ಐಪಿಎಸ್ ಅಧಿಕಾರಿಗಳ ಭರ್ಜರಿ ವರ್ಗಾವಣೆ: ಮಂಗಳೂರು ಡಿಸಿಪಿಯಾಗಿ ಸ್ಯಾಮ್ ವರ್ಗೀಸ್ ನೇಮಕ, ಬೆಂಗಳೂರಿನ ಪೊಲೀಸ್ ಅಧಿಕಾರಿಗಳಿಗೂ ಹೊಸ ಹೊಣೆ

07-09-26 01:33 pm       HK News Staffer   ಕರ್ನಾಟಕ

ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆ ಮಾಡಿದ್ದು, ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ವಿವಿಧ ಹುದ್ದೆಗಳಿಗೆ ನಿಯೋಜಿಸಿದೆ. ಈ ಕುರಿತು ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಸೆಪ್ಟೆಂಬರ್ 7ರಂದು ಅಧಿಸೂಚನೆ ಹೊರಡಿಸಿದೆ.

ಬೆಂಗಳೂರು, ಸೆಪ್ಟೆಂಬರ್ 7: ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆ ಮಾಡಿದ್ದು, ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ವಿವಿಧ ಹುದ್ದೆಗಳಿಗೆ ನಿಯೋಜಿಸಿದೆ. ಈ ಕುರಿತು ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಸೆಪ್ಟೆಂಬರ್ 7ರಂದು ಅಧಿಸೂಚನೆ ಹೊರಡಿಸಿದೆ.

ಮಂಗಳೂರು ಡಿಸಿಪಿಯಾಗಿ ಸ್ಯಾಮ್ ವರ್ಗೀಸ್

ಬೆಂಗಳೂರಿನ ಅಪರಾಧ ತನಿಖಾ ವಿಭಾಗದ (ಸಿಐಡಿ) ಪೊಲೀಸ್ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸ್ಯಾಮ್ ವರ್ಗೀಸ್, ಐಪಿಎಸ್ (ಕೆಎನ್ 2022) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಅವರನ್ನು ತೆರವಾಗಿದ್ದ ಮಂಗಳೂರು ನಗರ ಪೊಲೀಸ್ ಡಿಸಿಪಿ, ಕಾನೂನು ಮತ್ತು ಸುವ್ಯವಸ್ಥೆ ಹುದ್ದೆಗೆ ನೇಮಿಸಲಾಗಿದೆ. ಮಂಗಳೂರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಹೊಣೆಗಾರಿಕೆಯನ್ನು ಸ್ಯಾಮ್ ವರ್ಗೀಸ್ ಅವರು ವಹಿಸಿಕೊಳ್ಳಲಿದ್ದಾರೆ.

ಅನಿತಾ ಭೀಮಪ್ಪ ಹದ್ದಣ್ಣವರ್‌ಗೆ ಸಿಐಡಿ ಹೊಣೆ

ಬೆಂಗಳೂರು ದಕ್ಷಿಣ-ಪಶ್ಚಿಮ ವಿಭಾಗದ ಡಿಸಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅನಿತಾ ಭೀಮಪ್ಪ ಹದ್ದಣ್ಣವರ್, ಐಪಿಎಸ್ (ಕೆಎನ್ 2014) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಅವರನ್ನು ತೆರವಾಗಿರುವ ಅಪರಾಧ ತನಿಖಾ ವಿಭಾಗದ (ಸಿಐಡಿ) ಪೊಲೀಸ್ ಅಧೀಕ್ಷಕರಾಗಿ ನೇಮಿಸಲಾಗಿದೆ.

ಬೆಂಗಳೂರು ಗುಪ್ತಚರ ವಿಭಾಗಕ್ಕೆ ರಾಮ್ ಅರಸಿದ್ದಿ

ಪೋಸ್ಟಿಂಗ್‌ಗಾಗಿ ಕಾಯುತ್ತಿದ್ದ ಡಾ. ರಾಮ್ ಎಲ್. ಅರಸಿದ್ದಿ, ಐಪಿಎಸ್ (ಕೆಎನ್ 2018) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೆಂಗಳೂರು ನಗರದ ಗುಪ್ತಚರ ವಿಭಾಗದ ಡಿಸಿಪಿಯಾಗಿ ನಿಯೋಜಿಸಲಾಗಿದೆ.

ದಕ್ಷಿಣ-ಪಶ್ಚಿಮ ವಿಭಾಗದ ಡಿಸಿಪಿಯಾಗಿ ಲಕ್ಷ್ಮೀ ಗಣೇಶ್

ಪೋಸ್ಟಿಂಗ್‌ಗಾಗಿ ಕಾಯುತ್ತಿದ್ದ ಲಕ್ಷ್ಮೀ ಗಣೇಶ್ ಕೆ., ಐಪಿಎಸ್ (ಕೆಎನ್ 2020) ಅವರನ್ನು ಬೆಂಗಳೂರು ದಕ್ಷಿಣ-ಪಶ್ಚಿಮ ವಿಭಾಗದ ಡಿಸಿಪಿಯಾಗಿ ನೇಮಿಸಲಾಗಿದೆ. ಅವರು ಈ ಹಿಂದೆ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅನಿತಾ ಭೀಮಪ್ಪ ಹದ್ದಣ್ಣವರ್ ಅವರ ವರ್ಗಾವಣೆಯಿಂದ ತೆರವಾದ ಸ್ಥಾನವನ್ನು ಭರ್ತಿ ಮಾಡಲಿದ್ದಾರೆ.

ಮೂರು ಹುದ್ದೆಗಳಿಗೆ ಸಮಾನ ಸ್ಥಾನಮಾನ

ಅಧಿಸೂಚನೆಯಲ್ಲಿ ಸಿಐಡಿ ಪೊಲೀಸ್ ಅಧೀಕ್ಷಕ, ಬೆಂಗಳೂರು ದಕ್ಷಿಣ-ಪಶ್ಚಿಮ ವಿಭಾಗದ ಡಿಸಿಪಿ ಹಾಗೂ ಬೆಂಗಳೂರು ನಗರ ಗುಪ್ತಚರ ವಿಭಾಗದ ಡಿಸಿಪಿ ಹುದ್ದೆಗಳನ್ನು ಎಸ್‌ಪಿ, ಮಂಡ್ಯ ಹುದ್ದೆಯ ಕೇಡರ್ ಹುದ್ದೆಗೆ ಸಮಾನ ಸ್ಥಾನಮಾನ ಮತ್ತು ಜವಾಬ್ದಾರಿ ಹೊಂದಿರುವ ಹುದ್ದೆಗಳೆಂದು ಘೋಷಿಸಲಾಗಿದೆ. ಈ ಬದಲಾವಣೆಗಳು ತಕ್ಷಣದಿಂದ ಜಾರಿಗೆ ಬರಲಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿದ್ದಾರೆ.