ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮೂರ್ತಿಯಿಲ್ಲ, ಕಲಾವಿದನೂ ಇಲ್ಲ, ಕಬ್ಬಿನ ತುಂಡುಗಳಲ್ಲೇ ಗಣಪನ ರಚಿಸಿ ಆರಾಧನೆ!

14-09-26 10:01 pm       HK News Staffer   ಕರಾವಳಿ

ಪ್ರಕೃತಿಯಲ್ಲೇ ದೇವರನ್ನು ಕಾಣುವ ತುಳುನಾಡಿನ ಜನರ ನಂಬಿಕೆ ಇಲ್ಲಿನ ಬಹುತೇಕ ಹಬ್ಬ-ಆಚರಣೆಗಳಲ್ಲಿ ಇಂದಿಗೂ ಜೀವಂತವಾಗಿದೆ. ಇತರೆ ಪ್ರದೇಶಗಳಿಗಿಂತ ವಿಭಿನ್ನವಾಗಿರುವ ತುಳುನಾಡಿನ ಮೂಲ ಪರಂಪರೆಯಲ್ಲಿ ಗಣೇಶ ಚತುರ್ಥಿಯ ಆಚರಣೆಯೂ ವಿಶೇಷ ಸ್ಥಾನ ಪಡೆದಿದೆ. ಇಲ್ಲಿ ಮಣ್ಣು ಅಥವಾ ಪ್ಲಾಸ್ಟರ್ ಆಫ್ ಪ್ಯಾರಿಸ್‌ನ ಗಣೇಶ ಮೂರ್ತಿಯನ್ನು ತಂದು ಪೂಜಿಸುವ ಬದಲು, ಮನೆಯ ಮಂದಿಯೇ ಕಬ್ಬಿನ ತುಂಡುಗಳನ್ನು ಬಳಸಿ ಗಣಪತಿಯ ಆಕಾರ ರೂಪಿಸಿ ಆರಾಧಿಸುವ ವಿಶಿಷ್ಟ ಸಂಪ್ರದಾಯ ಇಂದಿಗೂ ಕೆಲವು ಗ್ರಾಮೀಣ ಭಾಗಗಳಲ್ಲಿ ಮುಂದುವರಿದಿದೆ.

ಮಂಗಳೂರು, ಸೆ.14 : ಪ್ರಕೃತಿಯಲ್ಲೇ ದೇವರನ್ನು ಕಾಣುವ ತುಳುನಾಡಿನ ಜನರ ನಂಬಿಕೆ ಇಲ್ಲಿನ ಬಹುತೇಕ ಹಬ್ಬ-ಆಚರಣೆಗಳಲ್ಲಿ ಇಂದಿಗೂ ಜೀವಂತವಾಗಿದೆ. ಇತರೆ ಪ್ರದೇಶಗಳಿಗಿಂತ ವಿಭಿನ್ನವಾಗಿರುವ ತುಳುನಾಡಿನ ಮೂಲ ಪರಂಪರೆಯಲ್ಲಿ ಗಣೇಶ ಚತುರ್ಥಿಯ ಆಚರಣೆಯೂ ವಿಶೇಷ ಸ್ಥಾನ ಪಡೆದಿದೆ. ಇಲ್ಲಿ ಮಣ್ಣು ಅಥವಾ ಪ್ಲಾಸ್ಟರ್ ಆಫ್ ಪ್ಯಾರಿಸ್‌ನ ಗಣೇಶ ಮೂರ್ತಿಯನ್ನು ತಂದು ಪೂಜಿಸುವ ಬದಲು, ಮನೆಯ ಮಂದಿಯೇ ಕಬ್ಬಿನ ತುಂಡುಗಳನ್ನು ಬಳಸಿ ಗಣಪತಿಯ ಆಕಾರ ರೂಪಿಸಿ ಆರಾಧಿಸುವ ವಿಶಿಷ್ಟ ಸಂಪ್ರದಾಯ ಇಂದಿಗೂ ಕೆಲವು ಗ್ರಾಮೀಣ ಭಾಗಗಳಲ್ಲಿ ಮುಂದುವರಿದಿದೆ.

ಅನಾದಿ ಕಾಲದ ಪ್ರಕೃತಿ ಆರಾಧನೆ

ಪ್ರಥಮ ಪೂಜಿತ ಗಣಪನನ್ನು ನೆನೆದು, ಕೃಷಿ ಬೆಳೆ ಸಮೃದ್ಧಿಯಾಗಲಿ, ಕುಟುಂಬದ ಬದುಕು ಹಸನಾಗಲಿ ಎಂದು ಪ್ರಾರ್ಥಿಸುವುದು ಈ ಆಚರಣೆಯ ಪ್ರಮುಖ ಉದ್ದೇಶ. ಎಷ್ಟೇ ಆಧುನಿಕತೆ ಬೆಳೆದಿದ್ದರೂ ತುಳುನಾಡಿನ ಅನಾದಿ ಕಾಲದ ಇಂತಹ ಸಾಂಪ್ರದಾಯಿಕ ಆಚರಣೆಗಳು ಗ್ರಾಮೀಣ ಭಾಗಗಳಲ್ಲಿ ಇನ್ನೂ ಅಸ್ತಿತ್ವದಲ್ಲಿವೆ.

ನಗರ ಪ್ರದೇಶಗಳಲ್ಲಿ ಇಂತಹ ಆಚರಣೆಗಳು ಅಪರೂಪವಾಗಿದ್ದರೂ, ಕೃಷಿ ಮಾಡಿಕೊಂಡು ಬದುಕುತ್ತಿರುವವರು ಹಾಗೂ ಮನೆಗಳಲ್ಲಿ ದೈವ, ದೇವರುಗಳನ್ನು ಸಾಂಪ್ರದಾಯಿಕವಾಗಿ ಆರಾಧಿಸುವ ಕುಟುಂಬಗಳು ಈ ವಿಶಿಷ್ಟ ಗಣೇಶ ಚತುರ್ಥಿಯನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸುತ್ತಾರೆ.

ಕಬ್ಬಿನ ತುಂಡುಗಳಿಂದ ಗಣಪನ ಆಕಾರ

ಕಬ್ಬಿನ ತುಂಡುಗಳನ್ನು ಒಂದಕ್ಕೊಂದು ಜೋಡಿಸುವುದಕ್ಕೂ ನಿರ್ದಿಷ್ಟ ಕ್ರಮವನ್ನು ಅನುಸರಿಸಲಾಗುತ್ತದೆ. ಮಣೆಯ ಮೇಲೆ ಮೊದಲು ಬಾಳೆ ಎಲೆಯನ್ನು ಹಾಸಿ, ಅದರ ಮೇಲೆ ಅಕ್ಕಿ, ವಿವಿಧ ಧವಸ ಧಾನ್ಯಗಳು, ಹೂವು, ತೆಂಗಿನಕಾಯಿ ಸೇರಿದಂತೆ ಪೂಜಾ ಸಾಮಗ್ರಿಗಳನ್ನು ಇಡಲಾಗುತ್ತದೆ. ನಂತರ ನಿರ್ದಿಷ್ಟ ಅಳತೆ ಮತ್ತು ಗಾತ್ರದ ಕಬ್ಬಿನ ತುಂಡುಗಳನ್ನು ಒಂದೊಂದಾಗಿ ಜೋಡಿಸಿ ಗಣಪತಿಯ ಆಕಾರ ನೀಡಲಾಗುತ್ತದೆ. ಶಿರದ ಭಾಗವನ್ನು ಹೂವು, ಹಣ್ಣು-ಹಂಪಲು ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳಿಂದ ಅಲಂಕರಿಸಲಾಗುತ್ತದೆ.


ಮನೆಯವರೇ ಪೂಜಾರಿಗಳು, ಮನೆಯವರೇ ಕಲಾವಿದರು

ಈ ಆಚರಣೆಯಲ್ಲಿ ಹೊರಗಿನಿಂದ ಗಣೇಶ ಮೂರ್ತಿಯನ್ನು ತರುವುದಿಲ್ಲ. ಯಾವುದೇ ಕಲಾವಿದರಿಂದ ಪ್ರತ್ಯೇಕವಾಗಿ ಮೂರ್ತಿ ತಯಾರಿಸುವ ಅಗತ್ಯವೂ ಇಲ್ಲ. ಮನೆಯ ಸದಸ್ಯರೆಲ್ಲರೂ ಒಟ್ಟಾಗಿ ಸೇರಿ ಕಬ್ಬಿನ ತುಂಡುಗಳಿಂದ ಗಣಪನ ರೂಪವನ್ನು ಸಿದ್ಧಪಡಿಸಿ, ಮಂಗಳಾರತಿಯೊಂದಿಗೆ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ಸಾಧ್ಯವಾದಷ್ಟು ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಪಾಲಿಸುವುದು ಆಚರಣೆಯ ವಿಶೇಷತೆ.

ವಿಸರ್ಜನೆಯಿಲ್ಲ, ಪ್ರಸಾದವಾಗಿ ಸ್ವೀಕಾರ

ಕಬ್ಬಿನಿಂದ ರೂಪಿಸಿದ ಈ ಗಣಪನನ್ನು ಸಾಮಾನ್ಯ ಗಣೇಶ ಮೂರ್ತಿಗಳಂತೆ ವಿಸರ್ಜನೆ ಮಾಡುವ ಸಂಪ್ರದಾಯ ಇಲ್ಲ. ಪೂಜಾ ವಿಧಿ ವಿಧಾನಗಳು ಮತ್ತು ಊಟೋಪಚಾರಗಳು ಮುಗಿದ ಬಳಿಕ ಮನೆಯ ಸದಸ್ಯರು ಕಬ್ಬಿನ ಗಣಪನನ್ನು ಕ್ರಮಬದ್ಧವಾಗಿ ತೆಗೆದು, ಅದರ ಭಾಗಗಳನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸುತ್ತಾರೆ.

ತುಳುನಾಡಿನ ಈ ಆಚರಣೆ ಗಣೇಶನನ್ನು ಕೇವಲ ಮೂರ್ತಿಯ ರೂಪದಲ್ಲಿ ಕಾಣುವುದಕ್ಕಿಂತ ಪ್ರಕೃತಿಯೊಂದಿಗೆ ಬೆಸೆದುಕೊಂಡು ಆರಾಧಿಸುವ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಕೃಷಿ ಸಂಸ್ಕೃತಿ, ಪ್ರಕೃತಿ ಆರಾಧನೆ ಮತ್ತು ಕುಟುಂಬದ ಒಗ್ಗಟ್ಟನ್ನು ಒಂದೇ ಆಚರಣೆಯಲ್ಲಿ ಬೆಸೆದುಕೊಂಡಿರುವ ಈ ಕಬ್ಬಿನ ಗಣಪ ಇಂದಿಗೂ ತುಳುನಾಡಿನ ಗ್ರಾಮೀಣ ಬದುಕಿನ ವಿಶಿಷ್ಟ ಸಾಂಸ್ಕೃತಿಕ ಗುರುತಾಗಿ ಉಳಿದಿದೆ.