Dharmasthala: ಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನುಷ್ಯನ ಎಲುಬು, ಬುರುಡೆಗಳು ಪತ್ತೆ, ಧರ್ಮಸ್ಥಳ ಪ್ರಕರಣಕ್ಕೆ ಮತ್ತೆ ತಿರುವು, ಎಸ್ಐಟಿ ಶೋಧ ಕಾರ್ಯ ಮುಂದುವರಿಕೆ

17-09-25 11:05 pm       Mangalore Correspondent   ಕರಾವಳಿ

ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟ ಬಳಿಯ ಬಂಗ್ಲೆಗುಡ್ಡೆ ಕಾಡಿನಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಎಸ್ಐಟಿ ಅಧಿಕಾರಿಗಳು ಶಾಕ್ ಆಗಿದ್ದಾರೆ. ಕಾಡಿನಲ್ಲಿ ಶೋಧ ಕಾರ್ಯ ವೇಳೆ 9 ಕಡೆ ಮಾನವನ ಎಲುಬುಗಳು, ತಲೆಬುರುಡೆಗಳು ಪತ್ತೆಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಳ್ತಂಗಡಿ, ಸೆ.17 : ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟ ಬಳಿಯ ಬಂಗ್ಲೆಗುಡ್ಡೆ ಕಾಡಿನಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಎಸ್ಐಟಿ ಅಧಿಕಾರಿಗಳು ಶಾಕ್ ಆಗಿದ್ದಾರೆ. ಕಾಡಿನಲ್ಲಿ ಶೋಧ ಕಾರ್ಯ ವೇಳೆ 9 ಕಡೆ ಮಾನವನ ಎಲುಬುಗಳು, ತಲೆಬುರುಡೆಗಳು ಪತ್ತೆಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಟ್ಟದ ಮೇಲ್ಭಾಗದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಬೇರೆ ಬೇರೆ ಕಡೆ ದೊರೆತ ಎಲುಬುಗಳನ್ನು ಮತ್ತು ತಲೆಬುರುಡೆಗಳನ್ನು ಸಂಗ್ರಹಿಸಿದ್ದಾರೆ. ಇಡೀ ಬಂಗ್ಲೆಗುಡ್ಡೆ ಕಾಡಿನಲ್ಲಿ ಶೋಧ ಕಾರ್ಯ ನಡೆಸಬೇಕು ಎಂಬ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಸೂಚನೆಯಂತೆ ಅಧಿಕಾರಿಗಳು ಶೋಧಕ್ಕೆ ಮುಂದಾಗಿದ್ದಾರೆ. ಬುಧವಾರ ಬೆಳಗ್ಗಿನಿಂದಲೇ 50ಕ್ಕೂ ಹೆಚ್ಚು ಮಂದಿ ಇದ್ದ ಎಫ್ಎಸ್ಎಲ್ ಮತ್ತು ಎಸ್ಐಟಿ ತಂಡದ ಅಧಿಕಾರಿಗಳು ಕಾಡಿಗೆ ತೆರಳಿ ಕಾರ್ಯಾಚರಣೆ ನಡೆಸಿದ್ದಾರೆ.

ಸಣ್ಣ ಸಣ್ಣ ಎಲುಬುಗಳ ತುಂಡುಗಳನ್ನು ಪಿವಿಸಿ ಪೈಪ್ ನಲ್ಲಿ ತುಂಬಿಸಿ ಸಂಜೆ ವೇಳೆಗೆ ತಂದಿದ್ದಾರೆ. ಅಲ್ಲದೆ, ಬಕೆಟ್ ಗಳಲ್ಲೂ ಅಸ್ಥಿಪಂಜರ, ಬುರುಡೆ ಮಾದರಿಗಳನ್ನು ತಂದಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಅಧಿಕಾರಿಗಳು ಬಿಟ್ಟುಕೊಟ್ಟಿಲ್ಲ. ದೂರುದಾರ ಚಿನ್ನಯ್ಯ ತಂದಿದ್ದ ತಲೆಬುರುಡೆ ಬಂಗ್ಲೆಗುಡ್ಡೆ ಕಾಡಿನಿಂದ ತರಲಾಗಿತ್ತು ಎನ್ನುವ ಮಾಹಿತಿ ಆಧರಿಸಿ ಎಸ್ಐಟಿ ತನಿಖೆ ನಡೆಸಿತ್ತು. ಈ ವೇಳೆ, ವಿಠಲ ಗೌಡ ಬುರುಡೆಯನ್ನು ತಂದುಕೊಟ್ಟಿದ್ದ ಎನ್ನುವ ಮಾಹಿತಿಯಂತೆ ಅವರನ್ನೂ ಕರೆಸಿ ವಿಚಾರಣೆ ನಡೆಸಿದ್ದರು.

ಆದರೆ ಸ್ಥಳ ಮಹಜರು ಸಂದರ್ಭದಲ್ಲಿ ವಿಠಲ ಗೌಡ ಮತ್ತು ಜೊತೆಗಿದ್ದ ಅಧಿಕಾರಿಗಳು ಕಾಡಿನ ಮೇಲ್ಭಾಗದಲ್ಲಿ ಬಹಳಷ್ಟು ಮಾನವನ ಮೂಳೆಗಳನ್ನು ಪತ್ತೆ ಮಾಡಿದ್ದರು. ಇದರಿಂದಾಗಿ ಧರ್ಮಸ್ಥಳ ಪ್ರಕರಣ ಮತ್ತೆ ಸಂಚಲನ ಮೂಡಿಸಿತ್ತು. ಇದರ ಬೆನ್ನಲ್ಲೇ ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಮುಂದಾಗಿತ್ತು. ಇದೀಗ ಶೋಧ ಕಾರ್ಯ ಆರಂಭಿಸಿರುವ ಅಧಿಕಾರಿಗಳು 9 ಕಡೆ ಮನುಷ್ಯನ ಎಲುಬುಗಳನ್ನು ಪತ್ತೆ ಮಾಡಿದ್ದು ಅವುಗಳನ್ನು ಸಂಗ್ರಹಿಸಿದ್ದಾರೆ. ಇಡೀ ಬಂಗ್ಲೆಗುಡ್ಡೆ ಕಾಡಿನಲ್ಲಿ ಶೋಧ ನಡೆಸಿದರೆ ಇನ್ನಷ್ಟು ಎಲುಬುಗಳು ಪತ್ತೆಯಾಗುವ ಸಾಧ್ಯತೆಯಿದೆ. ಇವನ್ನು ಎಫ್ಎಸ್ಎಲ್ ತಜ್ಞರು ಅಧ್ಯಯನ ನಡೆಸಿ, ಎಷ್ಟು ವರ್ಷಗಳ ಹಿಂದಿನ ಎಲುಬು ಮತ್ತು ಹೆಣ್ಣೋ, ಗಂಡೋ ಎಂಬುದನ್ನು ನಿರ್ಧರಿಸಲಿದ್ದಾರೆ. ಆದರೆ ಇದು ಹೇಗೆ ಮೃತಪಟ್ಟಿರುವುದು ಎಂಬುದನ್ನು ಪತ್ತೆ ಮಾಡುವುದು ಕಷ್ಟ ಎನ್ನಲಾಗುತ್ತಿದೆ.

The Special Investigation Team (SIT) probing the Dharmasthala human remains case has made a shocking discovery in the Banglegudde forest near the Netravati bathing ghat. During a large-scale search operation on Wednesday, the team reportedly recovered human bones and skulls from at least nine different locations inside the forest.