ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿಯು ಖಜಾನೆ ಮೇಲೆ ಕಣ್ಣು! 250 ಕೋಟಿ ಕೊಡುವಂತೆ ಸಿಎಸ್ ಪತ್ರ

25-09-26 03:11 pm       HK News Staffer   ಕರ್ನಾಟಕ

ಒಂದೆಡೆ ರಾಜ್ಯ ಸರ್ಕಾರದ ಆರ್ಥಿಕ ಸಂಕಷ್ಟ ಚರ್ಚೆಯಾಗುತ್ತಿದ್ದರೆ, ಇದೇ ವೇಳೆ, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕೋಟ್ಯಂತರ ನಿಧಿಯ ಮೇಲೆ ರಾಜ್ಯ ಸರ್ಕಾರ ಕಣ್ಣು ಹಾಕಿದೆ. ವಿಟಿಯು ಖಜಾನೆಯಲ್ಲಿರುವ 610 ಕೋಟಿ ರೂ. ಪೈಕಿ 250 ಕೋಟಿ ರೂ. ಮೊತ್ತವನ್ನು ಬೆಂಗಳೂರಿನ ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್‌ ಅಭಿವೃದ್ಧಿಗೆ ನೀಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ್ ಅವರಿಗೆ ಪತ್ರ ಬರೆದಿದ್ದು ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು, ಸೆ.25: ಒಂದೆಡೆ ರಾಜ್ಯ ಸರ್ಕಾರದ ಆರ್ಥಿಕ ಸಂಕಷ್ಟ ಚರ್ಚೆಯಾಗುತ್ತಿದ್ದರೆ, ಇದೇ ವೇಳೆ, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕೋಟ್ಯಂತರ ನಿಧಿಯ ಮೇಲೆ ರಾಜ್ಯ ಸರ್ಕಾರ ಕಣ್ಣು ಹಾಕಿದೆ. ವಿಟಿಯು ಖಜಾನೆಯಲ್ಲಿರುವ 610 ಕೋಟಿ ರೂ. ಪೈಕಿ 250 ಕೋಟಿ ರೂ. ಮೊತ್ತವನ್ನು ಬೆಂಗಳೂರಿನ ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್‌ ಅಭಿವೃದ್ಧಿಗೆ ನೀಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ್ ಅವರಿಗೆ ಪತ್ರ ಬರೆದಿದ್ದು ಚರ್ಚೆಗೆ ಕಾರಣವಾಗಿದೆ. 

ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ್ ಅವರಿಗೆ ಪತ್ರ ಬರೆದಿದ್ದು, ಬೆಂಗಳೂರಿನಲ್ಲಿರುವ ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆಯಾದ ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್​ ನಲ್ಲಿ ಮೂಲಸೌಕರ್ಯ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ವಿಟಿಯುನಿಂದ 250 ಕೋಟಿ ರೂ. ನೀಡುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ. ಆದರೆ, ಹಲವು ವರ್ಷಗಳಿಂದ ವಿಟಿಯುಗೆ ಸರ್ಕಾರದಿಂದ ಸಮರ್ಪಕ ಅನುದಾನ ಸಿಕ್ಕಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತನ್ನದೇ ಹಣವನ್ನು ಸರ್ಕಾರ ಕೇಳುತ್ತಿರುವುದಕ್ಕೆ ವಿಶ್ವವಿದ್ಯಾಲಯದ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಹೀಗಾಗಿ, ವಿಟಿಯು ಆಡಳಿತ ಮಂಡಳಿ ಸರ್ಕಾರದ ಸರ್ಕಾರದ ಈ ಬೇಡಿಕೆಯನ್ನು ನಿರಾಕರಿಸಿದೆ ಎನ್ನಲಾಗಿದೆ.

ವಿಟಿಯು ಖಜಾನೆಯಲ್ಲಿರುವ ಹಣದ ಪೈಕಿ ಸುಮಾರು 500 ಕೋಟಿ ಮೊತ್ತವನ್ನು ಬ್ಯಾಂಕಿನಲ್ಲಿ ಫಿಕ್ಸೆಡ್ ಡಿಪಾಸಿಟ್ ಇಡಲು ವಿಟಿಯು ಕುಲಪತಿ ಚಿಂತನೆ ನಡೆಸಿದ್ದರು ಎನ್ನಲಾಗಿದೆ. ಸರ್ಕಾರದ ಅನುದಾನ ಇಲ್ಲದಿದ್ದರೂ, ಮುಂದಿನ 10 ವರ್ಷಗಳ ಕಾಲ ಇದರಿಂದ ಬರುವ ಬಡ್ಡಿಯ ಹಣದಲ್ಲೇ ವಿಶ್ವವಿದ್ಯಾಲಯದ ಸಿಬ್ಬಂದಿಗೆ ವೇತನ ನೀಡಿ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು ಎಂಬುದು ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ್ ಅವರ ಯೋಜನೆಯಾಗಿತ್ತು. 

ಯಾಕಂದ್ರೆ, ಈ ಮೊತ್ತವು ವಿಟಿಯು ಖಜಾನೆಗೆ ಆಕಸ್ಮಿಕವಾಗಿ ಬಂದಿರುವ ಹಣವಲ್ಲ. 2012-13ರಲ್ಲಿ ಆದಾಯ ತೆರಿಗೆ ಇಲಾಖೆಯು ವಿವಿಯಲ್ಲಿ ತೆರಿಗೆ ವಿನಾಯಿತಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ವಿಶ್ವವಿದ್ಯಾಲಯದ ಕಾರ್ಪಸ್ ನಿಧಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಆನಂತರ, ಸುದೀರ್ಘ ಕಾನೂನು ಹೋರಾಟ ನಡೆದು ಶಿಕ್ಷಣ ಸಂಸ್ಥೆಗಳಿಗೆ ಸಿಗುವ ತೆರಿಗೆ ವಿನಾಯಿತಿಯ (12-A ನೋಂದಣಿ) ಅಗತ್ಯ ದಾಖಲೆಗಳನ್ನು ಒದಗಿಸಿ, ವಿಟಿಯು ಆಡಳಿತ ಮಂಡಳಿಯು ಹಣವನ್ನು ಮರಳಿ ಪಡೆದಿತ್ತು. ಹೋರಾಟದ ಫಲವಾಗಿ ಇತ್ತೀಚೆಗೆ ಆದಾಯ ತೆರಿಗೆ ಇಲಾಖೆಯು ಮುಟ್ಟುಗೋಲು ಹಾಕಿಕೊಂಡಿದ್ದ ಅಸಲು ಮತ್ತು ಬಡ್ಡಿ ಸೇರಿ ಒಟ್ಟು 610 ಕೋಟಿ ರೂ. ಮೊತ್ತವನ್ನು ವಿಶ್ವವಿದ್ಯಾಲಯಕ್ಕೆ ಮರಳಿಸಿತ್ತು.