ಬ್ರೇಕಿಂಗ್ ನ್ಯೂಸ್
02-08-20 09:36 am Special Political News Correspondent ನ್ಯೂಸ್ View
ಬೆಂಗಳೂರು, ಆಗಸ್ಟ್ 2: ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಕುರಿತ ಚರ್ಚೆಗಳ ನಡುವೆಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜುಲೈ 31ರಂದು ರಾತ್ರಿ ಆಪ್ತ ಶಾಸಕರೊಂದಿಗೆ ರಹಸ್ಯ ಸಭೆ ನಡೆಸಿದ್ದಾರೆ. ಗೃಹ ಕಚೇರಿ ಕಾವೇರಿಯಲ್ಲಿ ನಡೆದ ಈ ಸಭೆಯಲ್ಲಿ ಸಿಎಂ ಆಪ್ತ ಸಚಿವರಾದ ಬಸವರಾಜ್ ಬೊಮ್ಮಾಯಿ, ಆರ್.ಅಶೋಕ್, ವಿ.ಸೋಮಣ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕರಾದ ಹರೀಶ್ ಪೂಂಜಾ, ಬೆಳ್ಳಿ ಪ್ರಕಾಶ್, ಅಪ್ಪಚ್ಚು ರಂಜನ್ ಸೇರಿದಂತೆ 16ಕ್ಕೂ ಹೆಚ್ಚು ಶಾಸಕರು ಪಾಲ್ಗೊಂಡಿದ್ದರು.
ಸಂಪುಟ ವಿಸ್ತರಣೆ ಕೂಗು, ನಾಯಕತ್ವ ಬದಲಾವಣೆ ವಿಚಾರ ಚರ್ಚೆಗೀಡಾಗಿರುವಾಗಲೇ ಸಿಎಂ ಯಡಿಯೂರಪ್ಪ ತಮ್ಮ ಆಪ್ತರೊಂದಿಗೆ ರಹಸ್ಯವಾಗಿ ಸಭೆ ನಡೆಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ತಮ್ಮ ನಾಯಕತ್ವ ಬದಲಾಯಿಸಲು ವರಿಷ್ಠರು ನಿರ್ಧರಿಸಿದರೆ ಅದಕ್ಕೆ ಪ್ರತಿತಂತ್ರ ಹೆಣೆಯುವುದಕ್ಕಾಗಿಯೇ ಈ ಸಭೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಸಭೆಯಲ್ಲಿ ಸ್ವತಃ ಸಿಎಂ ಬಿಎಸ್ವೈ ಅವರೇ ಕೆಲವು ಶಾಸಕರಿಗೆ ಖುದ್ದಾಗಿ ಕರೆ ಮಾಡಿ ಬೆಂಬಲ ಗಿಟ್ಟಿಸುವ ಪ್ರಯತ್ನ ಮಾಡಿದ್ದಾರೆ. ಪ್ರಮುಖವಾಗಿ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಬಳ್ಳಾರಿ, ಕೊಪ್ಪಳ, ಬಾಗಲಕೋಟೆ, ಹುಬ್ಬಳ್ಳಿ ಧಾರವಾಡ ಹೀಗೆ ಹಲವು ಜಿಲ್ಲೆಗಳ ಶಾಸಕರ ಜೊತೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ನಡೆದಿರುವ ಕಹಿ ಘಟನೆಗಳನ್ನು ಮರೆತು ಯಾವುದೇ ಅಸಮಾಧಾನ ಇದ್ದರೂ ತಮ್ಮನ್ನು ಸಂಪರ್ಕಿಸುವಂತೆ ಶಾಸಕರಿಗೆ ಕಿವಿಮಾತು ಹೇಳಿದ್ದಾರೆ.
ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಪ್ರವಾಹ, ಸಂಪುಟ ವಿಸ್ತರಣೆ, ಉಚ ಚುನಾವಣೆ ಹೀಗೆ ಬಿಕ್ಕಟ್ಟುಗಳ ಸರಮಾಲೆ ಎದುರಾದ ಹಿನ್ನೆಲೆಯಲ್ಲಿ ಮೂಲ ಬಿಜೆಪಿ ಶಾಸಕರ ಬಗ್ಗೆ ಗಮನ ಕೊಡಲು ಸಾಧ್ಯವಾಗಿಲ್ಲ. ಮುಂದೆ ಅಂತಹ ಪ್ರಮಾದ ಆಗದಂತೆ ನೋಡಿಕೊಳ್ಳಲಾಗುವುದು. ಕ್ಷೇತ್ರದ ಯಾವುದೇ ಕೆಲಸಗಳಿದ್ದರೂ ತಮ್ಮನ್ನು ಸಂಪರ್ಕಿಸುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ನಾಯಕತ್ವ ಬದಲಾವಣೆಯ ಬಗ್ಗೆ ಕೂಗು ಕೇಳಿಬಂದರೆ, ತಮ್ಮ ಜೊತೆ ದೊಡ್ಡ ಸಂಖ್ಯೆಯಲ್ಲಿ ಶಾಸಕರಿದ್ದಾರೆ ಅನ್ನುವುದನ್ನು ವರಿಷ್ಠರ ಮುಂದೆ ತೋರಿಸಿಕೊಳ್ಳುವುದಕ್ಕಾಗಿಯೇ ಈ ಸಭೆ ನಡೆಸಿದ್ದಾರೆ ಎಂದು ಸಿಎಂ ಆಪ್ತ ಮೂಲಗಳಿಂದ ತಿಳಿದುಬಂದಿದೆ.
ನಾಲ್ಕು ದಿನಗಳ ಹಿಂದೆ ಡಿಸಿಎಂ ಲಕ್ಷ್ಮಣ ಸವದಿ ದೆಹಲಿ ನಾಯಕರನ್ನು ಭೇಟಿ ಮಾಡಿದ್ದು ಚರ್ಚೆಗೆ ಕಾರಣವಾಗಿತ್ತು. ಇತ್ತ ರಾಜ್ಯ ಬಿಜೆಪಿ ಸರಕಾರ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಡಿಸಿಎಂ ಅಂತರ ಕಾಯ್ದುಕೊಂಡಿದ್ದು ಮತ್ತು ದೆಹಲಿ ಮಟ್ಟದಲ್ಲಿ ಲಾಬಿ ನಡೆಸಿದ್ದು ಬೇರೆಯದ್ದೇ ಅರ್ಥ ಬರುವಂತೆ ಮಾಡಿತ್ತು. ಇದೇ ಸಂದರ್ಭದಲ್ಲಿ ನಾಯಕತ್ವ ಬದಲಾವಣೆಯ ವಿಚಾರ ಮುನ್ನೆಲೆಗೆ ಬಂದಿದ್ದಲ್ಲದೆ, ಲಕ್ಷ್ಮಣ ಸವದಿ ಮುಂದಿನ ಮುಖ್ಯಮಂತ್ರಿ ಎಂದು ಅವರ ಹಿಂಬಾಲಕರು ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದೂ ಆಗಿತ್ತು. ಇಂಥ ಸುದ್ದಿಗಳಿಂದ ವಿಚಲಿತರಾಗಿರುವ ಯಡಿಯೂರಪ್ಪ ತಮ್ಮ ಆಪ್ತ ಶಾಸಕರ ಜೊತೆ ಚರ್ಚಿಸಿ, ಪರ್ಯಾಯ ತಯಾರಿಯನ್ನೂ ಮಾಡಿಕೊಂಡಿದ್ದಾರೆ ಎನ್ನುವುದು ಸ್ಪಷ್ಟ.
ಹಾಗೆಂದು ಬಿ.ಎಲ್.ಸಂತೋಷ್ ಆಪ್ತನಾಗಿರುವ ಲಕ್ಷ್ಮಣ ಸವದಿ ಚಟುವಟಿಕೆ ಬಗ್ಗೆ ಯಡಿಯೂರಪ್ಪ ಅಂಡ್ ಟೀಂ ನಿರ್ಲಕ್ಷ್ಯ ವಹಿಸುವಂತೆಯೂ ಇಲ್ಲ. ವರ್ಷದ ಹಿಂದೆ ಬಿಜೆಪಿ ಅಧಿಕಾರಕ್ಕೆ ಬಂದಾಗ, ಯಾರೂ ನಿರೀಕ್ಷಿಸಿಯೇ ಇರದ ಶಾಸಕರೂ ಅಲ್ಲದ ಸವದಿಯನ್ನು ಡಿಸಿಎಂ ಪದವಿಗೇರಿಸಿದ್ದೂ ಬಿಜೆಪಿ ನಾಯಕರನ್ನೇ ಹುಬ್ಬೇರಿಸಿತ್ತು. ಉತ್ತರ ಕರ್ನಾಟಕದಲ್ಲಿ ಯಡಿಯೂರಪ್ಪ ವಿರುದ್ಧ ಮತ್ತೊಬ್ಬ ಲಿಂಗಾಯತ ನಾಯಕನನ್ನು ಬೆಳೆಸಬೇಕೆಂದು ಸಂತೋಷ್ ಬಣ ಸವದಿಯನ್ನು ಸಚಿವನನ್ನಾಗಿಸಿ, ಡಿಸಿಎಂ ಹುದ್ದೆ ನೀಡಿತ್ತು ಅನ್ನುವುದು ಗುಟ್ಟಾಗಿ ಉಳಿದಿಲ್ಲ. ಆದರೆ, ಲಕ್ಷ್ಮಣ ಸವದಿ ಡಿಸಿಎಂ ಆಗಿ ವರ್ಷ ಕಳೆದರೂ ಚಾರ್ಮ್ ಗಿಟ್ಟಿಸಿಕೊಳ್ಳಲು ಸಾಧ್ಯವಾಗಿಲ್ಲ. ಈಗ ಸಂಪುಟ ವಿಸ್ತರಣೆ ಅಥವ ಪುನಾರಚನೆ ಆದಲ್ಲಿ ಸವದಿಯನ್ನೇ ಬದಲಿಸಬೇಕು ಎನ್ನುವ ತಂತ್ರ ಯಡಿಯೂರಪ್ಪ ಬಣದಲ್ಲಿದೆ. ಇದರ ಸುಳಿವು ಅರಿತ ಲಕ್ಷ್ಮಣ ಸವದಿ ದೆಹಲಿಗೆ ತೆರಳಿದ್ದಾರೆ ಎನ್ನಲಾಗುತ್ತಿದ್ದರೂ, ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಅವರನ್ನು ಬದಲಿಸುವುದಕ್ಕೂ ಹೈಕಮಾಂಡ್ ಮಟ್ಟದಲ್ಲಿ ಒತ್ತಡಗಳಿವೆ ಎನ್ನುವ ಸುದ್ದಿ ಕೇಳಿಬಂದಿತ್ತು. ಈ ಸುದ್ದಿಯ ಬೆನ್ನು ಬಿದ್ದ ಸವದಿ ಬೆಂಬಲಿಗರು ಜಾಲತಾಣದಲ್ಲಿ ಸವದಿಯೇ ಮುಂದಿನ ಮುಖ್ಯಮಂತ್ರಿ ಅನ್ನುವ ರೀತಿ ವದಂತಿ ಹಬ್ಬಿಸಿದ್ದರು.
ಆದರೆ, ಸವದಿ ನಾಯಕತ್ವದ ಬಗ್ಗೆ ಬಹುತೇಕ ಶಾಸಕರು ಅಸಮ್ಮತಿ ಹೊಂದಿದ್ದಾರೆ. ಲಿಂಗಾಯತ ಸಮುದಾಯದಲ್ಲಿಯೇ ಲಕ್ಷ್ಮಣ ಸವದಿ ಬಗ್ಗೆ ಸದಭಿಪ್ರಾಯ ಇಲ್ಲ. ಇಂಥ ಸಂದರ್ಭದಲ್ಲಿ ಲಿಂಗಾಯತ ಸಮುದಾಯದ ಅನಭಿಷಿಕ್ತ ದೊರೆ ಎಂದೇ ಪರಿಗಣಿಸಲ್ಪಟ್ಟಿರುವ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದೂ ಸುಲಭದ ಮಾತಲ್ಲ. ಕಾಂಗ್ರೆಸ್- ಜೆಡಿಎಸ್ ನಿಂದ ಬಂದಿರುವ ಮಂದಿ ಸೇರಿ ರಾಜ್ಯದ ಉದ್ದಗಲದ ಬಹುತೇಕ ಶಾಸಕರು ಯಡಿಯೂರಪ್ಪ ಬಗ್ಗೆ ಒಲವು ಹೊಂದಿದ್ದಾರೆ. ಸದ್ಯಕ್ಕೆ ಬಿಜೆಪಿಯಲ್ಲಿ ಮಾಸ್ ಲೀಡರ್ ಅನ್ನುವ ಖ್ಯಾತಿ, ಛಾತಿ ಇರುವ ಏಕೈಕ ವ್ಯಕ್ತಿಯೂ ಯಡಿಯೂರಪ್ಪ ಮಾತ್ರ. ಇಂಥ ಸಂದರ್ಭದಲ್ಲಿ ಬಿಜೆಪಿ ಹೈಕಮಾಂಡ್ ಕೂಡ ನೇರಾನೇರವಾಗಿ ಯಡಿಯೂರಪ್ಪ ಅವರನ್ನು ಬದಲಿಸುವ ಗೊಡವೆಗೆ ಹೋಗಲ್ಲ ಅನ್ನುವುದೂ ಅಷ್ಟೇ ಸತ್ಯ.
ಹೀಗಿದ್ದರೂ ಕೋವಿಡ್ ನಿರ್ವಹಣೆ ವೈಫಲ್ಯ, ವಯಸ್ಸಿನ ಕಾರಣ, ಆಪರೇಶನ್ ಕಮಲ, ಸರಕಾರದ ವೈಫಲ್ಯ ಮುಂದಿಟ್ಟು ಯಡಿಯೂರಪ್ಪರನ್ನು ಬದಲಿಸಬೇಕೆಂಬ ಒತ್ತಡ ಹೈಕಮಾಂಡ್ ಮಟ್ಟದಲ್ಲಿ ನಡೆದಿದೆ. ಬಿ.ಎಲ್.ಸಂತೋಷ್ ಅಂಡ್ ಟೀಂ ಯಡಿಯೂರಪ್ಪ ಅವರನ್ನು ಸದ್ದಿಲ್ಲದೆ ತೆರೆಗೆ ಸರಿಸಲು ಪ್ಲಾನ್ ಹಾಕಿದ್ದೂ ಸತ್ಯ. ಇದಕ್ಕಾಗಿ ಬಿಎಸ್ವೈ ಬದಲಿಗೆ ಪರ್ಯಾಯ ನಾಯಕನನ್ನು ರಾಜ್ಯ ಬಿಜೆಪಿಯಲ್ಲಿ ಬೆಳೆಸಲು ತಯಾರಿಯನ್ನೂ ನಡೆಸಿದೆ. ಇದೇ ವೇಳೆ, ಪಕ್ಷದಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರನನ್ನು ಮುನ್ನೆಲೆಗೆ ತಂದು ತಂದೆಯನ್ನು ಬದಿಗೆ ಸರಿಸುವ ತಂತ್ರವೂ ಹೈಕಮಾಂಡ್ ನಾಯಕರಲ್ಲಿದೆ. ಅದೇ ಕಾರಣಕ್ಕೆ ವಿಜಯೇಂದ್ರನಿಗೆ ರಾಜ್ಯ ಉಪಾಧ್ಯಕ್ಷ ಹುದ್ದೆ ನೀಡಲಾಗಿದೆ ಎನ್ನಲಾಗುತ್ತಿದೆ. ರಣತಂತ್ರದಲ್ಲಿ ಮುಂಚೂಣಿಯಲ್ಲಿರುವ ವಿಜಯೇಂದ್ರ ಅವರನ್ನು ಲಿಂಗಾಯತ ಸಮುದಾಯ ಕೂಡ ಮುಂದಿನ ನಾಯಕ ಎಂದು ಒಪ್ಪಿಕೊಳ್ಳಲು ರೆಡಿಯಿದೆ. ಆದರೆ, ಹೈಕಮಾಂಡ್ ತಂತ್ರಕ್ಕೆ ಸಂತೋಷ್ ಬಣ ಯಾವ ರೀತಿಯ ಸಹಕಾರ ನೀಡಲಿದೆ ಎನ್ನುವುದನ್ನು ಈಗಲೇ ಹೇಳುವಂತಿಲ್ಲ.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
05-08-25 06:59 pm
HK News Desk
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
ಯೆಮೆನ್ ಬಳಿಯ ಸಮುದ್ರದಲ್ಲಿ ಪ್ಯಾಸೆಂಜರ್ ಹಡಗು ಮುಳುಗ...
04-08-25 05:11 pm
ಗೆಳೆಯನೊಂದಿಗೆ ಪತ್ನಿಯ ಸರಸ ; ಪರಿ ಪರಿ ಬೇಡಿಕೊಂಡರೂ...
04-08-25 02:16 pm
ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ ; ಅಶಿಸ್ತ...
03-08-25 05:44 pm
05-08-25 08:22 pm
Mangalore Correspondent
T-55 Battle Tank, Kadri, Mangalore: 1975ರ ಪಾಕ...
05-08-25 04:29 pm
Dcc Bank, Mangalore, Dr Udaya Kumar: ಸಹಕಾರ ಚಳ...
04-08-25 10:58 pm
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
Mangalore Congress: ಮೆಸ್ಕಾಂ ನೌಕರರ ಪಿಂಚಣಿಗೆ ಗ್...
04-08-25 09:51 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm