Dk Shivakumar, Mangalore, social media: ಸೋಶಿಯಲ್ ಮೀಡಿಯಾ ಕ್ರಿಯೇಟರ್ ಗಳ ಜೊತೆಗೆ ಬೆಳಗ್ಗಿನ ತಿಂಡಿ ಸವಿದ ಸಿಎಂ ಡಿಕೆಶಿ, ಹೊಸತನ ಹಾದಿ ಹಿಡಿದ ಮುಖ್ಯಮಂತ್ರಿ

18-09-26 04:11 pm       HK News Staffer   ಕರಾವಳಿ

ಸಚಿವ ಸಂಪುಟ ಸಭೆಗಾಗಿ ಮಂಗಳೂರಿಗೆ ಆಗಮಿಸಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು(ಸೆ.18) ಬೆಳಗ್ಗಿನ ಉಪಾಹಾರವನ್ನು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಗಳ ಜೊತೆ ಮಾಡಿದ್ದು ವಿಶೇಷವಾಗಿತ್ತು.

ಮಂಗಳೂರು, ಸೆ.18: ಸಚಿವ ಸಂಪುಟ ಸಭೆಗಾಗಿ ಮಂಗಳೂರಿಗೆ ಆಗಮಿಸಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು(ಸೆ.18) ಬೆಳಗ್ಗಿನ ಉಪಾಹಾರವನ್ನು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಗಳ ಜೊತೆ ಮಾಡಿದ್ದು ವಿಶೇಷವಾಗಿತ್ತು.

ಮಹಾತ್ಮ ಗಾಂಧೀಜಿಯವರು ಮಂಗಳೂರಿಗೆ ಬಂದಿದ್ದಾಗ ಉಳಿದುಕೊಂಡಿದ್ದ ಮಣ್ಣಗುಡ್ಡೆಯ ಗಾಂಧಿ ಪಾರ್ಕ್ ಬಳಿಯ ಸಣ್ಣ ಮನೆಗೆ ಸಿಎಂ ಡಿಕೆಶಿ ಭೇಟಿ ಮಾಡಿದ್ದಲ್ಲದೆ, ಅಲ್ಲಿಯೇ ಉಪಾಹಾರ ಸವಿದರು. ಈ ವೇಳೆ, ಮಂಗಳೂರಿನ ಕೆಲವು ಸೋಶಿಯಲ್ ಮೀಡಿಯಾ ಸ್ಟಾರ್ ಗಳನ್ನು ಕರೆದು ಅವರ ಜೊತೆಗೆ ಕೆಲಹೊತ್ತು ಹರಟಿದರು.

ಮೇಲ್ನೋಟಕ್ಕೆ ಇದು ಸಣ್ಣ ವಿಷಯ ಎನಿಸಿದರೂ, ಮುಖ್ಯಮಂತ್ರಿಯಾದ ಬೆನ್ನಲ್ಲೇ ಡಿಕೆ ಶಿವಕುಮಾರ್, ನರೇಂದ್ರ ಮೋದಿ ರೀತಿಯಲ್ಲಿ ಪ್ರಚಾರಕ್ಕೆ ಸೋಶಿಯಲ್ ಮೀಡಿಯಾಗಳನ್ನು ಬಳಸಿಕೊಂಡಿದ್ದು ಸುಳ್ಳಲ್ಲ. ಪ್ರಮುಖ ಪತ್ರಿಕೆಗಳು, ಚಾನೆಲ್ಗಳ ಸಂಪಾದಕರನ್ನು ಕರೆದು ಡಿನ್ನರ್ ಮಾಡುವುದರ ಜೊತೆ ಜೊತೆಗೆ ಸೋಶಿಯಲ್ ಮೀಡಿಯಾಗಳ ಸ್ಟಾರ್ ಗಳನ್ನು ಕರೆದು ಉಪಹಾರ ಮಾಡುವ ಮೂಲಕ ತನ್ನ ಹೊಸ ಟ್ರೆಂಡನ್ನು ತೆರೆದಿಟ್ಟಿದ್ದಾರೆ.

ಎಲ್ಲರನ್ನು ಒಳಗೊಳ್ಳುವ ತನ್ನ ಮಾತು, ಬಿರುಸಿನ ನಡೆಯಲ್ಲಿ ಹಲವು ಬಾರಿ ಡಿಕೆಶಿ ಅವರು ಮೋದಿ ಹಾದಿಯಲ್ಲಿ ಸಾಗುತ್ತಿರುವುದನ್ನು ಕಂಡಿದ್ದಿದೆ. ಈಗ ಯುವ ಪ್ರತಿಭಾವಂತ ಕಂಟೆಂಟ್ ಕ್ರಿಯೇಟರ್ ಗಳನ್ನು ಕರೆದು ಅವರಿಗೂ ಮಣೆ ಹಾಕಿದ್ದಾರೆ. ಆಮೂಲಕ ಮಾಧ್ಯಮಗಳ ಶಕ್ತಿಯನ್ನು ಚೆನ್ನಾಗಿ ಅರಿತು, ಅವಗಳನ್ನು ತನಗೆ ಬೇಕಾದಂತೆ ಹದ್ದುಬಸ್ತಿನಲ್ಲಿ ಇಟ್ಟಿರುವುದರ ಜೊತೆಗೆ ಸಾಮಾಜಿಕ ಮಾಧ್ಯಮಗಳೇ ಇಂದಿನ ಚಾಲನಾ ಶಕ್ತಿ ಎನ್ನುವುದನ್ನೂ ಕಂಡುಕೊಂಡು ಅವರೊಂದಿಗೆ ಕುಳಿತು ಸಣ್ಣ ಝಲಕ್ ನೀಡಿರುವುದು ಕಾಣುತ್ತದೆ.

ರಾಜ್ಯದ ಮುಖ್ಯಮಂತ್ರಿಯೊಬ್ಬರು ಜಿಲ್ಲಾ ಮಟ್ಟದ ಮುಂಚೂಣಿ ಪತ್ರಕರ್ತರ ಹತ್ತಿರವೇ ಸುಳಿಯುವುದಿಲ್ಲ. ಅದರಲ್ಲೂ ಮೊದಲ ಬಾರಿಗೆ ಸಚಿವ ಸಂಪುಟ ಸಭೆಗಾಗಿ ಮಂಗಳೂರಿಗೆ ಆಗಮಿಸಿರುವ ತನ್ನ ಮೊದಲ ಹೆಜ್ಜೆಯಲ್ಲೇ ಸೋಶಿಯಲ್ ಮೀಡಿಯಾ ಪ್ರೇರಕರನ್ನು ಆಕರ್ಷಿಸಿದ್ದಾರೆ. ಆಮೂಲಕ ಅವರೆಲ್ಲ ತನ್ನ ಬಗೆಗೊಂದು ಪುಕ್ಕಟೆಯಾಗಿ ವಿಡಿಯೋ ಕ್ರಿಯೇಟ್ ಮಾಡುವಂತೆ ಪ್ರೇರಣೆ ಒದಗಿಸಿದ್ದಾರೆ.

Chief Minister D K Shivakumar, who is in Mangaluru for the Karnataka Cabinet meeting, had breakfast with social media influencers in the city on Thursday morning, in a notable outreach to young digital content creators.