ಬೋಳೂರು - ಬೆಂಗ್ರೆ ಸೇತುವೆ ಕಾಮಗಾರಿ ; ಕ್ರೇನ್ ಸಹಿತ ಕಾಂಕ್ರೀಟ್ ಸ್ಲ್ಯಾಬ್ ಜಾರಿ ಬಿದ್ದು ಮೀನುಗಾರಿಕಾ ಬೋಟ್ ಜಖಂ, ಇಬ್ಬರು ಕಾರ್ಮಿಕರಿಗೆ ಗಾಯ

27-11-26 12:28 pm       HK News Staffer   ಕರಾವಳಿ

ಬೋಳೂರಿನ ಮೀನುಗಾರಿಕಾ ದಕ್ಕೆ ಬಳಿಯಿಂದ ತಣ್ಣೀರುಬಾವಿ- ಬೆಂಗ್ರೆ ಕಡೆಗೆ ಸಂಪರ್ಕಿಸುವ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಸೇತುವೆ ಪಿಲ್ಲರ್ ಗೆ ಕಾಂಕ್ರೀಟ್ ಸ್ಲ್ಯಾಬ್ ಜೋಡಿಸುತ್ತಿದ್ದಾಗ ಜಾರಿ ಬಿದ್ದ ಘಟನೆ ನಡೆದಿದ್ದು ಕೆಳಗೆ ನಿಲ್ಲಿಸಿದ್ದ ಮೀನುಗಾರಿಕಾ ಬೋಟ್ ಜಖಂ ಆಗಿದೆ. ಸ್ಥಳದಲ್ಲಿದ್ದ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ.

ಮಂಗಳೂರು, ನ.27: ಬೋಳೂರಿನ ಮೀನುಗಾರಿಕಾ ದಕ್ಕೆ ಬಳಿಯಿಂದ ತಣ್ಣೀರುಬಾವಿ- ಬೆಂಗ್ರೆ ಕಡೆಗೆ ಸಂಪರ್ಕಿಸುವ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಸೇತುವೆ ಪಿಲ್ಲರ್ ಗೆ ಕಾಂಕ್ರೀಟ್ ಸ್ಲ್ಯಾಬ್ ಜೋಡಿಸುತ್ತಿದ್ದಾಗ ಜಾರಿ ಬಿದ್ದ ಘಟನೆ ನಡೆದಿದ್ದು ಕೆಳಗೆ ನಿಲ್ಲಿಸಿದ್ದ ಮೀನುಗಾರಿಕಾ ಬೋಟ್ ಜಖಂ ಆಗಿದೆ. ಸ್ಥಳದಲ್ಲಿದ್ದ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ. 

ಕಾಮಗಾರಿ ಭರದಿಂದ ನಡೆಯುತ್ತಿದ್ದು ಮುಗ್ರೋಡಿ ಕನ್ ಸ್ಟ್ರಕ್ಷನ್ನವರು ಕಾಮಗಾರಿ ನಿರ್ವಹಿಸುತ್ತಿದ್ದಾರೆ.‌ ಸೇತುವೆ ನಿರ್ಮಾಣಕ್ಕಾಗಿ ಪಿಲ್ಲರ್ ಹಾಕಲಾಗಿದ್ದು ಅದರ ಮೇಲಿನಿಂದ ಕಾಂಕ್ರೀಟ್ ಸ್ಲ್ಯಾಬ್ ಜೋಡಣೆ ಕಾರ್ಯ ಆಗುತ್ತಿದೆ. ಈ ವೇಳೆ, ಆಯತಪ್ಪಿ ಸ್ಲ್ಯಾಬ್ ಜಾರಿದ್ದು ಕ್ರೇನ್ ಸಹಿತ ನದಿ ನೀರಿಗೆ ಬಿದ್ದಿದೆ. ಹರೀಶ್ ಎಂಬವರಿಗೆ ಸೇರಿದ ಬೋಟನ್ನು ಸೇತುವೆ ಪಕ್ಕದಲ್ಲಿ ನಿಲ್ಲಿಸಲಾಗಿತ್ತು. ಅದರಲ್ಲಿ ಯಾವುದೇ ಕಾರ್ಮಿಕರು ಇಲ್ಲದ ಕಾರಣ ಅನಾಹುತ ತಪ್ಪಿದೆ.‌

ಸ್ಥಳದಲ್ಲಿದ್ದ ಇಬ್ಬರು ಕ್ರೇನ್ ಕಾರ್ಮಿಕರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ‌ಬೋಳೂರು ಕಡೆಯಿಂದ ಬೆಂಗ್ರೆ- ತಣ್ಣೀರುಬಾವಿ ಕಡೆಗೆ ನೇರ ವಾಹನ ಸಂಚಾರಕ್ಕಾಗಿ ಸೇತುವೆ ನಿರ್ಮಿಸಲಾಗುತ್ತಿದ್ದು ಇದು ಪೂರ್ಣಗೊಂಡರೆ ತಣ್ಣೀರುಬಾವಿಗೆ ಕುಳೂರು ಮೂಲಕ ಸುತ್ತಿಬಳಸಿ ಸಾಗುವ ಅನಿವಾರ್ಯತೆ ತಪ್ಪಲಿದೆ. ಇದೇ ಮಾರ್ಚ್ ಒಳಗಡೆ ಇದರ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.