ಸುರತ್ಕಲ್ ನಲ್ಲಿ ಹೈಟೆನ್ಷನ್‌ ತಂತಿಗೆ ಕಬ್ಬಿಣದ ರಾಡ್‌ ತಾಗಿ ದುರಂತ ; ಸ್ಥಳದಲ್ಲೇ ಗುತ್ತಿಗೆದಾರ ಸಾವು

11-08-26 01:04 pm       HK News Staffer   ಕ್ರೈಂ

ಶೀಟ್‌ ಮೇಲ್ಛಾವಣಿ ನಿರ್ಮಾಣ ಕಾಮಗಾರಿ ವೇಳೆ ಕಬ್ಬಿಣದ ರಾಡ್‌ ಹೈಟೆನ್ಷನ್‌ ವಿದ್ಯುತ್‌ ತಂತಿಗೆ ತಾಗಿ ಗುತ್ತಿಗೆದಾರರೊಬ್ಬರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಕೃಷ್ಣಾಪುರ 6ನೇ ಬ್ಲಾಕ್‌ನಲ್ಲಿ ಸಂಭವಿಸಿದೆ. ಮೃತರನ್ನು ಕೃಷ್ಣಾಪುರ ಚಕ್ರವರ್ತಿ ಕ್ರೀಡಾಂಗಣ ಸಮೀಪದ ನಿವಾಸಿ, ಶೀಟ್‌ ಮೇಲ್ಛಾವಣಿ ನಿರ್ಮಾಣ ಗುತ್ತಿಗೆದಾರ ಭಾಸ್ಕರ ಎಂದು ಗುರುತಿಸಲಾಗಿದೆ.

ಸುರತ್ಕಲ್, ಆಗಸ್ಟ್‌ 11: ಶೀಟ್‌ ಮೇಲ್ಛಾವಣಿ ನಿರ್ಮಾಣ ಕಾಮಗಾರಿ ವೇಳೆ ಕಬ್ಬಿಣದ ರಾಡ್‌ ಹೈಟೆನ್ಷನ್‌ ವಿದ್ಯುತ್‌ ತಂತಿಗೆ ತಾಗಿ ಗುತ್ತಿಗೆದಾರರೊಬ್ಬರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಕೃಷ್ಣಾಪುರ 6ನೇ ಬ್ಲಾಕ್‌ನಲ್ಲಿ ಸಂಭವಿಸಿದೆ. ಮೃತರನ್ನು ಕೃಷ್ಣಾಪುರ ಚಕ್ರವರ್ತಿ ಕ್ರೀಡಾಂಗಣ ಸಮೀಪದ ನಿವಾಸಿ, ಶೀಟ್‌ ಮೇಲ್ಛಾವಣಿ ನಿರ್ಮಾಣ ಗುತ್ತಿಗೆದಾರ ಭಾಸ್ಕರ ಎಂದು ಗುರುತಿಸಲಾಗಿದೆ.

ಕೃಷ್ಣಾಪುರ 6ನೇ ಬ್ಲಾಕ್‌ನಲ್ಲಿರುವ ವಸತಿ ಸಮುಚ್ಚಯವೊಂದರಲ್ಲಿ ತಗುಡು ಶೀಟ್‌ ಮೇಲ್ಛಾವಣಿ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿಯ ಭಾಗವಾಗಿ ಭಾಸ್ಕರ ಅವರು ಕಬ್ಬಿಣದ ರಾಡ್‌ ಬಳಸಿ ಅಳತೆ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಕಬ್ಬಿಣದ ರಾಡ್‌ ಅನ್ನು ಕಂಕುಳಲ್ಲಿಟ್ಟುಕೊಂಡು ತಿರುಗುತ್ತಿದ್ದ ಸಂದರ್ಭದಲ್ಲಿ, ಕಟ್ಟಡದ ಪಕ್ಕದಲ್ಲೇ ಹಾದುಹೋಗಿದ್ದ ಹೈಟೆನ್ಷನ್‌ ವಿದ್ಯುತ್‌ ತಂತಿಗೆ ರಾಡ್‌ ಆಕಸ್ಮಿಕವಾಗಿ ಸ್ಪರ್ಶಿಸಿದೆ ಎನ್ನಲಾಗಿದೆ.

ವಿದ್ಯುತ್‌ ತಂತಿಗೆ ರಾಡ್‌ ತಾಗುತ್ತಿದ್ದಂತೆ ಭಾಸ್ಕರ ಅವರ ದೇಹದ ಮೂಲಕ ತೀವ್ರ ಪ್ರಮಾಣದ ವಿದ್ಯುತ್‌ ಪ್ರವಹಿಸಿದ್ದು, ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕ್ಷಣಾರ್ಧದಲ್ಲಿ ಸಂಭವಿಸಿದ ಈ ದುರ್ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಘಟನೆಯ ಮಾಹಿತಿ ತಿಳಿದು ಸುರತ್ಕಲ್‌ ಪೊಲೀಸ್‌ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ಭಾಸ್ಕರ ಅವರ ಪುತ್ರ ನೀಡಿದ ದೂರಿನ ಆಧಾರದ ಮೇಲೆ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.