ದೇವೇಗೌಡ್ರ ಕುಟುಂಬವನ್ನು ಮುಗಿಸಲು ಡಿಕೆಶಿಯಿಂದ 600 ಕೋಟಿ ರೂ. ಡೀಲ್ ; ಪ್ರಿಯಾಂಕ ಖರ್ಗೆ ಸ್ಟಿಂಗ್ ವಿಡಿಯೋ ನೋಡಿಲ್ವಾ..? ಸ್ಟಿಂಗ್ ಮಾಡಿದವರನ್ನು ಬಿಟ್ಟು ಇವರು ಬಾಲ ಬಡಿಯುತ್ತ ಕೂತಿದ್ದಾರೆ..!

26-10-26 11:55 am       HK News Staffer   ಕರ್ನಾಟಕ

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಕುಟುಂಬವನ್ನು ಮುಗಿಸಲು ಹಾಲಿ ಸಿಎಂ ಡಿಕೆ ಶಿವಕುಮಾರ್ 600 ಕೋಟಿ ರೂ. ಬೃಹತ್‌ ಮೊತ್ತದ ಡೀಲ್‌ ಕೊಟ್ಟಿದ್ದಾರೆ. ಈ ವಿಷಯದಲ್ಲಿ ಯಾವುದೇ ಸಂಶಯವಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು, ಅ.26: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಕುಟುಂಬವನ್ನು ಮುಗಿಸಲು ಹಾಲಿ ಸಿಎಂ ಡಿಕೆ ಶಿವಕುಮಾರ್ 600 ಕೋಟಿ ರೂ. ಬೃಹತ್‌ ಮೊತ್ತದ ಡೀಲ್‌ ಕೊಟ್ಟಿದ್ದಾರೆ. ಈ ವಿಷಯದಲ್ಲಿ ಯಾವುದೇ ಸಂಶಯವಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

'ಈಗಿನ ಮಹಾನ್‌ ಮುಖ್ಯಮಂತ್ರಿ ನಮ್ಮ ಕುಟುಂಬವನ್ನು ಮುಗಿಸಲು ನಡೆಸಿರುವ ಕುತಂತ್ರ ಒಂದೆರಡಲ್ಲ. ಅನೇಕ ಕುತಂತ್ರಗಳನ್ನು ಅವರು ಮಾಡಿದ್ದು ಅದರಲ್ಲಿ 600 ಕೋಟಿ ರೂ. ಸುಪಾರಿ ಡೀಲ್‌ ಕೂಡ ಒಂದು. ಅವರು ಈ ಕೃತ್ಯ ಎಸಗಿದ್ದಾರೆ ಎಂಬುದರಲ್ಲಿ ಸಂಶಯವೇ ಇಲ್ಲ. ಆದರೆ ಯಾರೋ ಮಾಡಿದ ಸ್ಟಿಂಗ್ ಮುಂದಿಟ್ಟು ನಮ್ಮನ್ನು ಕಟ್ಟಿ ಹಾಕಲು ನೋಡುತ್ತಿದ್ದಾರೆ. 

ಸ್ಟಿಂಗ್‌ ಮಾಡಿದ ಪಾತಕಿಗಳನ್ನು ಬಂಧಿಸಿ ಎಂದರೆ ಅವರಿಗೆ ಸುರಕ್ಷಿತವಾಗಿ ನಿರೀಕ್ಷಣಾ ಜಾಮೀನು ಸಿಗುವಂತೆ ಮಾಡಿ ಅದಕ್ಕೆ ಸಂಬಂಧ ಇಲ್ಲದವರನ್ನು ಕಾಡುತ್ತಿದ್ದಾರೆ. ಇವರ ಪಾಪದ ಕೊಡ ತುಂಬಿದೆ. ಆ ಭಗವಂತನೇ ಇದೆಲ್ಲವನ್ನು ಹೊರಗೆ ತರುತ್ತಿದ್ದಾನೆ. ಒಂದು ಸೂಕ್ಷ್ಮ ವಿಚಾರದ ತನಿಖೆ ನಡೆಯುತ್ತಿದೆ. ಇನ್ನೂ 5 ದಿನ ಸಮಯ ಕೊಡುತ್ತೇನೆ. ಏನು ಮಾಡುತ್ತಾರೋ ನೋಡೋಣ. ನಮ್ಮ ಯುವಕರು ಪೊಲೀಸರ ತನಿಖೆಗೆ ಭಯ ಪಡುವುದು ಬೇಡ. ಎಲ್ಲ ರೀತಿಯಲ್ಲಿ ತನಿಖೆಗೆ ಸಹಕರಿಸಿ. ತನಿಖೆ ಯಾವ ದಿಕ್ಕಿನತ್ತ ಹೋಗುತ್ತಿದೆ, ಒಳಗೇನು ನಡೆಯುತ್ತಿದೆ ಎಂಬ ಮಾಹಿತಿ ನನಗೂ ಇದೆ ಎಂದರು. 

ಇವರ ತನಿಖೆ ಬಗ್ಗೆ ಸಿದ್ದರಾಮಯ್ಯ ಅವರಲ್ಲೂ ಅನುಮಾನವಿದೆ. ಒಬ್ಬ ವ್ಯಕ್ತಿ ಹಾಗೂ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತೆ ಈ ಸ್ಟಿಂಗ್‌ ಆಪರೇಷನ್‌ ಮಾಡಿದ್ದಾರೆ. ಮಾಜಿ ಸಿಎಂಗೆ ಆಗಿರುವ ಅನ್ಯಾಯದ ಬಗ್ಗೆ ಅಸಲಿ ಅಪರಾಧಿಗಳನ್ನು ಹಿಡಿಯಬೇಕಲ್ಲವೇ? ಮೂಲವನ್ನು ಹುಡುಕುವುದು ಬಿಟ್ಟು ಇವರು ಬಾಲವನ್ನು ಬಡಿಯುತ್ತಾ ಕೂತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯತೀಂದ್ರ ಹೇಳಿದ್ದನ್ನು ಗೃಹ ಸಚಿವರು ಕೇಳಿಸಿಕೊಂಡಿಲ್ಲವೇ? ಸಿದ್ದರಾಮಯ್ಯ ಅವರು ಹೇಳಿದ್ದನ್ನೂ ಅವರು ಕೇಳಿರಬೇಕಲ್ಲವೇ? ಇಷ್ಟೆಲ್ಲ ಮಾತನಾಡುವ ಪ್ರಿಯಾಂಕ್‌ ಖರ್ಗೆ ಸ್ಟಿಂಗ್‌ ಆಪರೇಷನ್‌ ವಿಡಿಯೋಗಳನ್ನು ನೋಡಿರುವುದಿಲ್ಲವೇ? ಹಾಗಾದರೆ ಅವರು ಯಾರನ್ನು, ಯಾರ ಒತ್ತಡ, ಆದೇಶದ ಮೇರೆಗೆ ರಕ್ಷಣೆ ಮಾಡುತ್ತಿದ್ದಾರೆ ಎಂಬುದನ್ನು ಹೇಳಬೇಕಲ್ಲವೇ ಎಂದು ಪ್ರಶ್ನೆ ಮಾಡಿದರು. 

ಪವರ್ ಟಿವಿ ಕಚೇರಿಯಲ್ಲಿ ಆಗಿರುವ ವಿಕಾಸ್‌ ಎಂಬಾತನ ಅನುಮಾಸ್ಪದ ಸಾವಿನ ಬಗ್ಗೆ ಚರ್ಚೆಯಾಗುತ್ತಿದೆ. ಸ್ಟಿಂಗ್‌ ಮಾಡಿದ ಆ ವ್ಯಕ್ತಿಯ ಸಂಸ್ಥೆಯಲ್ಲಿ ಆಗಿರುವ ಘಟನೆ ಬಗ್ಗೆ ಗೃಹ ಸಚಿವರು ದಾಖಲೆ ಕೇಳುತ್ತಾರೆ. ಲಿಫ್ಟ್‌ ಬಿದ್ದು ಈ ಸಾವಾಗಿದೆ ಎನ್ನುತ್ತಾರೆ. ಸರಿಯಾದ ತನಿಖೆ ನಡೆಸದೆ ಇಡೀ ಪ್ರಕರಣವನ್ನೇ ಮುಚ್ಚಿ ಹಾಕಿದ್ದಾರೆ. ಆತನ ಮಾಧ್ಯಮ ಸಂಸ್ಥೆಯಲ್ಲಿ ಅನೇಕ ಅಕ್ರಮಗಳು, ಅಪರಾಧಗಳು ನಡೆದಿವೆ. ಕೋಲಾರ ಬಳಿ ಒಬ್ಬ ಡ್ರೈವರ್‌ ಕೊಲೆಯಾಗಿರುವ ಮಾಹಿತಿಗಳು ಬರುತ್ತಿವೆ. ಅಂತಹ ಕೊಲೆಗಡುಕರನ್ನು ಬಿಟ್ಟು ನಮ್ಮ ಹುಡುಗರ ಬೆನ್ನು ಬಿದ್ದಿದ್ದಾರೆ. ನಾನೇ ಸ್ಟಿಂಗ್‌ ಮಾಡಿದ್ದು, ಏನೀಗ? ನಾನು ಕಿಂಗ್‌ ಆಫ್‌ ಸ್ಟಿಂಗ್‌! ಎಂದು ಕೊಚ್ಚಿಕೊಂಡ ಕಿಡಿಗೇಡಿಯನ್ನು ಹಾಗೆಯೇ ಬಿಟ್ಟಿದ್ದೀರಿ. ಯಾಕೆ,'' ಎಂದು ಪ್ರಶ್ನಿಸಿದರು.