಪರಿಣಾಮ, ಒಂದೇ ಕುಟುಂಬದ ಮೂವರು ತೀವ್ರವಾಗಿ ಗಾಯಗೊಂಡಿರುವ ದಾರುಣ ಘಟನೆ ಮೂಡುಬಿದಿರೆ ತಾಲೂಕಿನ ಮಿಜಾರು ಗ್ರಾಮದಲ್ಲಿ ಸಂಭವಿಸಿದೆ.

ಮೂಡುಬಿದಿರೆ, ಆಗಸ್ಟ್‌ 11: ಬಾಡಿಗೆ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ದಿಢೀರ್ ಬೆಂಕಿ ಹೊತ್ತಿಕೊಂಡ ಪರಿಣಾಮ, ಒಂದೇ ಕುಟುಂಬದ ಮೂವರು ತೀವ್ರವಾಗಿ ಗಾಯಗೊಂಡಿರುವ ದಾರುಣ ಘಟನೆ ಮೂಡುಬಿದಿರೆ ತಾಲೂಕಿನ ಮಿಜಾರು ಗ್ರಾಮದಲ್ಲಿ ಸಂಭವಿಸಿದೆ.

ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿವರಾಮ (31), ಅವರ ಪತ್ನಿ ಗಂಗಾ (25) ಹಾಗೂ ಆರು ವರ್ಷದ ಪುತ್ರ ಆದರ್ಶ್ (6) ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಿಜಾರಿನ ಬಾಡಿಗೆ ಮನೆಯಲ್ಲಿ  ಸಿಲಿಂಡರ್‌ನಿಂದ ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡು ದಿಢೀರ್‌ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಮನೆಯಲ್ಲಿ ಬೆಂಕಿ ವ್ಯಾಪಿಸಿದೆ. ಅಗ್ನಿ ಅವಘಡದಲ್ಲಿ ಶಿವರಾಮ ಅವರಿಗೆ ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿದ್ದು, ಪತ್ನಿ ಗಂಗಾ ಹಾಗೂ ಪುತ್ರ ಆದರ್ಶ್‌ಗೂ ಸುಟ್ಟ ಗಾಯಗಳಾಗಿವೆ. ಘಟನೆಯ ಬಳಿಕ ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.

ಗ್ಯಾಸ್‌ ಸೋರಿಕೆಯಾಗಲು ನಿಖರ ಕಾರಣವೇನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಘಟನೆ ಕುರಿತು  ಮೂಡುಬಿದಿರೆ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಕುರಿತು ಮಾಹಿತಿ ಕಲೆಹಾಕಿರುವ ಪೊಲೀಸರು, ಸಿಲಿಂಡರ್‌ ಸೋರಿಕೆ ಹಾಗೂ ಬೆಂಕಿ ಅವಘಡಕ್ಕೆ ಕಾರಣವಾದ ಅಂಶಗಳ ಬಗ್ಗೆ ಮುಂದಿನ ತನಿಖೆ ಕೈಗೊಂಡಿದ್ದಾರೆ.