Belthangady Couple Suicide, Bangalore: ಬೆಂಗಳೂರಿನಲ್ಲಿ ಬೆಳ್ತಂಗಡಿ ಮೂಲದ ದಂಪತಿ ಶವವಾಗಿ ಪತ್ತೆ ; ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತಿ

15-08-26 01:28 pm       HK News Staffer   ಕ್ರೈಂ

ಪ್ರೀತಿಸಿ ಮದುವೆಯಾಗಿದ್ದ ದಂಪತಿ ಅನುಮಾನಾಸ್ಪದ ರೀತಿಯಲ್ಲಿ ಮನೆಯಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸುಮಂತ್ ಜೈನ್ (32) ಹಾಗೂ ಹುಬ್ಬಳ್ಳಿ ಮೂಲದ ಪದ್ಮಾವತಿ (29) ಮೃತ ದಂಪತಿ.

ಬೆಂಗಳೂರು , ಆಗಸ್ಟ್ 15:  ಪ್ರೀತಿಸಿ ಮದುವೆಯಾಗಿದ್ದ ದಂಪತಿ ಅನುಮಾನಾಸ್ಪದ ರೀತಿಯಲ್ಲಿ ಮನೆಯಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸುಮಂತ್ ಜೈನ್ (32) ಹಾಗೂ ಹುಬ್ಬಳ್ಳಿ ಮೂಲದ ಪದ್ಮಾವತಿ (29) ಮೃತ ದಂಪತಿ.

ಸುಮಂತ್ ಜೈನ್ ನಂದಿನಿ ಲೇಔಟ್‌ನಲ್ಲಿ ಸಿವಿಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಪದ್ಮಾವತಿ ವೈಟ್‌ಫೀಲ್ಡ್‌ನ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಮದುವೆ;

ಸುಮಂತ್ ಜೈನ್ ಹಾಗೂ ಪದ್ಮಾವತಿ ಪರಸ್ಪರ ಪ್ರೀತಿಸುತ್ತಿದ್ದು, ಸುಮಾರು ನಾಲ್ಕು ವರ್ಷಗಳ ಹಿಂದೆ ಕುಟುಂಬದ ಒಪ್ಪಿಗೆಯೊಂದಿಗೆ ವಿವಾಹವಾಗಿದ್ದರು. ದಂಪತಿ ಲಗ್ಗೆರೆ ಸಮೀಪದ ರಾಜೇಶ್ವರಿ ನಗರದ ಬ್ಯಾಂಕ್ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಶುಕ್ರವಾರ, ಆಗಸ್ಟ್ 14ರ ಮಧ್ಯಾಹ್ನ ಮನೆಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ.

ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಸಹಜ ಸಾವು (UDR) ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಪತ್ನಿಯನ್ನು ಹತ್ಯೆಗೈದು ಆತ್ಮಹತ್ಯೆ?

ಪ್ರಾಥಮಿಕ ತನಿಖೆಯಲ್ಲಿ ಸುಮಂತ್  ಪತ್ನಿಯನ್ನು ಹತ್ಯೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ದಂಪತಿಯ ಸಾವಿಗೆ ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ತನಿಖೆಯ ಬಳಿಕವಷ್ಟೇ ಸಾವಿನ ನಿಖರ ಕಾರಣ ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ.

ಆಗಸ್ಟ್ 13ರಿಂದಲೇ ದಂಪತಿ ನಡುವೆ ಜಗಳ?

ಪೊಲೀಸ್ ಮೂಲಗಳ ಪ್ರಕಾರ, ದಂಪತಿ ನಡುವೆ ಆಗಸ್ಟ್ 13ರಿಂದಲೇ ಜಗಳ ನಡೆದಿತ್ತು ಎನ್ನಲಾಗಿದೆ. ಈ ಸಂದರ್ಭದಲ್ಲಿ ಪದ್ಮಾವತಿ ತಮ್ಮ ತಾಯಿಗೆ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದ್ದು, ‘ಅಮ್ಮ, ನಾನು ಸಾಯುತ್ತೇನೆ. ಮದುವೆ ವೇಳೆ ನನಗೆ ನೀಡಿದ್ದ ಚಿನ್ನದ ಒಡವೆ ತೆಗೆದುಕೊಂಡು ಹೋಗಿ’ ಎಂದು ತಿಳಿಸಿದ್ದರು ಎನ್ನಲಾಗಿದೆ.

ಇದೇ ವೇಳೆ ಸುಮಂತ್ ಜೈನ್ ಕೂಡ ತಮ್ಮ ಕುಟುಂಬಸ್ಥರಿಗೆ ಸಂದೇಶ ಕಳುಹಿಸಿದ್ದು, ತಮ್ಮ ಪಿಎಫ್ ಹಣ ಹಾಗೂ ಮನೆಯಲ್ಲಿರುವ ವಸ್ತುಗಳನ್ನು ತೆಗೆದುಕೊಂಡು ಹೋಗುವಂತೆ ತಿಳಿಸಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ.

ಹೆಂಡತಿ ‘ಈ ಮನೆ ನನ್ನದು’ ಎಂದು ಹೇಳಿಕೊಂಡು ಜಗಳ ಮಾಡುತ್ತಿದ್ದಾಳೆ ಎಂಬ ಅರ್ಥದ ಸಂದೇಶವನ್ನೂ ಸುಮಂತ್ ಕಳುಹಿಸಿದ್ದರು ಎನ್ನಲಾಗಿದೆ.

ಸಂದೇಶಗಳ ಬೆನ್ನಲ್ಲೇ ದುರಂತ

ದಂಪತಿ ಪರಸ್ಪರ ಕಳುಹಿಸಿಕೊಂಡಿದ್ದಾರೆ ಎನ್ನಲಾದ ಈ ಸಂದೇಶಗಳು ಪ್ರಕರಣದ ತನಿಖೆಯಲ್ಲಿ ಮಹತ್ವದ ಅಂಶವಾಗಿವೆ. ಜಗಳಕ್ಕೆ ನಿಖರ ಕಾರಣವೇನು? ಘಟನೆ ಹೇಗೆ ನಡೆದಿದೆ? ಇಬ್ಬರ ಸಾವಿನ ನಡುವೆ ಇರುವ ಸಂಬಂಧವೇನು? ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ, ಸ್ಥಳದಲ್ಲಿನ ಸಾಕ್ಷ್ಯಗಳು ಹಾಗೂ ಮೊಬೈಲ್ ಸಂದೇಶಗಳ ಪರಿಶೀಲನೆಯ ಬಳಿಕವೇ ಪ್ರಕರಣದ ಸಂಪೂರ್ಣ ಚಿತ್ರಣ ಹೊರಬರಬೇಕಿದೆ.

A couple who had married for love were found dead under suspicious circumstances at their residence in Bengaluru, police said. The incident occurred within the limits of the Rajagopal Nagar Police Station. The deceased have been identified as Sumant Jain (32), a native of Belthangady taluk in Dakshina Kannada district, and Padmavathi (29), originally from Hubballi.