Fraud Dream Deal Mangalore, KSRTC: ತಿಂಗಳಿಗೆ ಒಂದು ಸಾವಿರಕ್ಕೆ ದುಬಾರಿ ಗಿಫ್ಟ್ ; ಪ್ರತಿ ತಿಂಗಳು 50 ಲಕ್ಷ ಮೌಲ್ಯದ ಬಹುಮಾನ ! ಅಕ್ರಮ ಲಕ್ಕಿ ಸ್ಕೀಮ್ ಪರ ಕೆಎಸ್ಸಾರ್ಟಿಸಿ ಬಸ್ಗಳಲ್ಲಿ ಜಾಹೀರಾತು, ಡ್ರೀಮ್ ಡೀಲ್ ಸ್ಕೀಮಿಗೆ ಭರ್ಜರಿ ಪ್ರಚಾರ ! 

09-11-25 10:27 pm       Mangalore Correspondent   ಕ್ರೈಂ

ತಿಂಗಳಿಗೆ ಒಂದು ಸಾವಿರ ಕಟ್ಟಿದರೆ ಪ್ರತಿ ತಿಂಗಳು ಫ್ಲಾಟ್, ದುಬಾರಿ ಕಾರು ಬಹುಮಾನ ಗೆಲ್ಲುತ್ತೀರಿ ಎಂದು ಆಮಿಷವೊಡ್ಡಿ ಲಕ್ಕೀ ಸ್ಕೀಮ್ ಹೆಸರಲ್ಲಿ ಭಾರೀ ವಂಚನೆ ಎಸಗಿದ ಬಗ್ಗೆ ಮಂಗಳೂರು ಮತ್ತು ಪುತ್ತೂರಿನಲ್ಲಿ ವಂಚನೆ ಪ್ರಕರಣಗಳು ದಾಖಲಾಗಿವೆ.

ಮಂಗಳೂರು, ನ.9: ತಿಂಗಳಿಗೆ ಒಂದು ಸಾವಿರ ಕಟ್ಟಿದರೆ ಪ್ರತಿ ತಿಂಗಳು ಫ್ಲಾಟ್, ದುಬಾರಿ ಕಾರು ಬಹುಮಾನ ಗೆಲ್ಲುತ್ತೀರಿ ಎಂದು ಆಮಿಷವೊಡ್ಡಿ ಲಕ್ಕೀ ಸ್ಕೀಮ್ ಹೆಸರಲ್ಲಿ ಭಾರೀ ವಂಚನೆ ಎಸಗಿದ ಬಗ್ಗೆ ಮಂಗಳೂರು ಮತ್ತು ಪುತ್ತೂರಿನಲ್ಲಿ ವಂಚನೆ ಪ್ರಕರಣಗಳು ದಾಖಲಾಗಿವೆ. ವಿಚಿತ್ರ ಅಂದ್ರೆ, ಮಂಗಳೂರು ಕೇಂದ್ರಿತವಾಗಿ ಡ್ರೀಮ್ ಡೀಲ್ ಹೆಸರಿನಲ್ಲಿ ನಡೆಯುವ ಇಂತಹದ್ದೇ ಅನಧಿಕೃತ ಲಕ್ಕಿ ಸ್ಕೀಮ್ ಪ್ರಚಾರಕ್ಕಾಗಿ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಜಾಹೀರಾತು ನೀಡಲಾಗಿದೆ.

ಡ್ರೀಮ್ ಡೀಲ್ ಮೂಲಕ ನಿಮ್ಮ ಕನಸು ನನಸಾಗಿಸಿಕೊಳ್ಳಿ.. ತಿಂಗಳಿಗೆ ಒಂದು ಸಾವಿರ ಉಳಿಸಿ, 50 ಲಕ್ಷಕ್ಕೂ ಹೆಚ್ಚು ಮೌಲ್ಯದ ಬಹುಮಾನ ಗೆಲ್ಲಿರಿ.. ಡ್ರೀಮ್ ಡೀಲ್ ಉಳಿತಾಯ ಯೋಜನೆಗೆ ಇಂದೇ ಸೇರಿ.. ಡ್ರೀಮ್ ಡೀಲ್ ನಿಮ್ಮ ಕನಸು ನಮ್ಮ ಜವಾಬ್ದಾರಿ ಎಂದು ಬರೆದಿರುವ ಜಾಹೀರಾತನ್ನು ಮಂಗಳೂರಿನಿಂದ ಪುತ್ತೂರು, ಬೆಳ್ತಂಗಡಿಗೆ ತೆರಳುವ ಹಲವು ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ನೀಡಲಾಗಿದೆ. ಖ್ಯಾತ ನಿರೂಪಕಿ ಅನುಶ್ರೀ ಅವರ ಫೋಟೋವನ್ನು ಜಾಹೀರಾತಿಗೆ ಬಳಸಿಕೊಳ್ಳಲಾಗಿದೆ.

ಇತ್ತೀಚೆಗೆ ಸುರತ್ಕಲ್ ಠಾಣೆ ವ್ಯಾಪ್ತಿಯಲ್ಲಿ ನ್ಯೂ ಇಂಡಿಯಾ, ನ್ಯೂ ಶೈನ್, ಪುತ್ತೂರಿನಲ್ಲಿ ವಿಷನ್ ಇಂಡಿಯಾ ಹೆಸರಿನ ಲಕ್ಕಿ ಸ್ಕೀಮ್ ಕಂಪನಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಸುರತ್ಕಲ್ ಪೊಲೀಸರು ವಫಾ ಎಂಟರ್ ಪ್ರೈಸಸ್ ಮಾಲಕ ಸೇರಿ ನಾಲ್ವರನ್ನು ಬಂಧಿಸಿದ್ದು ಆಸ್ತಿಗಳನ್ನು ಜಪ್ತಿ ಮಾಡಲು ಮುಂದಾಗಿದ್ದರು. ಪುತ್ತೂರಿನ ಪ್ರಕರಣದಲ್ಲಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆನ್ನುವ ಮಾಹಿತಿ ಇತ್ತು. ಆದರೆ ಇವೆಲ್ಲದರ ಮಧ್ಯೆ ಖ್ಯಾತ ನಿರೂಪಕಿಯನ್ನು ಬಳಸಿಕೊಂಡು ರಾಜ್ಯದ ಸರಕಾರಿ ಸಾರಿಗೆ ಬಸ್ಸುಗಳಲ್ಲೇ ಡ್ರೀಮ್ ಡೀಲ್ ಹೆಸರಿನ ಲಕ್ಕಿ ಸ್ಕೀಮ್ ಕಂಪನಿಯ ಜಾಹೀರಾತು ನೀಡಿರುವುದು ಹೇಗೆ ಎನ್ನುವ ಪ್ರಶ್ನೆ ಉದ್ಭವಿಸಿದೆ.

ದುಬಾರಿ ಗಿಫ್ಟ್ ಹೆಸರಿನಲ್ಲಿ ಜನರನ್ನು ಯಾಮಾರಿಸಿ ಹಣ ಸಂಗ್ರಹಿಸುವ ಎಲ್ಲ ಲಕ್ಕಿ ಸ್ಕೀಮ್ ಗಳೂ ಅಕ್ರಮ. ಕಾನೂನು ಉಲ್ಲಂಘಿಸಿ ಜನರಿಂದ ಹಣವನ್ನು ಸಂಗ್ರಹಿಸುತ್ತಿರುವುದಾಗಿ ಪೊಲೀಸರು ಎಫ್ಐಆರ್ ದಾಖಲಿಸಿದಾಗ ಉಲ್ಲೇಖ ಮಾಡಿದ್ದರು. ಈ ಬಗ್ಗೆ ಇತ್ತೀಚೆಗೆ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಬಳಿ, ನೀವು ಕೆಲವು ಲಕ್ಕಿ ಸ್ಕೀಮ್ ಗಳ ವಿರುದ್ಧ ಮಾತ್ರ ಯಾಕೆ ಕ್ರಮ ಜರುಗಿಸಿದ್ದೀರಿ ಎಂದು ಕೇಳಿದ ಪ್ರಶ್ನೆಗೆ, ವಂಚನೆಗೊಳಗಾದವರು ನೀಡಿದ ದೂರಿನಂತೆ ಕೇಸು ದಾಖಲಿಸಿದ್ದೇವೆ. ಈ ರೀತಿ ಹಣ ಸಂಗ್ರಹಿಸುವುದಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ದುಬಾರಿ ಗಿಫ್ಟ್ ಹೆಸರಲ್ಲಿ ಹಣ ಸಂಗ್ರಹಿಸುವುದೇ ಅಕ್ರಮ ಎಂದು ಹೇಳಿದ್ದರು.

ಆದರೆ ಮಂಗಳೂರಿನ ಡ್ರೀಮ್ ಡೀಲ್ ಲಕ್ಕಿ ಸ್ಕೀಮ್ ಪರವಾಗಿ ಜನರನ್ನು ಆಕರ್ಷಿಸಲು ಕೆಎಸ್ಸಾರ್ಟಿಸಿ ಬಸ್ಗಳನ್ನೇ ಬಳಸಿಕೊಳ್ಳಲಾಗಿದೆ. ಕಾನೂನು ಉಲ್ಲಂಘನೆಯ ಲಕ್ಕಿ ಸ್ಕೀಮ್ ಜಾಹೀರಾತಿಗೆ ಕೆಎಸ್ಸಾರ್ಟಿಸಿ ಬಸ್ಗಳನ್ನು ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಈ ಬಗ್ಗೆ ಮಾಹಿತಿ ಕೇಳಲು ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದ ಅಧಿಕಾರಿ ಸಂಪರ್ಕಕ್ಕೆ ಸಿಕ್ಕಿಲ್ಲ.

A large-scale fraudulent “lucky scheme” has come to light in Mangaluru and Puttur, where people were lured with promises of winning luxury cars and apartments by paying ₹1,000 per month. Shockingly, the illegal “Dream Deal” scheme has been advertised on KSRTC government buses operating in the region.