ಕಾಲೇಜು ಕ್ಯಾಂಟೀನ್ ಬಳಿ ಬಿಸಿಎ ವಿದ್ಯಾರ್ಥಿಗೆ ಚೂರಿ ಇರಿತ ; ಸಹಪಾಠಿ ಸೇರಿ 6 ಮಂದಿ ವಿರುದ್ಧ ಪ್ರಕರಣ, ಜಗಳ ಬಿಡಿಸಲು ಹೋಗಿದ್ದಕ್ಕೆ ಹಲ್ಲೆ

04-10-26 12:51 pm       HK News Staffer   ಕ್ರೈಂ

ಖಾಸಗಿ ಕಾಲೇಜಿನ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿಯೊಬ್ಬನ ಮೇಲೆ ಸಹಪಾಠಿ ಹಾಗೂ ಆತನ ಐವರು ಸಹಚರರು ಚೂರಿಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ. ಕಾಲೇಜು ಕ್ಯಾಂಟೀನ್‌ ಬಳಿ ನಡೆದ ದಾಳಿಯಲ್ಲಿ ಗಂಭೀರ ಗಾಯಗೊಂಡ ವಿದ್ಯಾರ್ಥಿಯನ್ನು ಮಂಗಳೂರು ನಗರದ ಸರ್ಕಾರಿ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಂಗಳೂರು, ಅ.4 : ಖಾಸಗಿ ಕಾಲೇಜಿನ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿಯೊಬ್ಬನ ಮೇಲೆ ಸಹಪಾಠಿ ಹಾಗೂ ಆತನ ಐವರು ಸಹಚರರು ಚೂರಿಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ. ಕಾಲೇಜು ಕ್ಯಾಂಟೀನ್‌ ಬಳಿ ನಡೆದ ದಾಳಿಯಲ್ಲಿ ಗಂಭೀರ ಗಾಯಗೊಂಡ ವಿದ್ಯಾರ್ಥಿಯನ್ನು ಮಂಗಳೂರು ನಗರದ ಸರ್ಕಾರಿ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಮಹಮ್ಮದ್ ಉನೈಸ್ ಎಂದು ಗುರುತಿಸಲಾಗಿದೆ. ಶನಿವಾರ ಬೆಳಗ್ಗೆ ಕಾಲೇಜಿಗೆ ಬಂದಿದ್ದ ಉನೈಸ್, ಸುಮಾರು 11.30ರ ವೇಳೆಗೆ ಕಾಲೇಜಿನ ಸಮೀಪದ ‘ಸಿಟಿ ಅರೇನಾ’ ಟರ್ಫ್‌ಗೆ ಕಬಡ್ಡಿ ಆಡಲು ತೆರಳಿದ್ದರು. ಈ ವೇಳೆ ಟರ್ಫ್ ಎದುರಿನ ರಸ್ತೆಯಲ್ಲಿ ಉನೈಸ್ ಅವರ ಸ್ನೇಹಿತ ಹಾಗೂ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿ ರಾಯಿಝ್ ಮತ್ತು ಅದೇ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿರುವ ಕಾಟಿಪಳ್ಳ ನಿವಾಸಿ ರಿಯಾನ್ ನಡುವೆ ಸಣ್ಣ ವಿಚಾರಕ್ಕೆ ಜಗಳ ನಡೆದಿದೆ.

ಜಗಳ ಬಿಡಿಸಲು ಉನೈಸ್ ಸೇರಿದಂತೆ ಕೆಲ ವಿದ್ಯಾರ್ಥಿಗಳು ಮಧ್ಯಪ್ರವೇಶಿಸಿದಾಗ, ರಿಯಾನ್ ಉನೈಸ್‌ಗೆ ಕೈಯಿಂದ ಹೊಡೆದಿದ್ದಾನೆ ಎಂದು ದೂರಲಾಗಿದೆ. ಬಳಿಕ ಉನೈಸ್ ಹಾಗೂ ಇತರ ವಿದ್ಯಾರ್ಥಿಗಳು ಕಾಲೇಜಿಗೆ ವಾಪಸ್ ತೆರಳಿದ್ದಾರೆ. ಮಧ್ಯಾಹ್ನ ಸುಮಾರು 1.45ರ ವೇಳೆಗೆ ಉನೈಸ್ ಕಾಲೇಜಿನ ಕ್ಯಾಂಟೀನ್ ಬಳಿ ನಿಂತಿದ್ದಾಗ, ಎರಡು ದ್ವಿಚಕ್ರ ವಾಹನಗಳಲ್ಲಿ ರಿಯಾನ್ ಹಾಗೂ ಐವರು ಸಹಚರರು ಅಲ್ಲಿಗೆ ಬಂದಿದ್ದಾರೆ. 

ಆರೋಪಿಗಳು ಉನೈಸ್ ಅವರನ್ನು ಸುತ್ತುವರಿದು ಏಕಾಏಕಿ ಹಲ್ಲೆ ನಡೆಸಿದ್ದು, “ನಿನ್ನನ್ನು ಕೊಲೆ ಮಾಡದೇ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ವೇಳೆ ಚೂರಿಯಿಂದ ಉನೈಸ್ ಅವರ ತಲೆ, ಬೆನ್ನು, ಎಡ ಕಿವಿ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಇರಿದು ಗಾಯಗೊಳಿಸಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಗಾಯಗೊಂಡಿದ್ದ ಉನೈಸ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ವೆನ್‌ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ದಾಳಿ ನಡೆಸಿದ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.