ದಕ್ಷಿಣ ಕನ್ನಡ ಡಿಸಿ ಸರ್ಕಾರಿ ನಿವಾಸದ ನಾಮಫಲಕದಲ್ಲಿ ಪತ್ನಿಯ ಹೆಸರು; ಮುಖ್ಯ ಕಾರ್ಯದರ್ಶಿಗೆ ದೂರು, ತನಿಖೆಗೆ ಪ್ರತಿಭಾ ಕುಳಾಯಿ ಆಗ್ರಹ

12-08-26 11:32 am       HK News Staffer   ಕರಾವಳಿ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಅವರ ಅಧಿಕೃತ ಸರ್ಕಾರಿ ನಿವಾಸದ ನಾಮಫಲಕದಲ್ಲಿ ಪತ್ನಿಯ ಹೆಸರನ್ನು ಪ್ರದರ್ಶಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ನಾಮಫಲಕದ ತಯಾರಿಕೆ ಹಾಗೂ ಅಳವಡಿಕೆಗೆ ಸರ್ಕಾರಿ ಅನುದಾನ ಬಳಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ.

ಮಂಗಳೂರು , ಆಗಸ್ಟ್ 11: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಅವರ ಅಧಿಕೃತ ಸರ್ಕಾರಿ ನಿವಾಸದ ನಾಮಫಲಕದಲ್ಲಿ ಪತ್ನಿಯ ಹೆಸರನ್ನು ಪ್ರದರ್ಶಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ನಾಮಫಲಕದ ತಯಾರಿಕೆ ಹಾಗೂ ಅಳವಡಿಕೆಗೆ ಸರ್ಕಾರಿ ಅನುದಾನ ಬಳಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ.

ಹುದ್ದೆಯ ಆಧಾರದ ಮೇಲೆ ಸರ್ಕಾರಿ ಅಧಿಕೃತ ನಿವಾಸವನ್ನು ಹಂಚಿಕೆ ಮಾಡಲಾಗುತ್ತದೆ. ಹೀಗಾಗಿ ನಿವಾಸದ ನಾಮಫಲಕದಲ್ಲಿ ಸಾಮಾನ್ಯವಾಗಿ ಅಧಿಕಾರಿಯ ಹೆಸರು ಹಾಗೂ ಅವರು ಹೊಂದಿರುವ ಹುದ್ದೆಯನ್ನು ಮಾತ್ರ ನಮೂದಿಸುವುದು ಆಡಳಿತಾತ್ಮಕ ಶಿಷ್ಟಾಚಾರವಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದ ನಾಮಫಲಕದಲ್ಲಿ ಪತ್ನಿಯ ಹೆಸರನ್ನೂ ಸೇರಿಸಿರುವುದು ನಿಯಮಾವಳಿಗೆ ವಿರುದ್ಧವಾಗಿದೆ ಎಂದು ಪ್ರತಿಭಾ ಕುಳಾಯಿ ಅವರು ತಮ್ಮ ಮನವಿಯಲ್ಲಿ ಆರೋಪಿಸಿದ್ದಾರೆ.

ಸರ್ಕಾರಿ ಹಣ ಬಳಕೆಯಾಯ್ತಾ?

ನಾಮಫಲಕದ ತಯಾರಿಕೆ ಹಾಗೂ ಅಳವಡಿಕೆಗೆ ಸಾರ್ವಜನಿಕ ಹಣವನ್ನು ಬಳಸಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಸಂಬಂಧ ನಾಮಫಲಕ ತಯಾರಿಕೆಗೆ ಸಂಬಂಧಿಸಿದ ವೆಚ್ಚದ ದಾಖಲೆಗಳು, ಬಿಲ್‌ಗಳು ಹಾಗೂ ಅಗತ್ಯ ಶಿಷ್ಟಾಚಾರದ ಮಂಜೂರಾತಿ ಪಡೆದಿರುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ.

ಒಂದು ವೇಳೆ ನಾಮಫಲಕದ ತಯಾರಿಕೆ ಅಥವಾ ಅಳವಡಿಕೆಗೆ ಸರ್ಕಾರಿ ಹಣವನ್ನು ನಿಯಮಬಾಹಿರವಾಗಿ ಬಳಸಿರುವುದು ಕಂಡುಬಂದರೆ, ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಜೊತೆಗೆ ವಿವಾದಿತ ನಾಮಫಲಕವನ್ನು ತೆರವುಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸರ್ಕಾರಿ ನಿವಾಸಗಳಿಗೆ ಏಕರೂಪದ ನಿಯಮಕ್ಕೆ ಆಗ್ರಹ

ಸರ್ಕಾರಿ ನಿವಾಸಗಳ ನಾಮಫಲಕಗಳಿಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಏಕರೂಪದ ಮಾರ್ಗಸೂಚಿ ರೂಪಿಸಿ, ಅಧಿಕಾರಿಗಳ ಅಧಿಕೃತ ನಿವಾಸಗಳಲ್ಲಿ ಯಾವ ಹೆಸರು ಹಾಗೂ ಹುದ್ದೆಯನ್ನು ನಮೂದಿಸಬೇಕು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಪ್ರತಿಭಾ ಮನವಿಯಲ್ಲಿ ಆಗ್ರಹಿಸಿದ್ದಾರೆ.

ನಾಮಫಲಕದಲ್ಲಿ ಪತ್ನಿಯ ಹೆಸರು ಸೇರಿಸಿರುವುದು ಮಾತ್ರವಲ್ಲದೆ, ಅದಕ್ಕೆ ಸಾರ್ವಜನಿಕ ಹಣ ಬಳಕೆಯಾಗಿದೆಯೇ ಎಂಬುದನ್ನೂ ಪರಿಶೀಲಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ, ನಿಯಮ ಉಲ್ಲಂಘನೆಯಾಗಿದ್ದರೆ ಕ್ರಮ ಕೈಗೊಳ್ಳಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ.