ಇನೋಳಿ ಕಾಲೇಜು ಕ್ಯಾಂಪಸ್ ಬಳಿ ಕಲ್ಲು ಕ್ವಾರಿ ಹೆಸರಲ್ಲಿ ಡ್ರಾಮಾ ; ವಿದ್ಯಾರ್ಥಿಗಳ ಪ್ರತಿಭಟನೆಗೆ ಕೋರೆ ಮಾಲೀಕರು, ಕಾರ್ಮಿಕರಿಂದ ಕೌಂಟರ್ ಧರಣಿ ! 

18-03-22 06:49 pm       Mangalore Correspondent   ಕರಾವಳಿ

ಕಾಲೇಜು ಕ್ಯಾಂಪಸ್ ಸಮೀಪ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿ ಇನೋಳಿಯ ಬ್ಯಾರೀಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು ಇದಕ್ಕೆ ಪ್ರತಿಯಾಗಿ ನಮ್ಮದು ಸಕ್ರಮ ಕೆಂಪು ಕಲ್ಲು ಕ್ವಾರಿ.

ಉಳ್ಳಾಲ, ಮಾ.18: ಕಾಲೇಜು ಕ್ಯಾಂಪಸ್ ಸಮೀಪ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿ ಇನೋಳಿಯ ಬ್ಯಾರೀಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು ಇದಕ್ಕೆ ಪ್ರತಿಯಾಗಿ ನಮ್ಮದು ಸಕ್ರಮ ಕೆಂಪು ಕಲ್ಲು ಕ್ವಾರಿ. ಅದಕ್ಕೆ ಅಡ್ಡಿಪಡಿಸಬೇಡಿ, ಕಾರ್ಮಿಕರ ಹೊಟ್ಟೆಗೆ ಹೊಡೆಯಬೇಡಿ ಎಂದು ಕೆಂಪುಕಲ್ಲಿನ ಕೋರೆಯ ಮಾಲೀಕರು, ಕಾರ್ಮಿಕರು ಸೇರಿ ಪ್ರತಿಭಟನೆ ನಡೆಸಿದ್ದಾರೆ. 

ಇಂದು ಬೆಳಗ್ಗೆ ಇನೋಳಿಯ ಬ್ಯಾರೀಸ್ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳನ್ನ‌ ಮುಂದಿಟ್ಟು ಪ್ರಕೃತಿ ನಾಶ, ನಮ್ಮ ವಿನಾಶ, ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ, ಪ್ರಕೃತಿ ಮಾತೆ ನಿಜವಾದ ಅನ್ನದಾತೆ, ಪರಿಸರ ನಾಶ ಪಡಿಸಬೇಡಿ ಎಂಬ ಫಲಕ ಹಿಡಿಸಿ ಕಾಲೇಜು ಕ್ಯಾಂಪಸ್ ಎದುರುಗಡೆ ಪ್ರತಿಭಟನೆ ನಡೆಸಿದೆ. ಇದಕ್ಕೆ ಪ್ರತಿಯಾಗಿ ಸ್ಥಳೀಯ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಕಲ್ಲು ಕ್ವಾರಿಗಳ ಮಾಲಕರು ಕಾರ್ಮಿಕರನ್ನ ಮುಂದಿಟ್ಟು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕಾಗಮಿಸಿ ಘೋಷಣೆಗಳನ್ನ ಕೂಗಿ ಕೌಂಟರ್ ಪ್ರತಿಭಟನೆ ನಡೆಸಿದ್ದು ಸ್ಥಳದಲ್ಲಿ ಹೈಡ್ರಾಮಾ ನಡೆದಿದೆ.

ಬ್ಯಾರೀಸ್ ಎನ್ವಿರೋ ಆರ್ಕಿಟೆಕ್ಟರ್ ಡಿಸೈನ್ ಸ್ಕೂಲ್ ಪ್ರಾಂಶುಪಾಲ ಅಶೋಕ್ ಮೆಂಡೋನ್ಸಾ ಮಾತನಾಡಿ, ಕಲ್ಲು ಗಣಿಗಾರಿಕೆ ನಿಲ್ಲಿಸಿ ಎಂದು ನಾವು ಹೇಳುತ್ತಿಲ್ಲ. ಕಾಲೇಜು ಕ್ಯಾಂಪಸ್ ಪಕ್ಕದಲ್ಲಿ ಅನಧಿಕೃತ ಗಣಿಗಾರಿಕೆ ನಿರಂತರ ನಡೆಯುತ್ತಿದ್ದು ಅದನ್ನು ನಿಲ್ಲಿಸಿ, ಅಧಿಕೃತವಾಗಿ ಕಾಮಗಾರಿ ನಡೆಸಿ. ಕೆಂಪು ಕಲ್ಲಿನ ಕ್ವಾರಿ ಮಾಲೀಕರು ಪರವಾನಗಿ ಪಡೆಯುವಾಗ ಕೃಷಿ ಕಾರ್ಯಕ್ಕೆ ಎಂದು ಪರವಾನಗಿ ಪಡೆದು ಮತ್ತೆ ಕಲ್ಲು ತೆಗೆಯುತ್ತಾ ತೆಗೆಯುತ್ತಾ ಆಳಕ್ಕೆ ಕೊರೆದು ಹಾಗೆಯೇ ಬಿಟ್ಟು ತೆರಳುವುದು ಎಲ್ಲ ಕಡೆ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ಕಾಮಗಾರಿಗೆ ಇಲ್ಲಿ ಅವಕಾಶ ಕೊಡುವುದಿಲ್ಲ. ಗಣಿಗಾರಿಕೆ ನಡೆಸಿ ಬಿಟ್ಟು‌ ಹೋದ ಹೊಂಡಗಳಲ್ಲಿ ನೀರು ತುಂಬಿ ಸೊಳ್ಳೆಗಳು ಉತ್ಪತ್ತಿಯಾಗುವುದಲ್ಲದೆ ಪ್ರಾಣಾಪಾಯ ಆಗುವ ಸಾಧ್ಯತೆ ಇದೆ. ಗಣಿಗಾರಿಕೆ ನಡೆಸುತ್ತಿರುವ ಪ್ರದೇಶದಿಂದ ಯಂತ್ರಗಳ ಕರ್ಕಷ ಸದ್ದು ಬರುತ್ತಿದ್ದು ಕಾಲೇಜು ಕ್ಯಾಂಪಸಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೂ ತೊಂದರೆ ಎದುರಾಗಿದೆ ಎಂದರು. 

ಈ ಬಗ್ಗೆ ಕಾಲೇಜು ಆಡಳಿತ ಮತ್ತು ಕಲ್ಲು ಕ್ವಾರಿ ಮಾಲೀಕರ ನಡುವೆ ವಾಗ್ವಾದ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಕೆಂಪು ಕಲ್ಲುಕೋರೆ ಮಾಲೀಕರ ಒಕ್ಕೂಟದ ಕಾರ್ಯದರ್ಶಿ ರವಿ ರೈ ಪಜೀರು ಮಾತನಾಡಿ ಕೃಷಿ ಇಲಾಖೆ ಎನ್‌ಒಸಿ ಕೊಟ್ಟ ಬಳಿಕ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯವರು ಎನ್‌ಒಸಿ ಕೊಡ್ತಾರೆ, ಜಿಪಿಎಸ್ ಮಾಡ್ತಾರೆ. ಆರು ತಿಂಗಳಿಗೆ ಮೊದಲು ಪರವಾನಗಿ ಕೊಟ್ಟು ಮತ್ತೆ ಮೂರು ತಿಂಗಳಿಗೊಮ್ಮೆ ರಿನೀವಲ್ ನಡೆಯುತ್ತದೆ. ಅಷ್ಟಕ್ಕೂ ಇದು ಗಣಿಗಾರಿಕೆ ಅಲ್ಲ, ಗಣಿಗಾರಿಕೆ ಅಂದ್ರೆ ಅಲ್ಲಿ ಸ್ಫೋಟಕ ಬಳಸಬೇಕು. ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೀವನೋಪಾಯ ಉದ್ಯಮ. 12 ವರುಷದ ಹಿಂದೆ ಇಲ್ಲಿ ಕಾಲೇಜು ಮಾಡುವ ಕಾಲಘಟ್ಟದಲ್ಲಿಯೂ ಕೆಂಪುಕಲ್ಲಿನ ಕ್ವಾರಿ ಇತ್ತು.

ಕಾಲೇಜಿನೊಳಗಡೆ ವಿಶಾಲ ಮೈದಾನ ನಿರ್ಮಿಸಲು ಕೆಂಪು ಕಲ್ಲುಗಳನ್ನ ಯಂತ್ರಗಳಲ್ಲಿ ಕಡಿದು ತೆಗೆಯಲು ಕ್ವಾರಿ‌ ಮಾಲೀಕರು ನಿಮಗೆ ಎಲ್ಲ ರೀತಿಯ ಸಹಕಾರ ಕೊಟ್ಟಿದ್ದಾರೆ. ಕಾಲೇಜು ಕ್ಯಾಂಪಸ್ ಒಳಗಡೆಯೂ ಕೆಂಪು ಕಲ್ಲು  ಗಣಿಗಾರಿಕೆ ನಡೆದಿದ್ದು ಈ ಬಗ್ಗೆ ದಾಖಲೆಗಳಿವೆ. ಕಟ್ಟಡದಿಂದ 50 ಮೀ. ದೂರದಲ್ಲಿ ಕ್ವಾರಿ ನಡೆಸಲು ಅವಕಾಶ ಇದ್ದರೂ ಇಲ್ಲಿ 200 ಮೀ. ಅಂತರವಿದೆ. ಗಣಿ ಇಲಾಖೆಯವರು ಈ ಬಗ್ಗೆ ಸರ್ವೆ ಮಾಡಿದ್ದು ಸತ್ಯಾಂಶ ಕಾಲೇಜು ಆಡಳಿತ ಮಂಡಳಿಗೆ ಗೊತ್ತಿದೆ. ರಾಜಧನ(ರೊಯಲ್ಟಿ) ಕಟ್ಟಿದ ಬಳಿಕ ಸರಕಾರ ಮತ್ತೆ ನಮಗೆ ಕೊಡೋದಿಲ್ಲ, ನಮಗೆ ಕೋರ್ಟಿಗೆ ಹೋಗಲು ಅವಕಾಶ ಇದೆ. ನಾವೂ ದಾಖಲೆ ಸಮೇತ ಕೋರ್ಟಿಗೆ ಹೋಗಲು ಸಿದ್ಧರಿದ್ದೇವೆ. ನಮಗೆ ನೀವು ಸಹಕರಿಸದಿದ್ದರೆ ನಿಮಗೂ ಮುಂದಿನ ದಿನಗಳಲ್ಲಿ ಕಟ್ಟಡ ಕಾಮಗಾರಿಗೆ ಮೆಟೀರಿಯಲ್‌ಗೆ ತೊಂದರೆ ಎದುರಾದರೆ ನಾವು ಜವಬ್ದಾರರಲ್ಲ ಎಂದರು. ಪ್ರತಿಭಟನಾ ಸ್ಥಳದಲ್ಲಿ ಕೊಣಾಜೆ ಪೊಲೀಸರು ಭದ್ರತೆ ಏರ್ಪಡಿಸಿದ್ದರು.

Ullal Students protest against illegal red stone quarry in Innoli, alongside laborers protest against students in Mangalore stating not to snatch their jobs as that's the only source of income.