Bangalore kidnap, Crime: ಬೆಂಗಳೂರಿನಲ್ಲಿ ಶಾಕ್‌ ಮೂಡಿಸಿದ ಯುವತಿಯ ಕಿಡ್ನಾಪ್‌ ; ಅಡ್ಡಾದಿಡ್ಡಿ ಚಾಲನೆಗೆ 35ಕ್ಕೂ ಹೆಚ್ಚು ಕಾರು, 100ಕ್ಕೂ ಅಧಿಕ ಬೈಕ್‌ಗಳಿಗೆ ಆರೋಪಿಗಳ ಕಾರು ಡಿಕ್ಕಿ! ಜಡ್ಜ್ - ಪೊಲೀಸರ ವಾಹನಗಳಿಗೂ ಹಾನಿ, ರಾಜಸ್ಥಾನ ಗ್ಯಾಂಗ್ ರಾಂಗ್ !

17-09-26 12:35 pm       HK News Staffer   ಕ್ರೈಂ

ನಗರದ ಕೆ.ಪಿ. ಅಗ್ರಹಾರ ದಾಸರಹಳ್ಳಿಯ ಮನೆಯಿಂದ ಯುವತಿಯೊಬ್ಬಳನ್ನು ಅಪಹರಿಸಿ ಪರಾರಿಯಾಗುತ್ತಿದ್ದ ಅಪಹರಣಕಾರರು ನಡೆಸಿದ ಹುಚ್ಚಾಟಕ್ಕೆ ಬೆಂಗಳೂರಿನಲ್ಲಿ ಭಾರಿ ಆತಂಕ ಸೃಷ್ಟಿಯಾಗಿದೆ. ಸಾರ್ವಜನಿಕರು ಹಾಗೂ ಪೊಲೀಸರಿಂದ ತಪ್ಪಿಸಿಕೊಳ್ಳಲು ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ ಆರೋಪಿಗಳು, ಮಾರ್ಗಮಧ್ಯೆ ಜಡ್ಜ್ ಹಾಗೂ ಪೊಲೀಸರ ಕಾರು ಸೇರಿದಂತೆ 35ಕ್ಕೂ ಹೆಚ್ಚು ಕಾರುಗಳು ಮತ್ತು 100ಕ್ಕೂ ಅಧಿಕ ಬೈಕ್‌ಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಘಟನೆಯಲ್ಲಿ ಆರು ಮಂದಿ ಗಂಭೀರ ಗಾಯಗೊಂಡಿದ್ದು, 30ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬೆಂಗಳೂರು, ಸೆ.17: ನಗರದ ಕೆ.ಪಿ. ಅಗ್ರಹಾರ ದಾಸರಹಳ್ಳಿಯ ಮನೆಯಿಂದ ಯುವತಿಯೊಬ್ಬಳನ್ನು ಅಪಹರಿಸಿ ಪರಾರಿಯಾಗುತ್ತಿದ್ದ ಅಪಹರಣಕಾರರು ನಡೆಸಿದ ಹುಚ್ಚಾಟಕ್ಕೆ ಬೆಂಗಳೂರಿನಲ್ಲಿ ಭಾರಿ ಆತಂಕ ಸೃಷ್ಟಿಯಾಗಿದೆ. ಸಾರ್ವಜನಿಕರು ಹಾಗೂ ಪೊಲೀಸರಿಂದ ತಪ್ಪಿಸಿಕೊಳ್ಳಲು ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ ಆರೋಪಿಗಳು, ಮಾರ್ಗಮಧ್ಯೆ ಜಡ್ಜ್ ಹಾಗೂ ಪೊಲೀಸರ ಕಾರು ಸೇರಿದಂತೆ 35ಕ್ಕೂ ಹೆಚ್ಚು ಕಾರುಗಳು ಮತ್ತು 100ಕ್ಕೂ ಅಧಿಕ ಬೈಕ್‌ಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಘಟನೆಯಲ್ಲಿ ಆರು ಮಂದಿ ಗಂಭೀರ ಗಾಯಗೊಂಡಿದ್ದು, 30ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. 

ಕಿಡ್ನಾಪ್‌ ಬಳಿಕ ಶುರುವಾಯ್ತು ಹೈಡ್ರಾಮಾ!

ಕೆ.ಪಿ. ಅಗ್ರಹಾರದ ದಾಸರಹಳ್ಳಿಯ ಮನೆಯಲ್ಲಿದ್ದ ಯುವತಿಯನ್ನು ಅಪಹರಿಸಿಕೊಂಡು ಆರೋಪಿಗಳು ಕಾರಿನಲ್ಲಿ ಪರಾರಿಯಾಗಿದ್ದರು. ಘಟನೆ ಗಮನಕ್ಕೆ ಬರುತ್ತಿದ್ದಂತೆ ಸ್ಥಳೀಯರು ಅಪಹರಣಕಾರರ ಕಾರನ್ನು ಬೆನ್ನಟ್ಟಲು ಆರಂಭಿಸಿದರು. ತಪ್ಪಿಸಿಕೊಳ್ಳುವ ಉದ್ದೇಶದಿಂದ ಆರೋಪಿಗಳು ವೇಗವಾಗಿ ಹಾಗೂ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ್ದು, ಈ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಹಾಗೂ ನಿಂತಿದ್ದ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಜಡ್ಜ್ ಹಾಗೂ ಪೊಲೀಸರ ಕಾರುಗಳಿಗೂ ಡಿಕ್ಕಿ ಹೊಡೆದಿರುವುದು ಘಟನೆಗೆ ಮತ್ತಷ್ಟು ಗಂಭೀರತೆ ತಂದಿದೆ.

30ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯ 

ಅಪಹರಣಕಾರರ ಕಾರಿನ ಅಡ್ಡಾದಿಡ್ಡಿ ಚಾಲನೆಯಿಂದ ಪೃಥ್ವಿರಾಜ್ (12), ಯಶಿಕಾ (9), ಅಮುಲ್ (35), ವರ್ಷ, ಮಣಿ (64) ಹಾಗೂ ಜಯಲಕ್ಷ್ಮೀ (57) ಗಾಯಗೊಂಡಿದ್ದಾರೆ. ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 30ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಘಟನೆಯಿಂದ ಕೆಲಕಾಲ ರಸ್ತೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

9 ಕಿ.ಮೀ. ಚೇಸ್: ಕೊನೆಗೂ ಕಾರಿಗೆ ಬ್ರೇಕ್‌ ಹಾಕಿದ ಜನ!

ಅಪಹರಣಕಾರರ ಕಾರನ್ನು ಸಾರ್ವಜನಿಕರು ಸುಮಾರು 9 ಕಿಲೋಮೀಟರ್‌ವರೆಗೆ ಬೆನ್ನಟ್ಟಿದ್ದಾರೆ. ಕೊನೆಗೆ ವಿಜಯನಗರದ ಹೊಸಹಳ್ಳಿ 4ನೇ ಅಡ್ಡರಸ್ತೆಯಲ್ಲಿ ಕಾರನ್ನು ಅಡ್ಡಗಟ್ಟಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟರಲ್ಲಾಗಲೇ ರೊಚ್ಚಿಗೆದ್ದಿದ್ದ ಕೆಲವರು ಕಾರಿನ ಮೇಲೆ ಕಲ್ಲು ತೂರಿ ವಾಹನವನ್ನು ಜಖಂಗೊಳಿಸಿದ್ದಾರೆ. ಬಳಿಕ ಕಾರಿನಲ್ಲಿದ್ದ ಮೂವರನ್ನು ಹೊರಗೆಳೆದು ಥಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿಗಳನ್ನು ಸಾರ್ವಜನಿಕರಿಂದ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.

ಮೂವರು ಅರೆಸ್ಟ್‌, ಚಾಲಕ ಸದ್ದಾಂ ಎಸ್ಕೇಪ್‌!

ಸಾರ್ವಜನಿಕರಿಂದ ಹಲ್ಲೆಗೊಳಗಾದ ಆರೋಪಿಗಳಾದ ರಾಕೇಶ್ (31), ಕರಣ್ (35) ಹಾಗೂ ಆಯನ್ (18) ಅವರನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ. ಅಪಹರಣಕಾರರ ಕಾರು ಚಲಾಯಿಸುತ್ತಿದ್ದ ಸದ್ದಾಂ ಎಂಬಾತ ಸ್ಥಳದಿಂದ ಪರಾರಿಯಾಗಿದ್ದಾನೆ. ಆತನ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ವಿಚಾರಣೆ ವೇಳೆ ಬಯಲಾಯ್ತು ಕಿಡ್ನಾಪ್‌ ಹಿಂದಿನ ರಹಸ್ಯ?

ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಿದ ಬಳಿಕ ಯುವತಿಯ ಅಪಹರಣದ ಹಿಂದಿನ ಕಾರಣದ ಕುರಿತು ಮಹತ್ವದ ಮಾಹಿತಿ ಪೊಲೀಸರಿಗೆ ಲಭಿಸಿದೆ ಎಂದು ತಿಳಿದುಬಂದಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಯುವತಿಯ ಸೋದರತ್ತೆಯೇ ಆಕೆಯನ್ನು ಅಪಹರಿಸಿಕೊಂಡು ಬರಲು ಆರೋಪಿಗಳಿಗೆ ಸುಪಾರಿ ನೀಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಯುವತಿಯ ಸೋದರತ್ತೆಯ ಪಾತ್ರ ಸೇರಿದಂತೆ ಪ್ರಕರಣದ ವಿವಿಧ ಆಯಾಮಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಪ್ರೀತಿಸಿ ಮದುವೆ: 9 ತಿಂಗಳಿಂದ ಬೆಂಗಳೂರಿನಲ್ಲಿ ವಾಸ

ರಾಜಸ್ಥಾನ ಮೂಲದ ಪೂಜಾ ತಾನು ಪ್ರೀತಿಸುತ್ತಿದ್ದ ಯುವಕನನ್ನು ವಿವಾಹವಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದಳು. ಕಳೆದ ಒಂಬತ್ತು ತಿಂಗಳಿನಿಂದ ಈ ದಂಪತಿ ಕೆ.ಪಿ. ಅಗ್ರಹಾರದ ದಾಸರಹಳ್ಳಿಯಲ್ಲಿ ವಾಸವಾಗಿದ್ದರು. ಮದುವೆಯಾದ ಬಳಿಕವೂ ಪೂಜಾ ತನ್ನ ಸೋದರತ್ತೆಯೊಂದಿಗೆ ಸಂಪರ್ಕದಲ್ಲಿದ್ದಳು ಎನ್ನಲಾಗಿದೆ. ಇತ್ತೀಚೆಗೆ ಯುವತಿಯ ಸೋದರತ್ತೆ ಪೂಜಾ ಅವರಿಂದ ಬೆಂಗಳೂರಿನ ವಿಳಾಸ ಪಡೆದುಕೊಂಡಿದ್ದಳು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ರಾಜಸ್ಥಾನದಿಂದ ಬಂದಿದ್ದ ಗ್ಯಾಂಗ್‌: ತನಿಖೆ ತೀವ್ರ

ಯುವತಿಯ ಅಪಹರಣಕ್ಕಾಗಿ ರಾಜಸ್ಥಾನದಿಂದ ಬಂದಿದ್ದ ತಂಡವೇ ಈ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಬಂಧಿತ ಆರೋಪಿಗಳ ವಿಚಾರಣೆ ಮುಂದುವರಿದಿದೆ. ಅಪಹರಣಕ್ಕೆ ಸುಪಾರಿ ನೀಡಿದವರು ಯಾರು, ಆರೋಪಿಗಳೊಂದಿಗೆ ಅವರ ಸಂಪರ್ಕ ಹೇಗಿತ್ತು, ಯುವತಿಯನ್ನು ಎಲ್ಲಿಗೆ ಕರೆದೊಯ್ಯಲು ಯೋಜಿಸಲಾಗಿತ್ತು ಹಾಗೂ ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದನ್ನು ಪೊಲೀಸರು ಪತ್ತೆಹಚ್ಚಬೇಕಿದೆ.

A dramatic kidnapping attempt in Bengaluru’s K.P. Agrahara area triggered panic after the accused allegedly drove a car recklessly while trying to escape with a young woman, crashing into more than 35 cars and over 100 motorcycles, including vehicles belonging to a judge and police personnel. Six people sustained serious injuries, while more than 30 others suffered minor injuries.