ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿಕೆಶಿ ಎದುರಲ್ಲೇ ಬಿಜೆಪಿ ಶಾಸಕನ ಆಕ್ಷೇಪ, ಕಾಂಗ್ರೆಸ್ ಕಾರ್ಯಕರ್ತರಿಂದ ಆಕ್ರೋಶ

19-09-26 05:44 pm       HK News Staffer   ಕರ್ನಾಟಕ

ಕಸ್ತೂರಿ ರಂಗನ್ ವರದಿ ಕುರಿತಾಗಿ ತೀರ್ಥಹಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಸಾರ್ವಜನಿಕರ ಜೊತೆಗಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇರ ಸಂವಾದ ವೇದಿಕೆಯಲ್ಲಿ ವಂದೇ ಮಾತರಂ ಅರ್ಧಕ್ಕೆ ಹಾಡಿದ್ದು ಆಕ್ಷೇಪಕ್ಕೆ ಕಾರಣವಾಯಿತಲ್ಲದೆ, ಕೆಲ ಕಾಲ ಗೊಂದಲದ ವಾತಾವರಣ ಉಂಟಾಯಿತು.

ಶಿವಮೊಗ್ಗ, ಸೆ.19: ಕಸ್ತೂರಿ ರಂಗನ್ ವರದಿ ಕುರಿತಾಗಿ  ತೀರ್ಥಹಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಸಾರ್ವಜನಿಕರ ಜೊತೆಗಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇರ ಸಂವಾದ ವೇದಿಕೆಯಲ್ಲಿ ವಂದೇ ಮಾತರಂ ಅರ್ಧಕ್ಕೆ ಹಾಡಿದ್ದು ಆಕ್ಷೇಪಕ್ಕೆ ಕಾರಣವಾಯಿತಲ್ಲದೆ, ಕೆಲ ಕಾಲ ಗೊಂದಲದ ವಾತಾವರಣ ಉಂಟಾಯಿತು.

ತೀರ್ಥಹಳ್ಳಿಯ ಯು.ಆರ್. ಅನಂತಮೂರ್ತಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಸಂವಾದ ಹಾಗೂ ಸಭಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದರು. ಈ ವೇಳೆ ವಂದೇ ಮಾತರಂ ಎರಡೇ ಚರಣ ಹಾಡಲಾಗಿದ್ದು, ಇದಕ್ಕೆ ಬಿಜೆಪಿ ಶಾಸಕ ಎಸ್.ಎನ್.ಚನ್ನಬಸಪ್ಪ ವೇದಿಕೆಯಲ್ಲಿ ಅಸಮಾಧಾನ ಹೊರ ಹಾಕಿದ್ದು ಗೊಂದಲಕ್ಕೆ ಕಾರಣವಾಯಿತು.

"ಮುಖ್ಯಮಂತ್ರಿ ರಾಜ್ಯದಲ್ಲಿ ಅನೇಕ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ವಂದೇ ಮಾತರಂ ಗೀತೆಯನ್ನು ಕೇವಲ ಎರಡೇ ಚರಣಕ್ಕೆ ಸಿಮೀತಗೊಳಿಸುವ ಮೂಲಕ ಜನರ ಭಾವನೆಗೆ ಧಕ್ಕೆ ಉಂಟಾಗಿದೆ" ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಆಕ್ಷೇಪ ವ್ಯಕ್ತಪಡಿಸಿದರು. ಅವರ ಮಾತಿಗೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ತಕ್ಷಣ ವೇದಿಕೆಯ ಮೇಲೆಯೇ ಆಕ್ರೋಶ ವ್ಯಕ್ತಪಡಿಸಿದರು.

ಇದರಿಂದ ವೇದಿಕೆ ಮೇಲೆ ಕೆಲ ಕಾಲ ಬಿಗುವಿನ ವಾತಾವಣರ ಸೃಷ್ಟಿಯಾಯಿತು. ವೇದಿಕೆಯಲ್ಲಿದ್ದ ಕಾಂಗ್ರೆಸ್ ಮುಖಂಡರು ಶಾಸಕ ಎಸ್.ಎನ್.ಚನ್ನಬಸಪ್ಪ ಅವರನ್ನು ಮುತ್ತಿಗೆ ಹಾಕಿ ಅವರ ಭಾಷಣವನ್ನು ಅರ್ಧದಲ್ಲೇ ನಿಲ್ಲಿಸಿದರು. ಮೈದಾನದಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಕೂಡ ಶಾಸಕ ಚನ್ನಬಸಪ್ಪನವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ಇಡೀ ಸಂವಾದ ಮೈದಾನದಲ್ಲಿ ಡಿ.ಕೆ, ಡಿ.ಕೆ. ಎಂದು ಘೋಷಣೆ ಮೊಳಗಿಸುವ ಮೂಲಕ ಶಾಸಕ ಚನ್ನಬಸಪ್ಪನವರ ಆಕ್ಷೇಪಕ್ಕೆ ವಿರೋಧ ವ್ಯಕ್ತಪಡಿಸಿದರು.

A brief commotion broke out at a public interaction programme in Thirthahalli on Saturday after BJP MLA S N Channabasappa objected to the singing of only two stanzas of ‘Vande Mataram’ at an event attended by Chief Minister D K Shivakumar. The programme was organised to discuss the Kasturirangan Report with residents and stakeholders of the Malnad region.