ಮಂಜೇಶ್ವರ ಮತಕ್ಷೇತ್ರ ; ಎಕೆಎಂ ಅಶ್ರಫ್ ವಿರುದ್ಧ ಮತ್ತೆ ತೊಡೆ ತಟ್ಟುತ್ತಾರಾ ಸುರೇಂದ್ರನ್? ಎಡಪಕ್ಷದ ಜಯಾನಂದ ವಿರುದ್ಧ ನಿಂತ ಡಿವೈಎಫ್ಐ, ಶಾನವಾಸ್ ಪರ ಎಸ್ ಡಿ ಪಿಐ ಬ್ಯಾಟಿಂಗ್

16-03-26 05:52 pm       HK News Staffer   ಕರ್ನಾಟಕ

ಕೇರಳದಲ್ಲಿ ಅಸೆಂಬ್ಲಿ ಚುನಾವಣೆಗೆ ದಿನ ನಿಗದಿಯಾಗಿದ್ದು, ಮತಹಬ್ಬಕ್ಕೆ ಇನ್ನೊಂದು ತಿಂಗಳೂ ಉಳಿದಿಲ್ಲ. ಎಪ್ರಿಲ್ 9ರಂದು ಒಂದೇ ದಿನ ಇಡೀ ರಾಜ್ಯದಲ್ಲಿ ಮತದಾರ ಭವಿಷ್ಯ ಬರೆಯಲಿದ್ದು ಇದರಿಂದಾಗಿ ಏಕಾಏಕಿ ಪಕ್ಷದ ನಾಯಕರಲ್ಲಿ ರಾಜಕೀಯ ಜ್ವರ ಹತ್ತಿಕೊಂಡಿದೆ.

ಕಾಸರಗೋಡು, ಮಾರ್ಚ್ 16: ಕೇರಳದಲ್ಲಿ ಅಸೆಂಬ್ಲಿ ಚುನಾವಣೆಗೆ ದಿನ ನಿಗದಿಯಾಗಿದ್ದು, ಮತಹಬ್ಬಕ್ಕೆ ಇನ್ನೊಂದು ತಿಂಗಳೂ ಉಳಿದಿಲ್ಲ. ಎಪ್ರಿಲ್ 9ರಂದು ಒಂದೇ ದಿನ ಇಡೀ ರಾಜ್ಯದಲ್ಲಿ ಮತದಾರ ಭವಿಷ್ಯ ಬರೆಯಲಿದ್ದು ಇದರಿಂದಾಗಿ ಏಕಾಏಕಿ ಪಕ್ಷದ ನಾಯಕರಲ್ಲಿ ರಾಜಕೀಯ ಜ್ವರ ಹತ್ತಿಕೊಂಡಿದೆ. ರಾಜಕೀಯ ಪಕ್ಷಗಳಲ್ಲಿ ಈ ಬಾರಿ ಅಭ್ಯರ್ಥಿ ಯಾರು, ಹಾಲಿ ಶಾಸಕರ ಬದಲಾವಣೆ ಆಗುತ್ತಾ ಇತ್ಯಾದಿ ಪ್ರಶ್ನೆಗಳು ಎದ್ದಿದ್ದರೆ, ಇತ್ತ ಮತದಾರ, ಕಾರ್ಯಕರ್ತರಲ್ಲಿ ಅಭ್ಯರ್ಥಿ ವಿಚಾರದಲ್ಲಿ ಕುತೂಹಲ ಮನೆಮಾಡಿದೆ.

ಕಳೆದೆರಡು ದಶಕದಿಂದಲೂ ಮುಸ್ಲಿಂ ಲೀಗ್ ಕೋಟೆಯಲ್ಲಿ ಸಿಕ್ಕಿಕೊಂಡಿರುವ ಮಂಜೇಶ್ವರ ಮತ್ತು ಕಾಸರಗೋಡು ಕ್ಷೇತ್ರದಲ್ಲಿ ಈ ಬಾರಿಯಾದ್ರೂ ಬದಲಾವಣೆಯ ಗಾಳಿ ಬೀಸುತ್ತಾ ಎನ್ನುವ ಕುತೂಹಲದ ನೋಟ ಜನರಲ್ಲಿದೆ. ಇದೇ ವೇಳೆ, ಮಂಜೇಶ್ವರ ಕ್ಷೇತ್ರದಲ್ಲಿ ಬಹುತೇಕ ಅಭ್ಯರ್ಥಿಗಳು ಯಾರೆಂದು ಫೈನಲ್ ಆದಂತೆ ತೋರುತ್ತಿದೆ. ಬಿಜೆಪಿಯಲ್ಲಿ ಕೇಸರಿ ಹುಲಿ, ಮಾಜಿ ರಾಜ್ಯಾಧ್ಯಕ್ಷ ಸುರೇಂದ್ರನ್ ಸ್ಪರ್ಧಿಸುವುದು ಬಹುತೇಕ ಖಾತ್ರಿಯಾಗಿದ್ದು, ಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ - ಲೀಗ್ ಮೈತ್ರಿಯ ಯುಡಿಎಫ್ ನಿಂದ ಹಾಲಿ ಶಾಸಕ ಎಕೆಎಂ ಅಶ್ರಫ್ ಮತ್ತೆ ಅಭ್ಯರ್ಥಿಯಾದರೆ, ಸಿಪಿಎಂನಿಂದ ಪಾರ್ಟಿಯ ಜಿಲ್ಲಾ ಸೆಕ್ರಟರಿ ಕೆ.ಆರ್ ಜಯಾನಂದ ಅವರ ಹೆಸರು ಫೈನಲ್ ಆಗಿದೆ ಎನ್ನಲಾಗುತ್ತಿದೆ.

ಮಂಜೇಶ್ವರ ಕ್ಷೇತ್ರದಿಂದ ಇತ್ತೀಚೆಗೆ ಲೀಗ್ ನಿಂದ ಬಂದಿದ್ದ ಶಾನವಾಸ್ ಪಾದೂರು ಸಿಪಿಎಂ ಅಭ್ಯರ್ಥಿಯಾಗಲು ಆಕಾಂಕ್ಷಿಯಾಗಿದ್ದರು. ಆದರೆ ಲೀಗ್ ಎದುರು ಮತ್ತೊಬ್ಬ ಮುಸ್ಲಿಂ ಅಭ್ಯರ್ಥಿಯಾದರೆ ಇಲ್ಲಿ ಬಿಜೆಪಿಗೆ ಪ್ಲಸ್ ಆಗುತ್ತದೆ ಎಂಬ ಒಳನೋಟದಿಂದಾಗಿ ಮುಸ್ಲಿಂ ಮುಖಂಡರೇ ಅಡ್ಡಗಾಲು ಹಾಕಿದ್ದಾರೆ. ಈ ಕಾರಣದಿಂದ ಶಾನವಾಸ್ ಬದಲು ಪಕ್ಷದ ಜಿಲ್ಲಾ ಸೆಕ್ರಟರಿ ಜಯಾನಂದ ಅವರನ್ನು ಅಭ್ಯರ್ಥಿ ಮಾಡಲು ಒಳಒಪ್ಪಂದ ಆಗಿದೆ ಎನ್ನುವ ವದಂತಿ ಹಬ್ಬಿದೆ. ಆದರೆ ಈ ರೀತಿಯ ಒಳಒಪ್ಪಂದ ಮೂಲಕ ಜಯಾನಂದ ಅವರ ಹೆಸರನ್ನು ಸೂಚಿಸಿರುವುದಕ್ಕೆ ಪಕ್ಷದ ಒಳಗಡೆಯೇ ವಿರೋಧ ಕೇಳಿಬಂದಿದೆ. ಬಹಳಷ್ಟು ಪಂಚಾಯತ್ ಮಟ್ಟದಲ್ಲಿ ಕಾರ್ಯಕರ್ತರು ಇವರ ಅಭ್ಯರ್ಥಿ ತನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

 

89 ಮತಗಳಿಂದ ಸೋತಿದ್ದ ಸುರೇಂದ್ರ:

 

2016ರ ಚುನಾವಣೆಯಲ್ಲಿ ಮಂಜೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸುರೇಂದ್ರನ್ ಕೇವಲ 89 ಮತಗಳಿಂದ ಸೋಲು ಅನುಭವಿಸಿದ್ದರು. ಲೀಗ್ ಅಭ್ಯರ್ಥಿ ಪಿಬಿ ಅಬ್ದುಲ್ ರಜಾಕ್ 56870 ಮತಗಳನ್ನು ಪಡೆದಿದ್ದರೆ, ಸುರೇಂದ್ರನ್ ಪರವಾಗಿ 56781 ಮತಗಳು ಬಿದ್ದಿದ್ದವು. ಸಿಪಿಎಂ ಅಭ್ಯರ್ಥಿ ಸಿ.ಎಚ್ ಕುಂಞಂಬು 42565 ಮತ ಪಡೆದಿದ್ದರು. ಅಬ್ದುಲ್ ರಜಾಕ್ ನಿಧನದಿಂದಾಗಿ 2019ರಲ್ಲಿ ಉಪ ಚುನಾವಣೆ ನಡೆದಾಗ, ಬಿಜೆಪಿಯಿಂದ ರವೀಶ ತಂತ್ರಿ(57484 ಮತ) ಅಭ್ಯರ್ಥಿಯಾಗಿದ್ದರೆ, ಲೀಗಿನಿಂದ ಸ್ಪರ್ಧಿಸಿದ್ದ ಎಂ.ಸಿ ಕಮರುದ್ದೀನ್ ಪರ 65407 ಮತ, ಸಿಪಿಎಂ ಅಭ್ಯರ್ಥಿ ಶಂಕರ್ ರೈ ಮಾಸ್ಟರ್ ಗೆ 38233 ಮತಗಳು ಬಿದ್ದಿದ್ದವು. ಸುರೇಂದ್ರನ್ ಪರವಾಗಿದ್ದ ಒಲವನ್ನು ಮತವಾಗಿ ಪರಿವರ್ತಿಸಿಕೊಳ್ಳಲು ತಂತ್ರಿ ಎಡವಿದ್ದರು.

2021ರ ಚುನಾವಣೆಯಲ್ಲಿ ಮಂಜೇಶ್ವರ ಕ್ಷೇತ್ರದಲ್ಲಿ ಸುರೇಂದ್ರನ್ ಮತ್ತೆ ಅಭ್ಯರ್ಥಿಯಾಗಿದ್ದರು. ಈ ವೇಳೆಗೆ, ಮಲಯಾಳಿಯಾದರೂ ಬಹುತೇಕ ಕನ್ನಡ ಮಾತನಾಡುವುದನ್ನೂ ಅರಿತುಕೊಂಡಿದ್ದರು. ಹೀಗಾಗಿ ಲೀಗ್ ಅಭ್ಯರ್ಥಿ ಎಕೆಎಂ ಅಶ್ರಫ್ (65758) ವಿರುದ್ಧ ಸುರೇಂದ್ರನ್ (65013) ಸೋಲಿನ ಅಂತರ 745 ಆಗಿತ್ತು. ಸಿಪಿಎಂ ಅಭ್ಯರ್ಥಿ ವಿವಿ ರಮೇಶನ್ ಪರವಾಗಿ 40639 ಮತಗಳು ಬಿದ್ದಿದ್ದವು. ಆದರೆ, 2019ರಲ್ಲಿ ಬಿಜೆಪಿಯ 8077 ಮತಗಳ ಅಂತರವನ್ನು ಸುರೇಂದ್ರನ್ ಮತ್ತೆ ಕಡಿಮೆಗೊಳಿಸಿದ್ದರು.

ಬಿಜೆಪಿ ಒಳ ಜಗಳದಿಂದಲೇ ಸೋಲು:

ಕಳೆದ ಮೂರು ಚುನಾವಣೆಯಲ್ಲಿ ಬಿಜೆಪಿ- ಯುಡಿಎಫ್ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದ್ದು, ಎಡರಂಗದ ಒಂದಷ್ಟು ಮತಗಳು ಬಿಜೆಪಿ ಕಡೆಗೆ ವಾಲಿರುವುದನ್ನು ತೋರಿಸುತ್ತದೆ. ಹಿಂದೆ ಸಿಪಿಎಂ- ಕಾಂಗ್ರೆಸ್ ನಡುವೆ ಇರುತ್ತಿದ್ದ ಸ್ಪರ್ಧೆ ಈಗ ಬಿಜೆಪಿ- ಲೀಗ್ ಮಧ್ಯೆ ಆಗಿದೆ. 2016ರಲ್ಲಿ ಕೇವಲ 89 ಮತಗಳಿಂದ ಸೋತಿದ್ದ ಬಿಜೆಪಿಗೆ ಇಲ್ಲಿ ಗೆಲುವು ಕಷ್ಟ ಅಲ್ಲ ಅನ್ನುವುದನ್ನು ಮತದಾರ ತೋರಿಸಿಕೊಟ್ಟಿದ್ದಾನೆ. ಆದರೆ, ಪ್ರತಿ ಬಾರಿಯೂ ಪಕ್ಷದೊಳಗಿನ ಗುಂಪುಗಾರಿಕೆ, ಒಳ ಜಗಳವೇ ಇಲ್ಲಿ ಸೋಲಿಗೆ ಷರಾ ಬರೆಯುತ್ತದೆ ಎನ್ನುವುದು ಸತ್ಯ. 

ಸುರೇಂದ್ರನ್ ಜಿಲ್ಲೆಯ ಹೊರಗಿನ ವ್ಯಕ್ತಿಯಾದರೂ, ಸ್ಥಳೀಯ ನಾಯಕರ ಗುಂಪುಗಾರಿಕೆ ನಡುವೆ ಕಾರ್ಯಕರ್ತರ ಒಲವು ಅವರ ಪರವಾಗಿದೆ. ಈ ಬಾರಿಯೂ ಪಕ್ಷದ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ಅವರನ್ನು ಅಭ್ಯರ್ಥಿ ಮಾಡುವ ಬಗ್ಗೆ ಮಾತು ಕೇಳಿಬಂದಿತ್ತು. ಆದರೆ ಈ ಹೆಸರಿನ ಬಗ್ಗೆ ಪಕ್ಷದ ಒಳಗಡೆಯೇ ಬಹಳಷ್ಟು ವಿರೋಧಗಳಿದ್ದವು. ಏಕಾಏಕಿ ಲೋಕಸಭಾ ಅಭ್ಯರ್ಥಿಯಾಗಿದ್ದು ಆನಂತರ ಪಕ್ಷದ ಜಿಲ್ಲಾಧ್ಯಕ್ಷೆ ಆಗಿದ್ದು ಸ್ಥಳೀಯ ನಾಯಕ ಮಣಿಗಳಿಗೆ ಹಿಡಿಸಿರಲಿಲ್ಲ. ಕಳೆದ ಬಾರಿ ಸಂಸತ್ ಚುನಾವಣೆಗೆ ಅಭ್ಯರ್ಥಿ ಮಾಡಿದ್ದಕ್ಕೂ ವಿರೋಧ ಬಂದಿತ್ತಲ್ಲದೆ, ಮಂಜೇಶ್ವರ ಕ್ಷೇತ್ರದಲ್ಲಿ ಮತ ಗಳಿಕೆಯೂ ಕಡಿಮೆಯಾಗಿತ್ತು. ಆದರೆ ಪಕ್ಷದಲ್ಲಿ ಕೇಂದ್ರ ಮಟ್ಟದ ವರೆಗೂ ಸಂಪರ್ಕ ಬೆಳೆಸಿಕೊಂಡಿರುವ ಅಶ್ವಿನಿ ಮಂಜೇಶ್ವರ ಅಥವಾ ಕಾಸರಗೋಡು ಕ್ಷೇತ್ರದಲ್ಲಿ ಕಣಕ್ಕಿಳಿಯಲು ಕಸರತ್ತು ನಡೆಸಿದ್ದಾರೆ.

ಶಾನವಾಸ್ ಪರ ಎಸ್ಡಿಪಿಐ, ಡಿವೈಎಫ್ಐ ಬ್ಯಾಟಿಂಗ್:

ಐಯುಎಂಎಲ್ ಬಗ್ಗೆ ಮುನಿಸಿಕೊಂಡಿರುವ ಎಸ್ಡಿಪಿಐ ಈ ಬಾರಿ ಮಂಜೇಶ್ವರ ಕ್ಷೇತ್ರದಲ್ಲಿ ಶಾನವಾಸ್ ಪಾದೂರು ಅವರನ್ನು ಎಲ್ ಡಿಎಫ್ ಅಭ್ಯರ್ಥಿ ಮಾಡಿದರೆ ಗೆಲ್ಲಿಸಿಕೊಡುತ್ತೇವೆ ಎಂದು ತೊಡೆ ತಟ್ಟಿದೆ. ಶಾನವಾದ್ ಮಾಜಿ ಕಾಂಗ್ರೆಸ್ ಮುಖಂಡ ಪಾದೂರು ಕುಂಞಂಬು ಅವರ ಪುತ್ರನಾಗಿದ್ದು, 2020ರಲ್ಲಿ ಕಾಂಗ್ರೆಸ್ ಜಿಪಂ ಟಿಕೆಟ್ ಸಿಗದ ಬೇಸರದಲ್ಲಿ ಸಿಪಿಎಂ ಸೇರಿದ್ದರು. ಎಡರಂಗ ಬೆಂಬಲದಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಲೀಗ್ ಅಭ್ಯರ್ಥಿ ವಿರುದ್ಧ 139 ಮತಗಳಿಂದ ಗೆದ್ದಿದ್ದರು. ಆನಂತರ, ಕಾಸರಗೋಡು ಜಿಲ್ಲಾ ಪಂಚಾಯತ್ ನಲ್ಲಿ ಉಪಾಧ್ಯಕ್ಷರಾಗಿದ್ದರು. ಶಾನವಾಸ್ ಪರವಾಗಿ ಡಿವೈಎಫ್ಐ ಮತ್ತು ಸಿಪಿಎಂ ಯುವ ನಾಯಕರಿದ್ದು ಬಾಯಾರ್, ಪೈವಳಿಕೆ, ಪುತ್ತಿಗೆ, ಬಂದಿಯೋಡ್, ಉಪ್ಪಳ, ಹೊಸಂಗಡಿ, ವರ್ಕಾಡಿ, ಮೀಂಜದಲ್ಲಿ ಕೆ.ಆರ್ ಜಯಾನಂದ ವಿರುದ್ಧ ಸಹಿ ಅಭಿಯಾನ ನಡೆಸಿದ್ದಾರೆ. ಜಯಾನಂದ ಅವರನ್ನು ಬದಲಿಸಿ ಶಾನವಾಸ್ ಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಜಯಾನಂದ ಪಾರ್ಟಿ ನೆಲೆಯಲ್ಲಿ ಒಳ್ಳೆಯ ವ್ಯಕ್ತಿಯೇ ಆದರೂ, ಪಾರ್ಟಿ ಹೊರಗಡೆ ಅವರಿಗೆ ಬೆಂಬಲ ಇಲ್ಲ ಎಂದು ಡಿವೈಎಫ್ಐ ನಾಯಕ ಮೊಹಮ್ಮದ್ ಝಕರಿಯಾ ಹೇಳಿದ್ದು, ಯಾಕೆ ನೀವು ಐಯುಎಂಎಲ್- ಬಿಜೆಪಿ ನಡುವೆ ಸ್ಪರ್ಧೆ ನೋಡಬೇಕು. ಅವರಿಬ್ಬರೂ ಧರ್ಮ ಮುಂದಿಟ್ಟು ಮತ ಪಡೆಯುತ್ತಾರೆ. ಅವರ ಈ ಓಟವನ್ನು ನಾವು ಮುರಿಯಬೇಕಿದ್ದು, ಸಿಪಿಎಂ ಅಭ್ಯರ್ಥಿಯಾದರೆ ನಾವು ಗೆಲ್ಲಿಸುತ್ತೇವೆ. ಜಯಾನಂದ ಅಭ್ಯರ್ಥಿಯಾದರೆ ಅಶ್ರಫ್ ಗೆಲುವು ಸುಲಭವಾಗುತ್ತದೆ ಎಂದಿದ್ದಾರೆ. ಆದರೆ ಸಿಪಿಎಂ ರಾಜ್ಯ ನಾಯಕರು ಜಯಾನಂದ ಪರವಾಗಿದ್ದು, 2021ರಲ್ಲೂ ಇದೇ ರೀತಿಯ ವಾತಾವರಣ ಇತ್ತು. ಈ ಹೊತ್ತಿನಲ್ಲಿ ಅಭ್ಯರ್ಥಿ ಬದಲಿಸುವುದು ಬಿಜೆಪಿ ಪರ ಇದ್ದೇವೆ ಎನ್ನುವುದನ್ನು ಸೂಚಿಸುತ್ತದೆ ಎಂದಿದ್ದಾರೆ.

With the date for the Kerala Assembly elections announced and less than a month remaining for polling, political activity has intensified across the state. Voting for the entire state will take place in a single phase on April 9, triggering intense discussions within political parties over candidate selection while voters and party workers closely watch the developments.