Sowjanya case, Lokesh Jagalsar: ಸೌಜನ್ಯ ಪ್ರಕರಣದ ಮರು ತನಿಖೆ ; ಎಸ್ಐಟಿ ತನಿಖಾಧಿಕಾರಿಯಾಗಿ ಎಸ್ಪಿ ಲೋಕೇಶ್ ಜಗಲ್ಸಾರ್ ನೇಮಕ, ಸಹಾಯಕ ತನಿಖಾಧಿಕಾರಿಯಾಗಿ ಎಸಿಪಿ ಮನೋಜ್ ನಾಯ್ಕ್

02-10-26 10:25 am       HK News Staffer   ಕರಾವಳಿ

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ವೇಗ ಪಡೆದುಕೊಂಡಿದೆ. ಎಸ್‌ಐಟಿ ಮುಖ್ಯಸ್ಥ ಎನ್. ಶಶಿಕುಮಾರ್ ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆದ ಮೊದಲ ಸಭೆಯಲ್ಲಿ ಪ್ರಕರಣದ ತನಿಖಾಧಿಕಾರಿಯಾಗಿ ಹಿರಿಯ ಐಪಿಎಸ್ ಅಧಿಕಾರಿ, ಸಿಐಡಿ ಎಸ್ಪಿಯಾಗಿದ್ದ ಲೋಕೇಶ್ ಬಿ. ಜಗಲ್ಸರ್ ಅವರನ್ನು ನೇಮಕ ಮಾಡಲಾಗಿದೆ. ಇವರಿಗೆ ಸಹಾಯಕರಾಗಿ ಮಂಗಳೂರು ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ಅವರನ್ನು ಸಹಾಯಕ ತನಿಖಾಧಿಕಾರಿಯಾಗಿ ನೇಮಿಸಲಾಗಿದೆ.

ಮಂಗಳೂರು, ಅ.2 : ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ವೇಗ ಪಡೆದುಕೊಂಡಿದೆ. ಎಸ್‌ಐಟಿ ಮುಖ್ಯಸ್ಥ ಎನ್. ಶಶಿಕುಮಾರ್ ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆದ ಮೊದಲ ಸಭೆಯಲ್ಲಿ ಪ್ರಕರಣದ ತನಿಖಾಧಿಕಾರಿಯಾಗಿ ಹಿರಿಯ ಐಪಿಎಸ್ ಅಧಿಕಾರಿ, ಸಿಐಡಿ ಎಸ್ಪಿಯಾಗಿದ್ದ ಲೋಕೇಶ್ ಬಿ. ಜಗಲ್ಸರ್ ಅವರನ್ನು ನೇಮಕ ಮಾಡಲಾಗಿದೆ. ಇವರಿಗೆ ಸಹಾಯಕರಾಗಿ ಮಂಗಳೂರು ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ಅವರನ್ನು ಸಹಾಯಕ ತನಿಖಾಧಿಕಾರಿಯಾಗಿ ನೇಮಿಸಲಾಗಿದೆ.

ಲೋಕೇಶ್ ಬಿ. ಜಗಲ್ಸರ್ ಈವರೆಗೆ ಸಿಐಡಿಯಲ್ಲಿ ಎಸ್‌ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಎಸ್‌ಪಿಯಾಗಿ ಹಾಗೂ ಬೆಂಗಳೂರು ನಗರದಲ್ಲಿ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಸೌಜನ್ಯ ಪ್ರಕರಣದ ಹೊಸ ತನಿಖೆಗೆ ತಾಂತ್ರಿಕವಾಗಿ ಸಮರ್ಥ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ರಚಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ತನಿಖೆಯ ಹೊಣೆಗಾರಿಕೆಯನ್ನು ಲೋಕೇಶ್ ಜಗಲ್ಸರ್ ಅವರಿಗೆ ವಹಿಸಲಾಗಿದೆ ಎಂದು ತಿಳಿದುಬಂದಿದೆ.

ಲೋಕೇಶ್ ಜಗಲ್ಸರ್ ಇಂಜಿನಿಯರಿಂಗ್ ಪದವೀಧರರಾಗಿದ್ದು, ತಾಂತ್ರಿಕ ತನಿಖೆಯಲ್ಲಿನ ಪರಿಣತಿಯನ್ನು ಬಳಸಿಕೊಳ್ಳುವ ನಿರೀಕ್ಷೆಯಿದೆ. ಬೆಂಗಳೂರಿನಲ್ಲಿ ನಡೆದಿದ್ದ ಬಹುಕೋಟಿ ದರೋಡೆ ಪ್ರಕರಣಗಳ ತನಿಖೆಯಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸೌಜನ್ಯ ಪ್ರಕರಣದ ಮರುತನಿಖೆಗೆ ಈಗಾಗಲೇ ಎಸ್‌ಐಟಿಗೆ 16 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತನಿಖಾ ಸಹಾಯಕರಾಗಿ ನೇಮಿಸಲಾಗಿದೆ. ಮಂಗಳೂರು ಸಿಸಿಬಿಯ ಎಸಿಪಿ ಮನೋಜ್ ಕುಮಾರ್ ನಾಯ್ಕ್ ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಸೆಪ್ಟೆಂಬರ್ 21ರಂದು ಸುಪ್ರೀಂ ಕೋರ್ಟ್ ಪ್ರಕರಣದ ಮರು ತನಿಖೆಗೆ ನಿರ್ದೇಶನ ನೀಡಿತ್ತು. ಅದರಂತೆ ಸೆಪ್ಟೆಂಬರ್ 24ರಂದು ರಾಜ್ಯ ಸರ್ಕಾರ ಐವರು ಸದಸ್ಯರ ಎಸ್‌ಐಟಿ ರಚಿಸಿತ್ತು. ಐಜಿಪಿ ಎನ್. ಶಶಿಕುಮಾರ್ ತಂಡದ ಮುಖ್ಯಸ್ಥರಾಗಿದ್ದು, ಮಂಗಳೂರು ಪೊಲೀಸ್ ಆಯುಕ್ತ ಸಿಎಚ್ ಸುಧೀರ್ ಕುಮಾರ್ ರೆಡ್ಡಿ, ನಿಶಾ ಜೇಮ್ಸ್, ಲೋಕೇಶ್ ಜಗಲ್ಸರ್ ಹಾಗೂ ವೆಂಕಟೇಶ್ ಪ್ರಸನ್ನ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿತ್ತು. ಎಸ್‌ಐಟಿ ಅಕ್ಟೋಬರ್ 1ರಂದು ಮಂಗಳೂರಿನಲ್ಲಿ ಅಧಿಕೃತವಾಗಿ ಕಾರ್ಯಾರಂಭಿಸಿದ್ದು, ಹಳೆಯ ಡಿಸಿ ಕಚೇರಿ ಆವರಣದಲ್ಲಿ ಪ್ರತ್ಯೇಕ ಕಚೇರಿ ಸ್ಥಾಪಿಸಲಾಗಿದೆ. ಹಿಂದಿನ ಸಿಐಡಿ ಮತ್ತು ಸಿಬಿಐ ತನಿಖೆಯ ದಾಖಲೆಗಳು, ಸಾಕ್ಷ್ಯಗಳು ಹಾಗೂ ಪ್ರಕರಣದ ಇತರ ಅಂಶಗಳನ್ನು ಪರಿಶೀಲಿಸಿ ಮುಂದಿನ ತನಿಖಾ ಕಾರ್ಯತಂತ್ರ ರೂಪಿಸುವ ಕುರಿತು ಮೊದಲ ಸಭೆಯಲ್ಲಿ ಚರ್ಚಿಸಲಾಗಿದೆ.

ಸುಪ್ರೀಂ ಕೋರ್ಟ್ ನೀಡಿರುವ ಮೂರು ತಿಂಗಳ ಗಡುವಿನೊಳಗೆ ತನಿಖೆ ಪೂರ್ಣಗೊಳಿಸಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ವರದಿ ಸಲ್ಲಿಸುವ ಜವಾಬ್ದಾರಿ ಎಸ್‌ಐಟಿಗೆ ಇದೆ.

The reinvestigation into the 2012 rape and murder of Sowjanya in Dharmasthala has gained momentum, with senior IPS officer Lokesh B. Jagalsar appointed as the investigating officer. Mangaluru CCB ACP Manoj Kumar Naik has been appointed as the assistant investigating officer. The appointments were made during the first meeting of the Special Investigation Team (SIT) in Mangaluru.