ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ ; ಹೈವೇ ಪಟ್ರೋಲ್ ವಾಹನಕ್ಕೆ ಡಿಕ್ಕಿ ಹೊಡೆದ ಲಾರಿ, ಬೈಕ್ ಸವಾರ ಬಲಿ

10-09-26 02:18 pm       HK News Staffer   ಕ್ರೈಂ

ಅಪಘಾತಕ್ಕೀಡಾಗಿದ್ದ ವಾಹನವೊಂದನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಹೆದ್ದಾರಿಯಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಮೃತಪಟ್ಟ ದಾರುಣ ಘಟನೆ ಬೈಂದೂರು ತಾಲೂಕಿನ ಶಿರೂರು ಸಮೀಪ ಗುರುವಾರ ನಡೆದಿದೆ.

ಬೈಂದೂರು , ಸೆ.10: ಅಪಘಾತಕ್ಕೀಡಾಗಿದ್ದ ವಾಹನವೊಂದನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಹೆದ್ದಾರಿಯಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಮೃತಪಟ್ಟ ದಾರುಣ ಘಟನೆ ಬೈಂದೂರು ತಾಲೂಕಿನ ಶಿರೂರು ಸಮೀಪ ಗುರುವಾರ ನಡೆದಿದೆ.

ಮೃತರನ್ನು ಶಿರೂರಿನ ನಾಗೇಂದ್ರ ಮಹಾಲೆ (45) ಎಂದು ಗುರುತಿಸಲಾಗಿದೆ.

ಹೆದ್ದಾರಿಯಲ್ಲಿ ಸರಕು ತುಂಬಿದ್ದ ಲಾರಿಯೊಂದು ಈ ಹಿಂದೆ ಅಪಘಾತಕ್ಕೀಡಾಗಿತ್ತು. ಈ ಲಾರಿಯನ್ನು ತೆರವುಗೊಳಿಸುವ ಹಿನ್ನೆಲೆಯಲ್ಲಿ ಹೆದ್ದಾರಿ ನಿರ್ವಹಣಾ ಸಿಬ್ಬಂದಿ ರಸ್ತೆ ಸಂಚಾರಕ್ಕೆ ತಾತ್ಕಾಲಿಕವಾಗಿ ತಡೆ ಒಡ್ಡಿದ್ದರು. ವಾಹನಗಳ ಸಂಚಾರ ನಿಯಂತ್ರಣಕ್ಕಾಗಿ ಸ್ಥಳದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಈ ವೇಳೆ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಮತ್ತೊಂದು ಲಾರಿ ಚಾಲಕನ ನಿಯಂತ್ರಣ ತಪ್ಪಿ ನಿಲ್ಲಿಸಲಾಗಿದ್ದ ಹೈವೇ ಪಟ್ರೋಲ್ ಪೊಲೀಸರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ನಿಯಂತ್ರಣ ತಪ್ಪಿದ ಲಾರಿ ರಸ್ತೆಯಲ್ಲಿದ್ದ ನಾಲ್ಕು ಬೈಕ್‌ಗಳಿಗೂ ಡಿಕ್ಕಿ ಹೊಡೆದಿದೆ.
ಈ ಸರಣಿ ಅಪಘಾತದಲ್ಲಿ ಬೈಕ್ ಸವಾರ ನಾಗೇಂದ್ರ ಮಹಾಲೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಇಳಿಜಾರು ರಸ್ತೆಯಾಗಿದ್ದರಿಂದ ಲಾರಿ ಅತಿವೇಗವಾಗಿ ಬಂದಿದ್ದು, ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತಕ್ಕೆ ಕಾರಣವಾದ ಲಾರಿ ಕೇರಳದಿಂದ ರಬ್ಬರ್ ತುಂಬಿಕೊಂಡು ಮಹಾರಾಷ್ಟ್ರದ ಕಡೆಗೆ ಸಾಗುತ್ತಿತ್ತು ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿದು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ನಿಖರ ಕಾರಣ ಸೇರಿದಂತೆ ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.