ರಾಮನಗರದ ನಿರ್ಮಾಣ ಹಂತದ ಮನೆಯಲ್ಲಿ ನಕಲಿ ನೋಟು ತಯಾರಿ ಜಾಲ ಪತ್ತೆ ; ಏಳು ಮಂದಿ ಬಂಧನ, 200, 500ರ ಮುದ್ರಿತ ನೋಟು ವಶಕ್ಕೆ

31-08-26 09:50 pm       HK News Staffer   ಕ್ರೈಂ

ನಿರ್ಮಾಣ ಹಂತದ ಮನೆಯೊಂದರಲ್ಲಿ ಅಕ್ರಮವಾಗಿ ಖೋಟಾ ನೋಟುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಅಂತರ ಜಿಲ್ಲಾ ಖದೀಮರ ಜಾಲವನ್ನು ರಾಮನಗರ ಜಿಲ್ಲೆಯ ಐಜೂರು ಪೊಲೀಸರು ಬಯಲಿಗೆಳೆದಿದ್ದು, ಏಳು ಮಂದಿಯನ್ನು ಬಂಧಿಸಿದ್ದಾರೆ.

ಬೆಂಗಳೂರು, ಆ.31: ನಿರ್ಮಾಣ ಹಂತದ ಮನೆಯೊಂದರಲ್ಲಿ ಅಕ್ರಮವಾಗಿ ಖೋಟಾ ನೋಟುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಅಂತರ ಜಿಲ್ಲಾ ಖದೀಮರ ಜಾಲವನ್ನು ರಾಮನಗರ ಜಿಲ್ಲೆಯ ಐಜೂರು ಪೊಲೀಸರು ಬಯಲಿಗೆಳೆದಿದ್ದು, ಏಳು ಮಂದಿಯನ್ನು ಬಂಧಿಸಿದ್ದಾರೆ. 

ರಾಮನಗರದ ಶಾಂತಿಲಾಲ್ ಲೇಔಟ್‌ನಲ್ಲಿರುವ ಸಂತೋಷ್ ಎಂಬವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡದಲ್ಲಿ ಅಕ್ರಮ ದಂಧೆ ನಡೆಯುತ್ತಿತ್ತು. ಯಾರಿಗೂ ಸಂಶಯ ಬಾರದಂತೆ ಖಾಲಿ ಕಟ್ಟಡವನ್ನು ಅಡ್ಡೆ ಮಾಡಿಕೊಂಡಿದ್ದ ಗ್ಯಾಂಗ್, ನೋಟು ಮುದ್ರಣ ಮಾಡುತ್ತಿದ್ದರು. ಖಚಿತ ಮಾಹಿತಿ ಬೆನ್ನತ್ತಿದ ಐಜೂರು ಪೊಲೀಸರು ದಿಢೀರ್ ದಾಳಿ ನಡೆಸಿ ಜಾಲವನ್ನು ಭೇದಿಸಿದ್ದಾರೆ. ಬಂಧಿತರನ್ನು ಸಂತೋಷ್, ಸಂಪತ್, ಗೋವಿಂದರಾಜ್, ರೇಣುಕಾರಾಜ್, ರಾಜೇಶ್, ಶಿವರಾಜ್ ಮತ್ತು ಸತೀಶ್ ಎಂದು ಗುರುತಿಸಲಾಗಿದೆ. 

ಹೊರಗಿನಿಂದ ಕಾಗದದ ಶೀಟ್‌ಗಳನ್ನು ತರಿಸಿ, ಅವುಗಳಿಗೆ ನಿರ್ದಿಷ್ಟ ಕೆಮಿಕಲ್ ಲೇಪಿಸಿ ಅಸಲಿ ನೋಟಿನಂತೆ ಕಾಣುವ 200 ಹಾಗೂ 500 ರೂ. ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸಲಾಗುತ್ತಿತ್ತು. ಮುದ್ರಿತ ಶೀಟ್‌ಗಳನ್ನು ಅಚ್ಚುಕಟ್ಟಾಗಿ ಕತ್ತರಿಸಿ, ಬಂಡಲ್‌ಗಳನ್ನಾಗಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದರು. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಮತ್ತು ಬೆರಳಚ್ಚು ತಜ್ಞರನ್ನೊಳಗೊಂಡ ತಂಡ ಭೇಟಿ ನೀಡಿ, ನೋಟು ಮುದ್ರಣಕ್ಕೆ ಬಳಸಿದ್ದ ರಾಸಾಯನಿಕ, ಕಾಗದ ಹಾಗೂ ಇತರೆ ಮಹತ್ವದ ಸಾಕ್ಷ್ಯಗಳನ್ನು ವಶಕ್ಕೆ ಪಡೆದಿದೆ. 

ಕರಾವಳಿಯಲ್ಲಿ ನಕಲಿ ನೋಟು ತಯಾರು ಜಾಲ ಪತ್ತೆ
ಇನ್ನು ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಅಡೆಂಜ ಎಂಬಲ್ಲಿ ನಕಲಿ ನೋಟು ತಯಾರಿಸಲಾಗುತ್ತಿತ್ತು  ಎಂಬ ಶಾಕಿಂಗ್ ವಿಚಾರ ಬಯಲಾಗಿತ್ತು. ಮಹಮ್ಮದ್ ಇದ್ರೀಸ್ ಎಂಬಾತನ ನೂತನ ಕಟ್ಟಡದಲ್ಲಿ ಈ ನಕಲಿ ಖೋಟಾ ನೋಟು ದಂಧೆ ನಡೆಯುತ್ತಿತ್ತು. ಮಾಹಿತಿ ತಿಳಿದ ಉಪ್ಪಿನಂಗಡಿ ಪೊಲೀಸರು ಸುಮಾರು ಮಧ್ಯರಾತ್ರಿ 1 ಗಂಟೆಗೆ ದಾಳಿ ನಡೆಸಿ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದರು.