ಬ್ರೇಕಿಂಗ್ ನ್ಯೂಸ್
14-07-26 07:55 pm HK News Staffer ಕರಾವಳಿ
ಮಂಗಳೂರು, ಜುಲೈ 14 : ಕೇವಲ ಮೂರು ವರ್ಷಗಳ ಹಿಂದೆ ಈಜು ಕಲಿತಿದ್ದ ಮಂಗಳೂರಿನ ವೈದ್ಯರೊಬ್ಬರು ಇಂದು ವಿಶ್ವದ ಅತ್ಯಂತ ಕಠಿಣ ಸಾಗರ ಸಾಹಸಗಳಲ್ಲಿ ಒಂದಾದ ಇಂಗ್ಲಿಷ್ ಕಡಲ್ಗಾಲುವೆ ದಾಟುವ ಮೂಲಕ ಕರಾವಳಿಯ ಕೀರ್ತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಮಂಗಳೂರಿನ ಖ್ಯಾತ ಕ್ಯಾನ್ಸರ್ ತಜ್ಞ (ಮೆಡಿಕಲ್ ಆಂಕಾಲಜಿಸ್ಟ್) ಡಾ. ಗುರುಪ್ರಸಾದ್ ಭಟ್, ಜುಲೈ 3ರಂದು ಇಂಗ್ಲೆಂಡ್ನ ಡೋವರ್ನಿಂದ ಫ್ರಾನ್ಸ್ ವರೆಗೆ ನಡೆದ ‘ಇಂಗ್ಲಿಷ್ ಚಾನೆಲ್ ರಿಲೇ ಸ್ವಿಮ್’ನಲ್ಲಿ ಭಾಗವಹಿಸಿ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇಂಗ್ಲಿಷ್ ಚಾನೆಲ್ ದಾಟಿದ ಮಂಗಳೂರಿನ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.
ವಿಶ್ವದ ಅತ್ಯಂತ ಸವಾಲಿನ ಸಮುದ್ರ ಮಾರ್ಗಗಳಲ್ಲಿ ಒಂದೆಂದು ಪರಿಗಣಿಸಲ್ಪಡುವ ಇಂಗ್ಲಿಷ್ ಚಾನೆಲ್ನಲ್ಲಿ ಯಶಸ್ವಿಯಾಗಿ ಈಜುವುದು ಹಲವರ ಕನಸುಗಳಲ್ಲಿ ಒಂದು. ಥರಗುಟ್ಟುವ ಥಂಡಿ ನೀರು, ಪ್ರಬಲ ಅಲೆಗಳು, ವಿರುದ್ಧ ದಿಕ್ಕಿನ ಸಮುದ್ರ ಪ್ರವಾಹಗಳು, ಜೆಲ್ಲಿ ಫಿಶ್ ದಾಳಿ ಸೇರಿದಂತೆ ಹಲವು ಸವಾಲುಗಳನ್ನು ಮೆಟ್ಟಿ ನಿಂತು ಡಾ. ಗುರುಪ್ರಸಾದ್ ಅವರ ತಂಡ 13 ಗಂಟೆಗಳ ಹೋರಾಟದ ಬಳಿಕ ಫ್ರಾನ್ಸ್ ಕರಾವಳಿಯನ್ನು ತಲುಪಿ ವಿಜಯದ ನಗೆ ಬೀರಿದೆ.
32 ಕಿ.ಮೀ. ಅಲ್ಲ... ವಾಸ್ತವದಲ್ಲಿ 60 ಕಿ.ಮೀ. ಹೋರಾಟ!
ನಕ್ಷೆಯಲ್ಲಿ ಇಂಗ್ಲೆಂಡ್ ಮತ್ತು ಫ್ರಾನ್ಸ್ ನಡುವಿನ ದೂರ ಕೇವಲ 32 ಕಿಲೋಮೀಟರ್ ಎಂದು ಕಾಣಿಸಿದರೂ, ಸಮುದ್ರದಲ್ಲಿ ಅದು ಎಂದಿಗೂ ನೇರ ಮಾರ್ಗವಾಗುವುದಿಲ್ಲ. ಅಟ್ಲಾಂಟಿಕ್ ಮಹಾಸಾಗರ ಹಾಗೂ ಉತ್ತರ ಸಮುದ್ರದ ವಿರುದ್ಧ ದಿಕ್ಕಿನ ಪ್ರಬಲ ಪ್ರವಾಹಗಳಿಂದ ಈಜುಗಾರರು ‘S’ ಆಕಾರದಲ್ಲಿ ಸಾಗಬೇಕಾಗುತ್ತದೆ. ಇದರ ಪರಿಣಾಮವಾಗಿ ಒಟ್ಟು ಕ್ರಮಿಸಬೇಕಾದ ದೂರ 50 ರಿಂದ 60 ಕಿಲೋಮೀಟರ್ ವರೆಗೆ ಹೆಚ್ಚಾಗುತ್ತದೆ.
"ಸಮುದ್ರದ ಮಧ್ಯೆ ಎರಡೂ ದೇಶಗಳ ಕರಾವಳಿ ಕಾಣುತ್ತದೆ. ಆದರೆ ಫ್ರಾನ್ಸ್ ಯಾವ ದಿಕ್ಕಿನಲ್ಲಿದೆ ಎಂಬುದೇ ಅರ್ಥವಾಗುವುದಿಲ್ಲ. ಪ್ರವಾಹಗಳು ನಿರಂತರವಾಗಿ ದಿಕ್ಕು ಬದಲಾಯಿಸುತ್ತಿರುತ್ತವೆ. ಸ್ವಲ್ಪ ನಿಧಾನವಾದರೂ ಫ್ರಾನ್ಸ್ ಬದಲು ಬೆಲ್ಜಿಯಂ ನೀರಿಗೆ ತೇಲಿ ಹೋಗುವ ಅಪಾಯವಿರುತ್ತದೆ," ಎಂದು ಡಾ. ಗುರುಪ್ರಸಾದ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಮಗ ಬಿಟ್ಟ ಈಜನ್ನು ಮುಂದುವರಿಸಿದ ತಂದೆ
ಈ ಸಾಧನೆಯ ಹಿಂದೆ ಒಂದು ವಿಶೇಷ ಕಥೆಯೂ ಇದೆ. ತಮ್ಮ ಮಗನನ್ನು ಈಜು ಕಲಿಕೆಗೆ ಸೇರಿಸಿದ್ದ ಗುರುಪ್ರಸಾದ್, ಮಗ ಅರ್ಧದಲ್ಲೇ ತರಬೇತಿ ಬಿಟ್ಟ ನಂತರ ಅದೇ ತರಬೇತಿ ಕೇಂದ್ರದಲ್ಲಿ ತಾವೇ ಈಜು ಕಲಿಯಲು ಆರಂಭಿಸಿದರು. ಕೇವಲ ಮೂರು ವರ್ಷಗಳ ಅಭ್ಯಾಸದೊಂದಿಗೆ ಇಂದು ವಿಶ್ವದ ಅತ್ಯಂತ ಕಠಿಣ ಸಮುದ್ರ ಸವಾಲನ್ನು ಗೆದ್ದಿರುವುದು ಅವರ ಅಚಲ ಸಂಕಲ್ಪಕ್ಕೆ ಸಾಕ್ಷಿಯಾಗಿದೆ.
ಫ್ರಾನ್ಸ್ ತಲುಪಲೇಬೇಕು, ಇಲ್ಲದಿದ್ದರೆ ಅನರ್ಹ !
ಇಂಗ್ಲಿಷ್ ಚಾನೆಲ್ ಈಜಿನಲ್ಲಿ ಕಟ್ಟುನಿಟ್ಟಿನ ನಿಯಮಗಳಿವೆ. ಈಜುಗಾರರು ಕಡ್ಡಾಯವಾಗಿ ಫ್ರಾನ್ಸ್ ಕರಾವಳಿಯನ್ನೇ ತಲುಪಬೇಕು. ಪ್ರವಾಹಕ್ಕೆ ಸಿಲುಕಿ ಬೆಲ್ಜಿಯಂ ಕಡೆಗೆ ತೇಲಿದರೆ ಸಂಪೂರ್ಣ ಪ್ರಯತ್ನವೇ ಅಮಾನ್ಯವಾಗುತ್ತದೆ. "ನಮ್ಮೊಂದಿಗೆ ನಾಲ್ಕು ತಂಡಗಳು ಸ್ಪರ್ಧಿಸಿದ್ದವು. ಅವುಗಳಲ್ಲಿ ಎರಡು ತಂಡಗಳು ಮಾತ್ರ ಯಶಸ್ವಿಯಾದವು. ಒಂದು ತಂಡ ಬೆಲ್ಜಿಯಂ ಕಡೆಗೆ ತೇಲಿಹೋದ ಕಾರಣ ಡಿಸ್ಕ್ವಾಲಿಫೈ ಆಯಿತು. ಮತ್ತೊಂದು ತಂಡದ ಸೋಲೋ ಈಜುಗಾರ ಅಲೆಗಳ ತೀವ್ರತೆಗೆ ಮಣಿದು ಮಧ್ಯದಲ್ಲೇ ಸ್ಪರ್ಧೆಯಿಂದ ಹಿಂದೆ ಸರಿದರು," ಎಂದು ಅವರು ವಿವರಿಸಿದರು.
ಬೋಟ್ ಮುಟ್ಟುವಂತಿಲ್ಲ... ನೀರಲ್ಲೇ ಆಹಾರ ಸೇವನೆ!
ಈ ಸ್ಪರ್ಧೆಯಲ್ಲಿ ವೆಟ್ಸೂಟ್ ಧರಿಸಲು ಅವಕಾಶವಿಲ್ಲ. ಕೇವಲ ಸ್ವಿಮ್ಮಿಂಗ್ ಟ್ರಂಕ್ಸ್, ಕ್ಯಾಪ್ ಹಾಗೂ ಗಾಗಲ್ಸ್ ಮಾತ್ರ ಬಳಸಬಹುದು. ಜೊತೆಯಲ್ಲಿರುವ ಬೋಟ್ನ್ನು ಯಾವುದೇ ಕಾರಣಕ್ಕೂ ಸ್ಪರ್ಶಿಸುವಂತಿಲ್ಲ. ರಿಲೇ ಮಾದರಿಯಲ್ಲಿ ಪ್ರತಿ ಗಂಟೆಗೆ ಒಬ್ಬ ಈಜುಗಾರ ನೀರಿಗೆ ಇಳಿಯುತ್ತಾರೆ. ಆಹಾರ ಅಥವಾ ಎನರ್ಜಿ ಡ್ರಿಂಕ್ ಬೇಕಾದರೆ ಬೋಟ್ನಿಂದ ಹಗ್ಗಕ್ಕೆ ಕಟ್ಟಿದ ಬಾಟಲಿಯನ್ನು ನೀರಿಗೆ ಎಸೆಯಲಾಗುತ್ತದೆ. ಈಜುತ್ತಲೇ ಅದನ್ನು ಸೇವಿಸಿ ಮತ್ತೆ ಈಜು ಮುಂದುವರಿಸಬೇಕು. "ಅಲೆಗಳು ಅನುಕೂಲಕರವಾಗಿದ್ದರೆ ಗಂಟೆಗೆ 6–7 ಕಿ.ಮೀ. ಸಾಗಬಹುದು. ಆದರೆ ವಿರುದ್ಧ ಪ್ರವಾಹ ಎದುರಾದರೆ ಗಂಟೆಗಟ್ಟಲೆ ಶ್ರಮಿಸಿದರೂ 2 ಕಿ.ಮೀ. ಕ್ರಮಿಸುವುದೇ ಕಷ್ಟ," ಎಂದು ಅವರು ತಿಳಿಸುತ್ತಾರೆ.
ಜೆಲ್ಲಿ ಫಿಶ್ ಕಚ್ಚಿದರೆ ಭಾರೀ ಉರಿ!
ಇಂಗ್ಲಿಷ್ ಚಾನೆಲ್ನಲ್ಲಿ ಶಾರ್ಕ್ಗಳಿಗಿಂತ ಜೆಲ್ಲಿ ಫಿಶ್ಗಳೇ ಹೆಚ್ಚು ಅಪಾಯಕಾರಿ ಎನ್ನುತ್ತಾರೆ ಗುರುಪ್ರಸಾದ್. "ಜೆಲ್ಲಿ ಫಿಶ್ ಕಚ್ಚಿದರೆ ತೀವ್ರ ಉರಿ ಹಾಗೂ ನೋವು ಉಂಟಾಗುತ್ತದೆ. ಅಲ್ಲಿನ ಜೆಲ್ಲಿ ಫಿಶ್ಗಳು ನಮ್ಮ ಕರಾವಳಿಯಲ್ಲಿ ಸಿಗುವವುಗಳಿಗಿಂತ ದೊಡ್ಡದಾಗಿರುತ್ತವೆ. ಆದರೆ ಮಂಗಳೂರಿನ ಸಮುದ್ರದಲ್ಲಿ ಈಜುವ ಅನುಭವ ಇದ್ದರೆ ಇಂತಹ ಸವಾಲುಗಳನ್ನು ಎದುರಿಸಲು ಆತ್ಮವಿಶ್ವಾಸ ಬರುತ್ತದೆ," ಎಂದು ಅವರು ಹೇಳಿದ್ದಾರೆ.


ಕ್ಯಾನ್ಸರ್ ವೈದ್ಯನಿಗೆ ಈಜೇ ಮಾನಸಿಕ ಔಷಧ
ಪ್ರತಿದಿನ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯನಾಗಿ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಈಜು, ಓಟ ಹಾಗೂ ಸೈಕ್ಲಿಂಗ್ ದೊಡ್ಡ ಶಕ್ತಿಯಾಗಿದೆ ಎಂದು ಗುರುಪ್ರಸಾದ್ ಹೇಳುತ್ತಾರೆ. "ಕೆಲ ದಿನ ನೂರು ರೋಗಿಗಳನ್ನು ನೋಡುತ್ತೇವೆ. ಕೆಲ ದಿನ ಹತ್ತು ಸಾವುಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಚಿಕಿತ್ಸೆ ಯಶಸ್ವಿಯಾಗದೇ ಹೋದಾಗ ಮನಸ್ಸು ತುಂಬಾ ಭಾರವಾಗುತ್ತದೆ. ಆಗ ಈಜು, ಓಟ ಮತ್ತು ಸೈಕ್ಲಿಂಗ್ ನನ್ನ ಮನಸ್ಸನ್ನು ಸಂಪೂರ್ಣವಾಗಿ ಹಗುರಗೊಳಿಸುತ್ತವೆ. ವ್ಯಾಯಾಮವೇ ನನ್ನ ಪಾಲಿಗೆ ಮಾನಸಿಕ ಚಿಕಿತ್ಸೆಯಾಗಿದೆ," ಎಂದು ಅವರು ಮನದಾಳದ ಮಾತು ಹಂಚಿಕೊಂಡರು.
ಆರು ಜನರ ಬಲಿಷ್ಠ ತಂಡ
ಈ ಸಾಹಸವನ್ನು ಶ್ರೀಕಾಂತ್ ವಿಶ್ವನಾಥನ್ ಅವರ ಮಾರ್ಗದರ್ಶನದಲ್ಲಿ ಆರು ಸದಸ್ಯರ ತಂಡ ಯಶಸ್ವಿಯಾಗಿ ಪೂರ್ಣಗೊಳಿಸಿತು. ತಂಡದಲ್ಲಿ 14 ವರ್ಷದ ಅರ್ನವ್ ಜೌರಾ, 16 ವರ್ಷದ ದಿವ್ಯಾ ಮಹಾಜನ್, ರಘುನಂದನ್ ಗಂಗಪ್ಪ, ಪೈಲಟ್ ದೀಪಿಕಾ ರಾಣಾ, ಅಂಕಿತಾ ಕೊನ್ವರ್ ಹಾಗೂ ಮಂಗಳೂರಿನ ಏಕೈಕ ಪ್ರತಿನಿಧಿಯಾಗಿ ಡಾ. ಗುರುಪ್ರಸಾದ್ ಭಟ್ ಭಾಗವಹಿಸಿದ್ದರು. ವಿಶೇಷವೆಂದರೆ, ಡಾ. ಗುರುಪ್ರಸಾದ್ ಕೇವಲ ಮೂರು ವರ್ಷಗಳ ಹಿಂದೆ ಮತ್ತು ಅಂಕಿತಾ ಎರಡು ವರ್ಷಗಳ ಹಿಂದಷ್ಟೇ ಈಜು ಕಲಿತಿದ್ದರು. ಆದರೂ ವಿಶ್ವದ ಅತ್ಯಂತ ಕಠಿಣ ಸಾಗರ ಸವಾಲನ್ನು ಯಶಸ್ವಿಯಾಗಿ ಎದುರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮಂಗ್ಲೂರು ಸಮುದ್ರವೇ ಸ್ಪೂರ್ತಿ ಆಗ್ಬೇಕು !
ಮಂಗಳೂರಿನಂತಹ ಸಮುದ್ರ ತೀರದ ನಗರದಲ್ಲಿ ಬೆಳೆದರೂ ಸಮುದ್ರದ ಬಗ್ಗೆ ಅನಗತ್ಯ ಭಯ ಇನ್ನೂ ಜನರಲ್ಲಿ ಇದೆ ಎಂದು ಅಭಿಪ್ರಾಯಪಟ್ಟಿರುವ ಡಾ. ಗುರುಪ್ರಸಾದ್, "ಸರಿಯಾದ ತರಬೇತಿ, ಸುರಕ್ಷತಾ ಕ್ರಮಗಳು ಮತ್ತು ಆತ್ಮವಿಶ್ವಾಸ ಇದ್ದರೆ ಓಪನ್ ವಾಟರ್ ಈಜು ಸುರಕ್ಷಿತವಾಗಿ ಮಾಡಬಹುದು. ನಮ್ಮ ಕರಾವಳಿಯ ಯುವಕರು ಅಂತಾರಾಷ್ಟ್ರೀಯ ಮಟ್ಟದ ಸಾಹಸಗಳಲ್ಲಿ ಭಾಗವಹಿಸುವ ಸಾಮರ್ಥ್ಯ ಹೊಂದಿದ್ದಾರೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 06:52 pm
HK News Staffer
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm