ಮಂಗಳೂರು- ಬೆಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರ ; ಪುತ್ತೂರಿನಲ್ಲಿ ನಿಲ್ಲದೆ ಸಾಗಿದ್ದಕ್ಕೆ ಸಾರ್ವಜನಿಕರ ಆಕ್ರೋಶ

10-09-26 09:24 pm       HK News Staffer   ಕರಾವಳಿ

ಬೆಂಗಳೂರು ನಡುವೆ ಪ್ರಸ್ತಾವಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಎರಡನೇ ಪ್ರಾಯೋಗಿಕ ಸಂಚಾರ ಗುರುವಾರ ನಡೆದಿದ್ದು, ಕಬಕ–ಪುತ್ತೂರು ರೈಲು ನಿಲ್ದಾಣದಲ್ಲಿ ಎರಡು ನಿಮಿಷಗಳ ನಿಲುಗಡೆ ನೀಡಲಾಗುವುದು ಎಂದು ರೈಲ್ವೆ ಮಂಡಳಿಯ ವೇಳಾಪಟ್ಟಿಯಲ್ಲಿ ಉಲ್ಲೇಖಿಸಿದ್ದರೂ ರೈಲು ನಿಲ್ಲದೇ ಸಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪುತ್ತೂರು, ಸೆ.10: ಮಂಗಳೂರು - ಬೆಂಗಳೂರು ನಡುವೆ ಪ್ರಸ್ತಾವಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಎರಡನೇ ಪ್ರಾಯೋಗಿಕ ಸಂಚಾರ ಗುರುವಾರ ನಡೆದಿದ್ದು, ಕಬಕ–ಪುತ್ತೂರು ರೈಲು ನಿಲ್ದಾಣದಲ್ಲಿ ಎರಡು ನಿಮಿಷಗಳ ನಿಲುಗಡೆ ನೀಡಲಾಗುವುದು ಎಂದು ರೈಲ್ವೆ ಮಂಡಳಿಯ ವೇಳಾಪಟ್ಟಿಯಲ್ಲಿ ಉಲ್ಲೇಖಿಸಿದ್ದರೂ ರೈಲು ನಿಲ್ಲದೇ ಸಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 

ರೈಲು ನಿಗದಿತ ಸಮಯಕ್ಕಿಂತ 1 ಗಂಟೆ 22 ನಿಮಿಷ ಮುಂಚಿತವಾಗಿ ಪುತ್ತೂರು ನಿಲ್ದಾಣ ತಲುಪಿದ್ದರೂ ನಿಲ್ಲದೆ ಸಾಗಿದ್ದು ಸ್ವಾಗತಕ್ಕೆ ಸಿದ್ಧರಾಗಿದ್ದ ರೈಲು ಬಳಕೆದಾರರು ಹಾಗೂ ಸ್ಥಳೀಯರಿಗೆ ನಿರಾಸೆಗೀಡು ಮಾಡಿದೆ. ವೇಳಾಪಟ್ಟಿಯಂತೆ ಯಶವಂತಪುರದಿಂದ ಬೆಳಗ್ಗೆ 6.50ಕ್ಕೆ ಹೊರಡುವ ರೈಲು ಮಧ್ಯಾಹ್ನ 2.50ಕ್ಕೆ ಮಂಗಳೂರು ಜಂಕ್ಷನ್ ತಲುಪಬೇಕಿತ್ತು. ಕಬಕ–ಪುತ್ತೂರು ನಿಲ್ದಾಣಕ್ಕೆ ಮಧ್ಯಾಹ್ನ 2.34ಕ್ಕೆ ಆಗಮಿಸುವ ನಿರೀಕ್ಷೆ ಹಿನ್ನೆಲೆಯಲ್ಲಿ ರೈಲ್ವೆ ಬಳಕೆದಾರರು ಹಾಗೂ ಬಿಜೆಪಿ ಕಾರ್ಯಕರ್ತರು ಮಧ್ಯಾಹ್ನ 2.30ರ ವೇಳೆಗೆ ನಿಲ್ದಾಣದಲ್ಲಿ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಂಡಿದ್ದರು.

ಆದರೆ, ರೈಲು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಮಧ್ಯಾಹ್ನ 1.12ರ ವೇಳೆಗೆ ಕಬಕ–ಪುತ್ತೂರು ನಿಲ್ದಾಣ ತಲುಪಿತು. ನಿಲ್ದಾಣದಲ್ಲಿ ಸ್ವಾಗತಕ್ಕೆ ಯಾರೂ ಹಾಜರಿರದ ಸಂದರ್ಭ ರೈಲು ಪ್ಲಾಟ್‌ಫಾರ್ಮ್‌ನಲ್ಲಿ ನಿಲ್ಲದೆ, ನಿಧಾನಗತಿಯಲ್ಲಿ ಸಾಗಿದ ಬಳಿಕ ಮಂಗಳೂರು ಕಡೆಗೆ ತೆರಳಿತು. ಮಂಗಳೂರಿನಿಂದ ಬೆಂಗಳೂರಿನತ್ತ ಹಿಂದಿರುಗುವ ಸಂದರ್ಭದಲ್ಲೂ ಇದೇ ರೀತಿಯ ಬೆಳವಣಿಗೆ ಕಂಡುಬಂತು. ಮಧ್ಯಾಹ್ನ 3.10ಕ್ಕೆ ಮಂಗಳೂರಿನಿಂದ ಹೊರಡಬೇಕಿದ್ದ ರೈಲು ಅದಕ್ಕೂ ಮುಂಚಿತವಾಗಿ ಸಂಚರಿಸಿ, ಸುಮಾರು 3.17ರ ವೇಳೆಗೆ ಕಬಕ–ಪುತ್ತೂರು ನಿಲ್ದಾಣದ ಮೂಲಕ ಹಾದುಹೋಯಿತು. ಈ ಸಂದರ್ಭ ವಂದೇ ಭಾರತ್ ರೈಲಿಗೆ ನಿಲುಗಡೆ ದೊರೆಯುವ ನಿರೀಕ್ಷೆಯಲ್ಲಿ ಕೆಲವರು ನಿಲ್ದಾಣದಲ್ಲಿ ಕಾಯುತ್ತಿದ್ದರು. ಆದರೆ ರೈಲು ಪ್ಲಾಟ್‌ಫಾರ್ಮ್‌ಗೆ ಬಾರದೆ ಮಧ್ಯದ ಹಳಿಯಲ್ಲಿ ವೇಗವಾಗಿ ಸಂಚರಿಸಿ ಮುಂದುವರಿಯಿತು.

ವಂದೇ ಭಾರತ್ ರೈಲಿಗೆ ಕಬಕ–ಪುತ್ತೂರಿನಲ್ಲಿ ನಿಲುಗಡೆ ನೀಡಬೇಕೆಂಬ ಬೇಡಿಕೆ ಹಲವು ದಿನಗಳಿಂದ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಎರಡನೇ ಪ್ರಾಯೋಗಿಕ ಸಂಚಾರದ ವೇಳಾಪಟ್ಟಿಯಲ್ಲಿ ನಿಲುಗಡೆ ಉಲ್ಲೇಖವಾಗಿದ್ದರಿಂದ ಸ್ಥಳೀಯರಲ್ಲಿ ನಿರೀಕ್ಷೆ ಮೂಡಿತ್ತು. ಆದರೆ ಪ್ರಾಯೋಗಿಕ ಸಂಚಾರದ ವೇಳೆ ನಿಲುಗಡೆ ದೊರೆಯದಿರುವುದು ನಿರಾಸೆ ಮೂಡಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗಿದೆ. ‘ಪುತ್ತೂರಿಗರ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ’ ಎಂಬಂತಹ ವ್ಯಂಗ್ಯಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿವೆ. ‘ಬಹಳಷ್ಟು ಹೋರಾಟದ ಬಳಿಕ ಕಬಕ–ಪುತ್ತೂರು ನಿಲುಗಡೆ ಘೋಷಣೆಯಾದರೂ, ಪ್ರಾಯೋಗಿಕ ಸಂಚಾರದಲ್ಲಿ ರೈಲು ನಿಲ್ಲದಿರುವುದು ಮತ್ತೆ ಪುತ್ತೂರಿಗೆ ಅನ್ಯಾಯ’ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.