ಬ್ರಹ್ಮಾವರದಲ್ಲಿ ಮೀಟರ್ ಬಡ್ಡಿ ಸಾಲ ನೀಡಿ ಕಿರುಕುಳ ; ಬೈಕ್ ಕಸಿದು ಜಾಮೀನುದಾರನಿಗೆ ಹಲ್ಲೆ, ಮಂಗಳೂರಿನ ಮೂವರ ಬಂಧನ

14-08-26 10:22 am       HK News Staffer   ಕ್ರೈಂ

ಅಧಿಕ ಬಡ್ಡಿ ವಿಧಿಸಿ ಸಾಲ ನೀಡಿ, ಕಂತು ಪಾವತಿಸದೇ ಇದ್ದುದಕ್ಕೆ ಕಿರುಕುಳ ನೀಡಿದ್ದಲ್ಲದೆ, ಬಲವಂತವಾಗಿ ದ್ವಿಚಕ್ರ ವಾಹನ ಕಸಿದು ಹಲ್ಲೆ ನಡೆಸಿದ ಆರೋಪದಲ್ಲಿ ಮಂಗಳೂರಿನ ಫೈನಾನ್ಸ್ ಸಂಸ್ಥೆಯ ಮೂವರು ಸಿಬ್ಬಂದಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಕುಳಾಯಿ ನಿವಾಸಿ ಸಂದೀಪ್ ಶೆಟ್ಟಿ, ಕಾವೂರಿನ ವಿಜೀತ್ ಶೆಟ್ಟಿ ಹಾಗೂ ಮಳವೂರಿನ ಸಂಪತ್ ಬಂಧಿತ ಆರೋಪಿಗಳು.

ಉಡುಪಿ, ಆ.14: ಅಧಿಕ ಬಡ್ಡಿ ವಿಧಿಸಿ ಸಾಲ ನೀಡಿ, ಕಂತು ಪಾವತಿಸದೇ ಇದ್ದುದಕ್ಕೆ ಕಿರುಕುಳ ನೀಡಿದ್ದಲ್ಲದೆ, ಬಲವಂತವಾಗಿ ದ್ವಿಚಕ್ರ ವಾಹನ ಕಸಿದು ಹಲ್ಲೆ ನಡೆಸಿದ ಆರೋಪದಲ್ಲಿ ಮಂಗಳೂರಿನ ಫೈನಾನ್ಸ್ ಸಂಸ್ಥೆಯ ಮೂವರು ಸಿಬ್ಬಂದಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಕುಳಾಯಿ ನಿವಾಸಿ ಸಂದೀಪ್ ಶೆಟ್ಟಿ, ಕಾವೂರಿನ ವಿಜೀತ್ ಶೆಟ್ಟಿ ಹಾಗೂ ಮಳವೂರಿನ ಸಂಪತ್ ಬಂಧಿತ ಆರೋಪಿಗಳು. 

ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಜಾಲು ಪರಿಸರದಲ್ಲಿ ಈ ಫೈನಾನ್ಸ್ ಸಂಸ್ಥೆಯು ಅಧಿಕ ಬಡ್ಡಿ ದರದಲ್ಲಿ ಸಾಲ ನೀಡುತ್ತಿತ್ತು. ಸಾಲದ ಕಂತು ಬಾಕಿ ಉಳಿದಾಗ ಸಾರ್ವಜನಿಕರನ್ನು ಪೀಡಿಸುತ್ತಿದ್ದರೆಂದು ಆರೋಪಿಸಲಾಗಿದೆ. ಇತ್ತೀಚೆಗೆ ಸಾಲದ ಕಂತು ಬಾಕಿ ಇಟ್ಟ ಕಾರಣಕ್ಕೆ ಕುಂಜಾಲಿನ ಗಣೇಶ್ ಗಾಣಿಗ ಎಂಬವರ ಮೋಟಾರು ಸೈಕಲನ್ನು ಬಲವಂತವಾಗಿ ಕಸಿದುಕೊಂಡು ಹೋಗಿದ್ದರು. ಇದನ್ನು ಪ್ರಶ್ನಿಸಿದ ಜಾಮೀನುದಾರ ರಾಜೇಶ್ ನಾಯ್ಕ್ ಅವರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದರು. 

ರಾಜೇಶ್ ನಾಯ್ಕ್ ನೀಡಿದ ದೂರಿನನ್ವಯ ‘ಸಾಲಕ್ಕೆ ಅಧಿಕ ಬಡ್ಡಿ ವಿಧಿಸುವುದನ್ನು ನಿಷೇಧಿಸುವ ಕಾಯ್ದೆ-2004’ ರ ಕಲಂ 3 ಮತ್ತು 4ರ ಅಡಿಯಲ್ಲಿ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರು ಆರೋಪಿಗಳಾದ ಸಂದೀಪ್ ಶೆಟ್ಟಿ ಹಾಗೂ ವಿಜೀತ್ ಶೆಟ್ಟಿಯನ್ನು ಆಗಸ್ಟ್ 6ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿ ಸಂಪತ್‌ನನ್ನು ಆಗಸ್ಟ್ 13ರಂದು ಬಂಧಿಸಲಾಗಿದೆ. ಆರೋಪಿಗಳು ಬಲವಂತವಾಗಿ ಕಸಿದುಕೊಂಡಿದ್ದ ಮೋಟಾರು ಸೈಕಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಪಡಿಸಿದ್ದಾರೆ.