David Dsouza Murder, Arrest: ಡೇವಿಡ್ ಹತ್ಯೆ ಪ್ರಕರಣ ; ಸುಪಾರಿ ಕಿಲ್ಲರ್ ಗಳಿಗೆ ಹಣಕಾಸು ಪೂರೈಸಿದ್ದ ಪ್ರಮುಖ ಆರೋಪಿಗಳಿಬ್ಬರ ಬಂಧನ

15-08-26 05:09 pm       HK News Staffer   ಕ್ರೈಂ

ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಹತ್ಯೆ ಪ್ರಕರಣಕ್ಕೆ ಸಂಬಂಧ ಸುಪಾರಿ ಕಿಲ್ಲರ್ಸ್ ಗೆ ಹಣಕಾಸು ಪೂರೈಸಿದ್ದ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.

ಉಡುಪಿ, ಆ.15: ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಹತ್ಯೆ ಪ್ರಕರಣಕ್ಕೆ ಸಂಬಂಧ ಸುಪಾರಿ ಕಿಲ್ಲರ್ಸ್ ಗೆ ಹಣಕಾಸು ಪೂರೈಸಿದ್ದ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. 

ಬಡಾ ಎರ್ಮಾಳ್ ಗ್ರಾಮದ ಅದಮಾರು ಮಠದ ಬಳಿಯ ನಿವಾಸಿ ಸದಾನಂದ ದೇವಾಡಿಗ (41) ಹಾಗೂ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಬಳಿಯ ನಿವಾಸಿ ಕಿಶೋರ್ ರಾಮ ಪೂಜಾರಿ (47) ಬಂಧಿತ ಆರೋಪಿಗಳು. ಆರೋಪಿಗಳ ಬ್ಯಾಂಕ್ ಖಾತೆ ವಿವರ, ಸಿಸಿಟಿವಿ ದೃಶ್ಯಾವಳಿ ಹಾಗೂ ಕರೆ ದಾಖಲೆಗಳನ್ನು ವಿಶ್ಲೇಷಿಸಿದಾಗ ಕೊಲೆಗೆ ಒಳಸಂಚು ನಡೆಸಿ ಹಣಕಾಸಿನ ನೆರವು ನೀಡುವಲ್ಲಿ ಸದಾನಂದ ದೇವಾಡಿಗ ಹಾಗೂ ಕಿಶೋರ್ ಪೂಜಾರಿ ಪ್ರಮುಖ ಪಾತ್ರ ವಹಿಸಿರುವುದು ದೃಢಪಟ್ಟಿದೆ. 

ಆಗಸ್ಟ್ 7ರಂದು ನಡೆದ ಈ ಶೂಟೌಟ್ ಕೃತ್ಯಕ್ಕೆ ಸಂಬಂಧಿಸಿ ಪೊಲೀಸರು ಮೊದಲಿಗೆ ನೇರವಾಗಿ ಭಾಗಿಯಾಗಿದ್ದ ಉತ್ತರ ಭಾರತ ಮೂಲದ ರಾಜು, ಅನ್ಮೋಲ್ ರಸ್ತೋಗಿ ಹಾಗೂ ಜಿಯಾಹುಲ್ ಶೇಖ್ ಅವರನ್ನು ಬಂಧಿಸಿದ್ದರು. ನಂತರ ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಿದಾಗ, ಆರೋಪಿಗಳಿಗೆ ಹಣ ಜಮಾ ಮಾಡಿ ಸಹಕರಿಸಿದ್ದ ಮೊಹಮ್ಮದ್ ಇರ್ಷಾದ್ ಮತ್ತು ಚಿರಾಗ್ ಪೂಜಾರಿಯನ್ನು ಬಂಧಿಸಲಾಗಿತ್ತು. ಇದೀಗ ಬಂಧಿತ ಸದಾನಂದನಿಂದ ಕೃತ್ಯಕ್ಕೆ ಬಳಸಿದ 2 ಮೊಬೈಲ್ ಫೋನ್‌ಗಳು, 1 ಬೈಕ್ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಕಿಶೋರ್ ಪೂಜಾರಿಯಿಂದ 3 ಮೊಬೈಲ್ ಫೋನ್ ಮತ್ತು 1 ಕಾರನ್ನು ವಶಕ್ಕೆ ಪಡೆಯಲಾಗಿದೆ.

ಕೊಲೆ ಪ್ರಕರಣದಲ್ಲಿನ ನೇರವಾಗಿ ಭಾಗಿಯಾದ ಆರೋಪಿ ರಾಜು ಬಂಧನದ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಕಾರಣ ಫೈರಿಂಗ್ ಮಾಡಿ ಅರೆಸ್ಟ್ ಮಾಡಲಾಗಿತ್ತು. ಇದೀಗ ಗಾಯಗೊಂಡಿರುವ ರಾಜು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.