ತಮಿಳುನಾಡು ಜೈಲಿನಿಂದ 17 ಕೈದಿಗಳ ಪರಾರಿ; 30 ವರ್ಷಗಳಲ್ಲೇ ಅತಿದೊಡ್ಡ ಘಟನೆ, ಮೂರ್ಛೆ ರೋಗದ ನೆಪ ಹೇಳಿ ಸಿಬಂದಿಗೆ ಹಲ್ಲೆಗೈದು ಎಸ್ಕೇಪ್, 9 ಸಿಬ್ಬಂದಿ ಅಮಾನತು

28-10-26 10:28 am       HK News Staffer   ಕ್ರೈಂ

ಮೂರ್ಛೆ ರೋಗದ ನೆಪ ಹೇಳಿ ಜೈಲು ಸಿಬಂದಿಗಳ ಮೇಲೆ ಹಲ್ಲೆ ನಡೆಸಿ 17 ಮಂದಿ ಕೈದಿಗಳು ಜೈಲಿನಿಂದ ಪರಾರಿಯಾದ ಘಟನೆ ತಮಿಳುನಾಡಿನಲ್ಲಿ ಸಂಭವಿಸಿದೆ.

ಚೆನ್ನೈ, ಅ. 28: ಮೂರ್ಛೆ ರೋಗದ ನೆಪ ಹೇಳಿ ಜೈಲು ಸಿಬಂದಿಗಳ ಮೇಲೆ ಹಲ್ಲೆ ನಡೆಸಿ 17 ಮಂದಿ ಕೈದಿಗಳು ಜೈಲಿನಿಂದ ಪರಾರಿಯಾದ ಘಟನೆ ತಮಿಳುನಾಡಿನಲ್ಲಿ ಸಂಭವಿಸಿದೆ.

ಜೈಲು ಸಿಬ್ಬಂದಿಗೆ ಮೂರ್ಛೆ ರೋಗದ ನೆಪ ಹೇಳಿ, ಜೈಲು ಕೊಠಡಿ ತೆರೆಯಲು ಸಹಾಯ ಮಾಡಲು ಬಂದ ಸಿಬಂದಿಗಳ ಮೇಲೆ ಹಲ್ಲೆ ನಡೆಸಿ, ನಂತರ ಕಾವಲುಗಾರರ ಮೇಲೆಯೂ ಹಲ್ಲೆ ನಡೆಸಿ 17 ವಿಚಾರಣಾಧೀನ ಕೈದಿಗಳು ಸೋಮವಾರ ತಡರಾತ್ರಿ ತಮಿಳುನಾಡಿನ ತೇಣಿ ಜಿಲ್ಲೆಯ ತೆಕ್ಕಂಪಟ್ಟಿ ಉಪ ಜೈಲಿನಿಂದ ಪರಾರಿಯಾಗಿದ್ದಾರೆ. ಪರಾರಿ ಆದವರನ್ನು ಪತ್ತೆಹಚ್ಚಲು ಪೊಲೀಸ್ ತಂಡವನ್ನು ಕಟ್ಟಲಾಗಿದ್ದು, ಇದುವರೆಗೆ ನಾಲ್ವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಜ್ಯದ ತೇಣಿ ಜಿಲ್ಲೆಯ ತೆಕ್ಕಂಪಟ್ಟಿ ಉಪ ಕಾರಾಗೃಹದಿಂದ ಕೈದಿಗಳು ಪರಾರಿಯಾಗಿದ್ದಾರೆ. ತೇಣಿಯ ದಟ್ಟಾರಣ್ಯ ಪ್ರದೇಶದಲ್ಲಿ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರಾಜ್ಯದ ಗೃಹ ಸಚಿವಾಲಯ ಪೊಲೀಸರ ಜೊತೆ ನೇರ ಸಂಪರ್ಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಪರಾರಿಯಾಗಿರುವ ಕೈದಿಗಳು ಮುಖ್ಯವಾಗಿ 19 - 26 ವರ್ಷದ ಯುವಕರಾಗಿದ್ದಾರೆ. ಇವರು, ತಮಿಳುನಾಡಿನ ಮಧುರೈ, ಶಿವಗಂಗೈ, ರಾಮನಾಥಪುರಂ, ಸೇಲಂ, ಕನ್ಯಾಕುಮಾರಿ ಮತ್ತು ತೇಣಿ ಜಿಲ್ಲೆಯವರಾಗಿದ್ದಾರೆ. ಇವರ ಮೇಲೆ ಕೊಲೆ ಯತ್ನ ಮತ್ತು ಮಾದಕ ದ್ರವ್ಯ ಮಾರಾಟದಂತಹ ಗಂಭೀರ ಪ್ರಕರಣಗಳು ದಾಖಲಾಗಿವೆ. ಜೈಲಿನಲ್ಲಿ ಸಂಭವಿಸಿದ ಭದ್ರತಾ ಲೋಪ ಮತ್ತು ನಿರ್ಲಕ್ಷ್ಯದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.

ಘಟನೆಯಲ್ಲಿ ಮೂವರು ಜೈಲು ಸಿಬ್ಬಂದಿ ಗಾಯಗೊಂಡಿದ್ದಾರೆ. ಗ್ರೇಡ್ II ಪೊಲೀಸ್ ಕಾನ್ಸ್‌ಟೇಬಲ್‌ ತಂಗಪಾಂಡಿ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ ಇಬ್ಬರು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪರಾರಿಯಾದ ಕೈದಿಗಳ ಪೈಕಿ ಸಿಲಂಬರಸನ್‌, ಪ್ರವೀಣ್‌ ಕುಮಾರ್‌, ರಾಜಾ ಸಿಕಂದರ್‌ ಮತ್ತು ರಾಜ್‌ಕುಮಾರ್‌ ಎಂಬವರನ್ನು ಮಂಗಳವಾರ ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ. ಉಳಿದ ಕೈದಿಗಳ ಪತ್ತೆಗಾಗಿ ತಮಿಳುನಾಡು ಪೊಲೀಸರು 17 ವಿಶೇಷ ತಂಡಗಳನ್ನು ರಚಿಸಿದ್ದಾರೆ.

1995ರ ಬಳಿಕದ ದೊಡ್ಡ ಜೈಲು ಪರಾರಿ 

ತಮಿಳುನಾಡಿನಲ್ಲಿ ಸುಮಾರು 30 ವರ್ಷಗಳ ಬಳಿಕ ನಡೆದ ಅತಿದೊಡ್ಡ ಜೈಲು ಪರಾರಿ ಘಟನೆ ಇದಾಗಿದೆ. 1995ರ ಆಗಸ್ಟ್‌ 15ರಂದು ನಿಷೇಧಿತ ಎಲ್‌ಟಿಟಿಇ ಸಂಘಟನೆಯ 43 ಶಂಕಿತ ಉಗ್ರರು ವೆಲ್ಲೂರು ಕೋಟೆಯೊಳಗಿನ ವಿಶೇಷ ಶಿಬಿರದಿಂದ 153 ಅಡಿ ಉದ್ದದ ಸುರಂಗ ಕೊರೆದು ಪರಾರಿಯಾಗಿದ್ದರು.

ಗಾಯಗೊಂಡ ಜೈಲು ಸಿಬ್ಬಂದಿಗೆ ಥೇನಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಥೇನಿ ಕೇರಳದ ಗಡಿಗೆ ಹೊಂದಿಕೊಂಡಿರುವುದರಿಂದ ನೆರೆಯ ರಾಜ್ಯದ ಪೊಲೀಸರಿಗೂ ಮಾಹಿತಿ ನೀಡಲಾಗಿದೆ. ತಮಿಳುನಾಡು ಮತ್ತು ಕೇರಳದ ಇಡುಕ್ಕಿ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಜೈಲಿನಿಂದ ಕೈದಿಗಳು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಜೈಲು ಇಲಾಖೆ ಒಂಭತ್ತು ಸಿಬ್ಬಂದಿಯನ್ನು ಅಮಾನತುಗೊಳಿಸಿದೆ.