ಪೊಲೀಸ್ ಕಮಿಷನರ್ ಕಚೇರಿಯಲ್ಲಿದ್ದುಕೊಂಡೇ ನಾಲ್ಕು ಪಟ್ಟು ಹಣ ಲಪಟಾಯಿಸಲು ಯತ್ನ; ಮಹಿಳಾ ಸಿಬ್ಬಂದಿ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಎಫ್‌ಐಆರ್, ಗಂಡನ ವೈದ್ಯಕೀಯ ವೆಚ್ಚದ ಕ್ಲೈಮ್ ಹೆಸರಲ್ಲಿ ತಗ್ಲಾಕ್ಕೊಂಡ್ರು!

09-08-26 04:47 pm       HK News Staffer   ಕ್ರೈಂ

ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿದ್ದುಕೊಂಡೇ ಮಹಿಳಾ ಸಿಬಂದಿಯೊಬ್ಬರು ತನ್ನ ಗಂಡನ ಚಿಕಿತ್ಸೆಯ ನೆಪದಲ್ಲಿ ನಾಲ್ಕು ಪಟ್ಟು ಬಿಲ್ ತೋರಿಸಿ 4.80 ಲಕ್ಷ ರೂ. ಹಣ ಲಪಟಾಯಿಸಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದ್ದು ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು, ಆ.8: ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿದ್ದುಕೊಂಡೇ ಮಹಿಳಾ ಸಿಬಂದಿಯೊಬ್ಬರು ತನ್ನ ಗಂಡನ ಚಿಕಿತ್ಸೆಯ ನೆಪದಲ್ಲಿ ನಾಲ್ಕು ಪಟ್ಟು ಬಿಲ್ ತೋರಿಸಿ 4.80 ಲಕ್ಷ ರೂ. ಹಣ ಲಪಟಾಯಿಸಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದ್ದು ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕಮಿಷನರ್ ಕಚೇರಿಯಲ್ಲಿ ಅಕೌಂಟ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಯಶಸ್ವಿನಿ ಟಿ.ಎಸ್ ಎಂಬವರ ವಿರುದ್ಧ ಅಕೌಂಟ್ ಸುಪರಿಡೆಂಟ್ ಎಸ್.ಐ ವಂಡಾಲ್ಕರ್ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಯಶಸ್ವಿನಿ ಅವರು ತನ್ನ ಗಂಡ ಪುಷ್ಪ ಕುಮಾರ್ ಅವರ ಮೊಣಕಾಲಿನ ಶಸ್ತ್ರಚಿಕಿತ್ಸೆ ಸಲುವಾಗಿ ಬಿಲ್ ಭರಿಸಲು ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದಕ್ಕಾಗಿ ಕಚೇರಿ ಮುಖ್ಯಸ್ಥರ ಅನುಮತಿಯೊಂದಿಗೆ ಪತ್ರಗಳನ್ನು ಬರೆದು ಕ್ಲೈಮ್ ಮಾಡಲು ಮುಂದಾಗಿದ್ದರು. 

ವೈದ್ಯಕೀಯ ಚಿಕಿತ್ಸೆಯ ಮೊದಲ ಬಿಲ್ ಪಾವತಿಸಲು ಲಗ್ತೀಕರಿಸಿದ ಬಿಲ್ಲುಗಳ ಮೊತ್ತ 15,398 ಆಗಿದ್ದರೂ, 1,95,243 ರೂ. ಮರು ಪಾವತಿ ಮಾಡುವಂತೆ ಕೋರಿಕೆ ಸಲ್ಲಿಸಿದ್ದರು. ಎರಡನೇ ಬಿಲ್ ನಲ್ಲಿ ವೈದ್ಯಕೀಯ ವೆಚ್ಚವನ್ನು 2,86,245 ರೂ. ಎಂದು ಹೇಳಿ ಮರು ಪಾವತಿಗೆ ಕೋರಲಾಗಿತ್ತು. ಆದರೆ, ಇದರ ಜೊತೆಗೆ ಲಗ್ತೀಕರಿಸಿದ ಬಿಲ್ ಮೊತ್ತ ಕೇವಲ 65,831 ಮಾತ್ರ ಆಗಿರುತ್ತದೆ. ಆಮೂಲಕ ಕಡಿಮೆ ವೈದ್ಯಕೀಯ ವೆಚ್ಚ ಆಗಿದ್ದರೂ, ನಾಲ್ಕು ಪಟ್ಟು ಹಣ ಪಡೆಯುವ ಸಲುವಾಗಿ ಬಿಲ್ಲುಗಳ ಮೊತ್ತವನ್ನು 4,81,488 ರೂ. ಎಂದು ಹೆಚ್ಚು ತೋರಿಸಿ  ಹಣ ಲಪಟಾಯಿಸಲು ಯತ್ನಿಸಿರುವುದು ಕಂಡುಬಂದಿದೆ ಎಂದು ಅಕೌಂಟ್ ವಿಭಾಗದ ಮುಖ್ಯಸ್ಥ ವಂಡಾಲ್ಕರ್ ತನ್ನ ದೂರಿನಲ್ಲಿ ತಿಳಿಸಿದ್ದಾರೆ. 

2025ರ ಜೂನ್ ತಿಂಗಳಿನಿಂದ 2026ರ ಆಗಸ್ಟ್ 5ರ ನಡುವೆ ಈ ರೀತಿಯ ಕಳ್ಳಾಟ ನಡೆದಿದ್ದು ಈ ಕುರಿತು ಸಲ್ಲಿಸಿರುವ ಪತ್ರದಲ್ಲಿ ಕಮಿಷನರ್ ಆಫ್ ಪೊಲೀಸ್ ಮಂಗಳೂರು ಇವರ ಸಹಿ ಮತ್ತು ಮೊಹರನ್ನು ದುರ್ಬಳಕೆ ಮಾಡಿದ್ದಾರೆಂದೂ ದೂರಿನಲ್ಲಿ ತಿಳಿಸಿದ್ದಾರೆ.