ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿಯೋ ಮುಂದಿಟ್ಟು ಹಣಕ್ಕಾಗಿ ಕಿರುಕುಳ, ಗಂಡ- ಹೆಂಡತಿ ಸೇರಿ ಮೂವರ ಬಂಧನ

24-08-26 02:25 pm       HK News Staffer   ಕ್ರೈಂ

ಕುಂಬಳೆಯ ಮುಸ್ಲಿಂ ವ್ಯಾಪಾರಿಯೊಬ್ಬರನ್ನು ಹನಿಟ್ರ್ಯಾಪ್‌ ಜಾಲಕ್ಕೆ ಸಿಲುಕಿಸಿ ವೀಡಿಯೊ ಮಾಡಿ ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಆರೋಪದಲ್ಲಿ ದಂಪತಿ ಸೇರಿದಂತೆ ಮೂವರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

ಕಾಸರಗೋಡು, ಆ.24: ಕುಂಬಳೆಯ ಮುಸ್ಲಿಂ ವ್ಯಾಪಾರಿಯೊಬ್ಬರನ್ನು ಹನಿಟ್ರ್ಯಾಪ್‌ ಜಾಲಕ್ಕೆ ಸಿಲುಕಿಸಿ ವೀಡಿಯೊ ಮಾಡಿ ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಆರೋಪದಲ್ಲಿ ದಂಪತಿ ಸೇರಿದಂತೆ ಮೂವರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

ಕುಬಣೂರು ನಿವಾಸಿ ರಿಜ್ವಾನ, ಆಕೆಯ ಪತಿ ಹಸನ್ ಆಸಿಫ್ ಹಾಗೂ ಇವರ ಸಂಬಂಧಿ ಸಿರಾಜ್ ಬಂಧಿತ ಆರೋಪಿಗಳು. 64 ವರ್ಷದ ವ್ಯಾಪಾರಿಯನ್ನು ಹನಿಟ್ರ್ಯಾಪ್‌ಗೆ ಸಿಲುಕಿಸಿ ಹಣ ವಸೂಲಿ ಮಾಡಲಾಗುತ್ತಿತ್ತು. ಆರೋಪಿಗಳು ದೊಡ್ಡ ಮೊತ್ತಕ್ಕೆ ಬೇಡಿಕೆ ಇಟ್ಟು ಬ್ಲ್ಯಾಕ್ಮೇಲ್ ಮಾಡಿದ ಹಿನ್ನೆಲೆಯಲ್ಲಿ ಸಂತ್ರಸ್ತ ವ್ಯಕ್ತಿ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದರು.

ಇದೇ ಆಗಸ್ಟ್ 16ರಂದು ತನ್ನ 5,000 ರೂ. ಸಾಲ ಮರಳಿಸುವುದಾಗಿ ನಂಬಿಸಿದ ರಿಜ್ವಾನ, ವ್ಯಾಪಾರಿಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದಳು. ಬಳಿಕ ಆತನನ್ನು ಬೆಡ್‌ರೂಮ್‌ಗೆ ಕರೆದೊಯ್ದಿದ್ದು ಈ ವೇಳೆ ಅವಿತುಕೊಂಡಿದ್ದ ಉಳಿದ ಆರೋಪಿಗಳು ಫೋಟೋ ಮತ್ತು ವೀಡಿಯೊಗಳನ್ನು ತೆಗೆದಿದ್ದು ಹಲ್ಲೆಗೈದು ಕಿರುಕುಳ ನೀಡಿದ್ದರು.‌

ನಂತರ, ವಿಡಿಯೋ ದೃಶ್ಯಗಳನ್ನು ಹರಿಯ ಬಿಡುವುದಾಗಿ ಬೆದರಿಸಿ ವ್ಯಾಪಾರಿಯಿಂದ ಹಣ, ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡಿದ್ದಾರೆ. ಆರಂಭದಲ್ಲಿ 1,500 ರೂ. ನಗದು, ಒಂದು ಮೊಬೈಲ್ ಹಾಗೂ ಕಾರಿನ ಕೀಲಿಯನ್ನು ಕಿತ್ತುಕೊಂಡ ಆರೋಪಿಗಳು, ಬಳಿಕ ಕಾರಿನಲ್ಲಿದ್ದ 25,000 ರೂ. ಮೌಲ್ಯದ ಮತ್ತೊಂದು ಮೊಬೈಲ್ ಮತ್ತು ಎರಡು ಎಟಿಎಂ ಕಾರ್ಡ್‌ಗಳನ್ನು ದೋಚಿದ್ದಾರೆ. 

ಇದಲ್ಲದೆ, ಕೊಲ್ಲುವುದಾಗಿ ಬೆದರಿಸಿ ಎಟಿಎಂ ಪಿನ್ ನಂಬರ್ ಪಡೆದು ಬ್ಯಾಂಕ್ ಖಾತೆಯಿಂದ 7,200 ರೂ. ಡ್ರಾ ಮಾಡಿದ್ದಾರೆ. ಆಗಸ್ಟ್ 17ರಂದು ವ್ಯಾಪಾರಿಯ ಅಂಗಡಿಗೆ ನೇರವಾಗಿ ತೆರಳಿ ಮತ್ತೆ 5,000 ರೂ. ಕೊಡುವಂತೆ ಕೇಳಿ ವಸೂಲಿ ಮಾಡಿದ್ದಾರೆ. ಇದರ ಬಳಿಕ 2 ಲಕ್ಷ ರೂ. ನೀಡುವಂತೆ ಆರೋಪಿಗಳು ಪಟ್ಟು ಹಿಡಿದಿದ್ದರು. ಇದರಿಂದಾಗಿ ಮಾನಸಿಕ ಹಿಂಸೆಗೀಡಾಗಿ ವ್ಯಾಪಾರಿ ನೇರವಾಗಿ ಕುಂಬಳೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪ್ರಕರಣ ದಾಖಲಿಸಿದ ಪೊಲೀಸರು ಮೂವರನ್ನೂ ಬಂಧಿಸಿದ್ದಾರೆ.