ತುಮಕೂರು ; ಓವರ್‌ಟೇಕ್‌ ಭರದಲ್ಲಿ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ, ನಾಲ್ವರ ಬಲಿ

29-08-26 11:40 am       HK News Staffer   ಕ್ರೈಂ

ಓವರ್‌ಟೇಕ್‌ ಮಾಡುವ ವೇಳೆ ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ನಾಲ್ವರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗೇಟ್‌ ಬಳಿ ನಡೆದಿದೆ.

ತುಮಕೂರು, ಆಗಸ್ಟ್ 29: ಓವರ್‌ಟೇಕ್‌ ಮಾಡುವ ವೇಳೆ ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ನಾಲ್ವರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗೇಟ್‌ ಬಳಿ ನಡೆದಿದೆ.

ಚಿಕ್ಕನಾಯಕನಹಳ್ಳಿ ಕಡೆಯಿಂದ ಬರುತ್ತಿದ್ದ ವೋಕ್ಸ್‌ವ್ಯಾಗನ್‌ ಕಾರು ಹಾಗೂ ತುರುವೇಕೆರೆ ಕಡೆಯಿಂದ ಬರುತ್ತಿದ್ದ ಕಿಯಾ ಸಾನೆಟ್‌ ಕಾರು ನಡುವೆ ಅಪಘಾತ ಸಂಭವಿಸಿದೆ. ವೋಕ್ಸ್‌ವ್ಯಾಗನ್‌ ಕಾರು ಓವರ್‌ಟೇಕ್‌ ಮಾಡುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಕಿಯಾ ಸಾನೆಟ್‌ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಅಪಘಾತದ ರಭಸಕ್ಕೆ ಎರಡೂ ಕಾರುಗಳು ಜಖಂಗೊಂಡಿದ್ದು, ಎರಡೂ ವಾಹನಗಳಲ್ಲಿದ್ದ ತಲಾ ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ದಾವುದ್ ಪಾಷ (38), ಆನಂ (3), ಅನಿಲ್ (32) ಹಾಗೂ ವಿವೇಕ್ (31) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಯಾಸ್ಮಿನತಾಬ್ (21), ಸೀಮಾ (64), ಆಸ್ಮ (38) ಸೇರಿದಂತೆ ನಾಲ್ವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣ ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತಕ್ಕೂ ಮುನ್ನ ಚಿಕ್ಕನಾಯಕನಹಳ್ಳಿ ಕಡೆಯಿಂದ ಬರುತ್ತಿದ್ದ ವೋಕ್ಸ್‌ವ್ಯಾಗನ್‌ ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಮತ್ತೊಂದೆಡೆ ತುರುವೇಕೆರೆ ಕಡೆಯಿಂದ ಬರುತ್ತಿದ್ದ ಕಿಯಾ ಸಾನೆಟ್‌ ಕಾರಿನಲ್ಲಿ ಐವರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಓವರ್‌ಟೇಕ್‌ ಮಾಡುವ ಸಂದರ್ಭದಲ್ಲಿ ಸಂಭವಿಸಿದ ಈ ಅಪಘಾತದಲ್ಲಿ ನಾಲ್ವರು ಜೀವ ಕಳೆದುಕೊಂಡಿದ್ದು, ಕುಟುಂಬಸ್ಥರಲ್ಲಿ ತೀವ್ರ ಆಕ್ರಂದನ ಮನೆ ಮಾಡಿದೆ.