Sunetra Pawar, Maharashtra Deputy CM: ಮಹಾರಾಷ್ಟ್ರ ಮೊದಲ ಮಹಿಳಾ ಡಿಸಿಎಂ ಆಗಿ ಸುನೇತ್ರಾ ಪವಾರ್ ನೇಮಕ ; ಎನ್ ಸಿಪಿ ಶಾಸಕಾಂಗ ನಾಯಕರಾಗಿ ಆಯ್ಕೆ, ಅಜಿತ್ ಪವಾರ್ ಸಾವಿನ ಬೆನ್ನಲ್ಲೇ ಪತ್ನಿಗೆ ಅಧಿಕಾರ ಗ್ರಹಣ ! 

31-01-26 04:56 pm       HK News Desk   ದೇಶ - ವಿದೇಶ

ಮಹಾರಾಷ್ಟ್ರದ ನೂತನ ಡಿಸಿಎಂ ಆಗಿ ಇತ್ತೀಚೆಗೆ ವಿಮಾನ ಅಪಘಾತದಲ್ಲಿ ಮೃತಪಟ್ಟ ಅಜಿತ್ ಪವಾರ್ ಅವರ ಪತ್ನಿ ಸುನೇತ್ರ ಪವಾರ್ ಅವರನ್ನು ಆಯ್ಕೆ ಮಾಡಲಾಗಿದೆ.

ಮುಂಬೈ, ಜ.31: ಮಹಾರಾಷ್ಟ್ರದ ನೂತನ ಡಿಸಿಎಂ ಆಗಿ ಇತ್ತೀಚೆಗೆ ವಿಮಾನ ಅಪಘಾತದಲ್ಲಿ ಮೃತಪಟ್ಟ ಅಜಿತ್ ಪವಾರ್ ಅವರ ಪತ್ನಿ ಸುನೇತ್ರ ಪವಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಎನ್ ಸಿಪಿ ಶಾಸಕರು ಶನಿವಾರ ಮಧ್ಯಾಹ್ನ ಎರಡು ಗಂಟೆಗೆ ಸಭೆ ಸೇರಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸುನೇತ್ರಾ ಅವರನ್ನು ಆಯ್ಕೆ ಮಾಡಿದ್ದು ರಾಜ್ಯಪಾಲರಿಗೆ ಪತ್ರ ರವಾನಿಸಿದ್ದಾರೆ. 

ಇದಕ್ಕೂ ಮೊದಲೇ ಸುನೇತ್ರಾ ಅವರು ಅಜಿತ್ ಪವಾರ್ ಸ್ಥಾನವನ್ನು ತುಂಬಲಿದ್ದಾರೆಂದು ಹೇಳಲಾಗಿತ್ತು. ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದ ಸುನೇತ್ರಾ, ಬಳಿಕ ರಾಜ್ಯಸಭೆ ಸದಸ್ಯರಾಗಿ ಆಯ್ಕೆಗೊಂಡಿದ್ದರು. ಇದೀಗ ರಾಜ್ಯಸಭೆ ಸದಸ್ಯತ್ವಕ್ಕೆ ರಾಜಿನಾಮೆ ನೀಡಿ, ರಾಜ್ಯದಲ್ಲಿ ವಿಧಾನ ಪರಿಷತ್ ಅಥವಾ ವಿಧಾನಸಭೆಗೆ ಆಯ್ಕೆಯಾಗಬೇಕು. ಅಜಿತ್ ಪವಾರ್ ಬಾರಾಮತಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು ಅದೇ ಕ್ಷೇತ್ರದಲ್ಲಿ ಸುನೇತ್ರಾ ಉಪ ಚುನಾವಣೆ ಸ್ಪರ್ಧಿಸುವ ಸಾಧ್ಯತೆ ಇದೆ. 

ಇಂದು ಸಂಜೆ ಐದು ಗಂಟೆಗೆ ಸಿಎಂ ಫಡ್ನವಿಸ್ ಸಮ್ಮುಖದಲ್ಲಿ ರಾಜ್ಯಪಾಲರ ಮೂಲಕ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಾರಾಮತಿ ಕ್ಷೇತ್ರದಿಂದ ಎಂಟು ಬಾರಿ ಆಯ್ಕೆಯಾಗಿದ್ದ ಅಜಿತ್ ಪವಾರ್ ತನ್ನ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರನಾಗಿದ್ದರು. ಹಲವು ಸರ್ಕಾರಗಳಲ್ಲಿ ನಾಲ್ಕು ಬಾರಿ ಡಿಸಿಎಂ ಆಗಿದ್ದ ಅಜಿತ್, ಹಲವಾರು ಖಾತೆಗಳನ್ನು ನಿಭಾಯಿಸಿದ್ದರು. ಹಾಲಿ ಸರ್ಕಾರದಲ್ಲಿ ಹಣಕಾಸು ಮತ್ತು ಅಬಕಾರಿ ಖಾತೆಗಳನ್ನು ಹೊಂದಿದ್ದರು. ಸುನೇತ್ರಾ ಅವರಿಗೆ ಅದೇ ಖಾತೆಗಳನ್ನು ಕೊಡಲಾಗುತ್ತದೆಯೇ ಎಂಬ ಬಗ್ಗೆ ಖಾತ್ರಿಯಿಲ್ಲ. 

ಇದೇ ವೇಳೆ, ಡಿಸಿಎಂ ಸ್ಥಾನಕ್ಕೆ ಸುನೇತ್ರಾ ನೇಮಕ ಮಾಡಿರುವುದಕ್ಕೆ ಶಿವಸೇನೆ ಟೀಕೆ ಮಾಡಿದೆ. ಅಲ್ಲದೆ, ಎನ್ ಸಿಪಿಯ ಕೆಲವು ಶಾಸಕರು ಅಸಮ್ಮತಿ ತೋರಿದ್ದಾರೆ. ಇಂದು ನಡೆದ ಶಾಸಕಾಂಗ ಸಭೆಯಲ್ಲಿ ಪಕ್ಷದ 45 ಶಾಸಕರು ಪಾಲ್ಗೊಂಡು ಮೂವರು ಗೈರಾಗಿದ್ದರು. ಪಕ್ಷದ ಹಿರಿಯ ನಾಯಕ ಛಗನ್ ಭುಜಬಲ್, ಸುನೇತ್ರಾ ಅವರ ನೇಮಕದ ಪರವಾಗಿ ನಿಂತು ಶಾಸಕರನ್ನು ಸೇರಿ ಮುಂದಿನ ನಾಯಕರಾಗಿ ಆಯ್ಕೆ ಮಾಡಿದ್ದಾರೆ. ಅಜಿತ್ ಪವಾರ್ ಜ.28ರಂದು ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು.

Following the death of Ajit Pawar in a recent plane crash, the NCP has unanimously chosen his wife Sunetra Pawar as its legislative leader, paving the way for her appointment as Maharashtra’s first woman Deputy Chief Minister. She is set to take oath this evening, even as the decision draws mixed reactions within the ruling alliance.