ಮಂಗಳೂರಿನಲ್ಲಿ ಒಳಚರಂಡಿ ಕಾಮಗಾರಿ ; 20 ವರ್ಷಗಳ ಹಿಂದೆ 380 ಕೋಟಿ ಎಡಿಬಿ ಸಾಲ, ಒಂದು ಕಂತನ್ನೂ ಪಾವತಿಸದ ಪಾಲಿಕೆ, ಅಸಲು ಬಡ್ಡಿ ಸೇರಿ 1375 ಕೋಟಿ ಬಾಕಿ ! ಕೆಲಸ ಆಗಿದ್ದಕ್ಕೆ ಪುರಾವೆಯೇ ಇಲ್ವಂತೆ !

29-09-26 01:25 pm       HK News Staffer   ಕರಾವಳಿ

ಮಂಗಳೂರು ಮಹಾನಗರದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳಿಗಿಂತ ಪಾಲಿಕೆಯವರು ಪದೇ ಪದೇ ಕಾಂಕ್ರೀಟ್ ರಸ್ತೆಯನ್ನು ಅಗೆದಿದ್ದಕ್ಕೆ ಸುದ್ದಿಯಾಗಿದ್ದೇ ಹೆಚ್ಚು. ಇಪ್ಪತ್ತು ವರ್ಷಗಳ ಹಿಂದೆ ಮಂಗಳೂರು ನಗರದಲ್ಲಿ ನೀರು ಸರಬರಾಜು ಹಾಗೂ ಒಳಚರಂಡಿ ಜಾಲದ ಸುಧಾರಣೆ ಉದ್ದೇಶದಿಂದ ಏಷ್ಯನ್ ಅಭಿವೃದ್ಧಿ ಬ್ಯಾಂಕ್‌ನಿಂದ ಪಾಲಿಕೆ ಪಡೆದುಕೊಂಡಿದ್ದ ಸಾಲದ ಮೊತ್ತವನ್ನು ಪಾವತಿಸದ ಕಾರಣ ಅದೀಗ ಮೂರು ಪಟ್ಟು ಬೆಳೆದಿದೆ.

ಮಂಗಳೂರು, ಸೆ. 28: ಮಂಗಳೂರು ಮಹಾನಗರದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳಿಗಿಂತ ಪಾಲಿಕೆಯವರು ಪದೇ ಪದೇ ಕಾಂಕ್ರೀಟ್ ರಸ್ತೆಯನ್ನು ಅಗೆದಿದ್ದಕ್ಕೆ ಸುದ್ದಿಯಾಗಿದ್ದೇ ಹೆಚ್ಚು. ಇಪ್ಪತ್ತು ವರ್ಷಗಳ ಹಿಂದೆ ಮಂಗಳೂರು ನಗರದಲ್ಲಿ ನೀರು ಸರಬರಾಜು ಹಾಗೂ ಒಳಚರಂಡಿ ಜಾಲದ ಸುಧಾರಣೆ ಉದ್ದೇಶದಿಂದ ಏಷ್ಯನ್ ಅಭಿವೃದ್ಧಿ ಬ್ಯಾಂಕ್‌ನಿಂದ ಪಾಲಿಕೆ ಪಡೆದುಕೊಂಡಿದ್ದ ಸಾಲದ ಮೊತ್ತವನ್ನು ಪಾವತಿಸದ ಕಾರಣ ಅದೀಗ ಮೂರು ಪಟ್ಟು ಬೆಳೆದಿದೆ. 

ಮಾಹಿತಿ ಹಕ್ಕು ಕಾಯಿದೆಯಡಿ ಲಭ್ಯವಾದ ಮಾಹಿತಿ ಪ್ರಕಾರ, ಯೋಜನೆಯ ಜಾರಿ ಸಂಸ್ಥೆಯಾದ ಕೆಯುಐಡಿಎಫ್‌ಸಿಗೆ ಆರಂಭದಲ್ಲಿ ಬಿಡುಗಡೆಯಾಗಿದ್ದ ಅಸಲು ಸಾಲದ ಮೊತ್ತ 380.34 ಕೋ. ರೂ. ಆಗಿತ್ತು. ಆದರೆ ಈ ಮೊತ್ತವನ್ನು ಮರು ಪಾವತಿಸುವ ಗೋಜಿಗೆ ಪಾಲಿಕೆ ಆಡಳಿತ ನಡೆಸಿದವರು ಹೋಗಿರಲಿಲ್ಲ. ಈ ಮೊತ್ತದಲ್ಲಿ ಕಾಮಗಾರಿ ಮಾಡಿದ್ದಕ್ಕಿಂತ ಕೆಲವರು ಹೊಟ್ಟೆ ತುಂಬಿಸಿಕೊಂಡಿದ್ದೇ ಹೆಚ್ಚು. ಒಂದೆಡೆ ಪದೇ ಪದೇ ನೋಟಿಸ್ ನೀಡಿದರೂ ಕ್ಯಾರೆನ್ನದ ಪಾಲಿಕೆಯ ಆಡಳಿತದ ಕಾರಣದಿಂದ ಈವರೆಗಿನ ಬಡ್ಡಿ ಹಾಗೂ ಶೇ. 2.5ರಷ್ಟು ದಂಡದ ಮೊತ್ತ ಸೇರಿ 2026ರ ಎಪ್ರಿಲ್ ವೇಳೆಗೆ ಈ ಮೊತ್ತ 1,375.17 ಕೋ.ರೂ. ತಲುಪಿದೆ. 

2026ನೇ ವರ್ಷಕ್ಕೆ ಸಾಲದ ಅವಧಿ ಮುಕ್ತಾಯಗೊಳ್ಳುತ್ತಿದ್ದರೂ ಮಂಗಳೂರು ಪಾಲಿಕೆ ಇದುವರೆಗೆ ಒಂದೇ ಒಂದು ಕಂತನ್ನೂ ಪಾವತಿಸಿಲ್ಲ. ಸಾಲ ತೀರಿಸುವಂತೆ ಕೆಯುಐಡಿಎಫ್‌ಸಿ ಈಗಾಗಲೇ 24ಕ್ಕೂ ಹೆಚ್ಚು 'ಡಿಮ್ಯಾಂಡ್ ನೋಟಿಸ್' ನೀಡಿದ್ದರೂ ಪಾಲಿಕೆ ಕಡೆಗಣಿಸಿದೆ ಎನ್ನಲಾಗಿದೆ. ವಿಚಿತ್ರ ಎಂದರೆ, ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಎಷ್ಟು ಕೆಲಸ ಆಗಿದೆ, ಎಲ್ಲೆಲ್ಲಿ ಎಡಿಬಿ ಕಾಮಗಾರಿ ಮುಗಿದಿದೆ ಎನ್ನುವ ಬಗ್ಗೆಯೂ ಅಧಿಕಾರಿಗಳಲ್ಲಿ ಮಾಹಿತಿ ಇಲ್ಲ. 

ಪಾಲಿಕೆಯು ಸಾಲದ ಒಂದು ಕಂತನ್ನೂ ಕಟ್ಟಿಲ್ಲ ಎಂದಾದರೆ, ಒಳಚರಂಡಿ ಸೆಸ್ ಹಾಗೂ ಇತರ ತೆರಿಗೆಗಳ ಮೂಲಕ ಸಾರ್ವಜನಿಕರಿಂದ ಸಂಗ್ರಹಿಸಿದ ಹಣ ಎಲ್ಲಿಗೆ ಹೋಯಿತು? ಅದನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆಯೇ? ಮರು ಪಾವತಿ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸುತ್ತಾರೆ, ಆರ್ಟಿಐ ಮಾಹಿತಿ ಪಡೆದ ಎನ್‌ಜಿಒ ಕಾರ್ಯಪಡೆಯ ಮಾಜಿ ಸಂಚಾಲಕ ಹರ್ಷ ಡಿ'ಸೋಜಾ. 

ಇದರ ಬಗ್ಗೆ ಪ್ರತಿಕ್ರಿಯಿಸಿರುವ ಪಾಲಿಕೆ ಅಧಿಕಾರಿಗಳು, ಕೆಯುಐಡಿಎಫ್ಸಿ ಅಡಿಯಲ್ಲಿ ಕಾಮಗಾರಿ ಪೂರ್ಣ ಆಗಿರುವುದಕ್ಕೆ ಸೂಕ್ತ ಪುರಾವೆಗಳೇ ಇಲ್ಲ. ಹೀಗಾಗಿ ಸಂಪೂರ್ಣ ಸಾಲವನ್ನು ಮನ್ನಾ ಮಾಡುವಂತೆ ಕೆಯುಐಡಿಎಫ್‌ಸಿಗೆ ಪಾಲಿಕೆಯಿಂದ ಪತ್ರ ಬರೆಯಲಾಗಿದೆ ಹಾಗೂ ಈ ಬಗ್ಗೆ ರಾಜ್ಯ ಸರಕಾರದ ನಿರ್ದೇಶನಕ್ಕಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ. 380 ಕೋಟಿ ಮೊತ್ತದಷ್ಟು ಎಡಿಬಿ ಸಾಲದ ಹಣವನ್ನು ಮಂಗಳೂರು ವ್ಯಾಪ್ತಿಯಲ್ಲಿ ಕರಗಿಸಿದ್ದರೂ, ಒಳಚರಂಡಿ ಕಾಮಗಾರಿ ಆಗಿರುವುದಕ್ಕೆ ದಾಖಲೆ ಇಲ್ಲ ಎನ್ನುವುದೇ ವ್ಯವಸ್ಥೆಯ ದುರಂತ ಎನ್ನಬೇಕು. 

ಈ ರೀತಿಯ ಸಾಲಗಳಿಗೆ ಸಾಮಾನ್ಯವಾಗಿ ರಾಜ್ಯ ಸರಕಾರವೇ ಗ್ಯಾರಂಟರ್ ಆಗಿರುತ್ತದೆ‌. ಅಲ್ಲದೆ ದೊಡ್ಡ ಮೊತ್ತವಾದ ಕಾರಣ ಮನಪಾದಿಂದಲೂ ಸಾಲ ಪಾವತಿಸುವುದಕ್ಕೆ ಯಾರೂ ಮುಂದಾಗಿಲ್ಲ ಎನ್ನುತ್ತಾರೆ ಮಾಜಿ ಮೇಯರ್ ಶಶಿಧರ ಹೆಗ್ಡೆ. ಇದೇ ವೇಳೆ, ಮತ್ತೊಬ್ಬ ಮಾಜಿ ಮೇಯರ್ ದಿವಾಕರ್ ಪ್ರತಿಕ್ರಿಯಿಸಿ, ಪಾಲಿಕೆಯಿಂದ ಈ ಎಡಿಬಿ ಸಾಲ ಪಡೆದು ಯುಜಿಡಿ ಕಾಮಗಾರಿ ಮಾಡುವುದಕ್ಕೆ ಅಧಿಕೃತ ಅನುಮತಿ ನೀಡಿರಲಿಲ್ಲ. ನೆದರ್ಲ್ಯಾಂಡ್ಸ್ ಕಂಪನಿಯೊಂದು ಕೆಯುಐಡಿಎಫ್ಸಿಯನ್ನು ಮಧ್ಯವರ್ತಿಯಾಗಿಸಿ ಒಳಚರಂಡಿ ಕಾಮಗಾರಿ ಕೈಗೆತ್ತಿಕೊಂಡಿತ್ತು. ಪಾಲಿಕೆಯಲ್ಲಿ ಇದರ ಬಗ್ಗೆ ಚರ್ಚೆಯೂ ಆಗಿತ್ತು ಎಂದು ಸ್ಮರಿಸಿದ್ದಾರೆ. 

ಮಂಗಳೂರಿನ ಒಳಚರಂಡಿ ಮತ್ತು ನೀರಿನ ಪೂರೈಕೆ ಸಲುವಾಗಿ 380 ಕೋಟಿ ಎಡಿಬಿ ಸಾಲ ಪಡೆದು ಕೆಯುಐಡಿಎಫ್ಸಿ ಮೂಲಕ ಕಾಮಗಾರಿ ಆರಂಭಿಸಲಾಗಿತ್ತು. 2002ರಲ್ಲಿ ಶುರುವಾದ ಕಾಮಗಾರಿ ಮಂಗಳೂರು ನಗರ, ಸುರತ್ಕಲ್ ಸೇರಿ ಕೆಲವು ಕಡೆ ಅರ್ದಂಬರ್ಧ ನಡೆದಿತ್ತು. ಕಳಪೆ ಕಾಮಗಾರಿ ಬಗ್ಗೆ ಪಾಲಿಕೆ ಸಭೆಗಳಲ್ಲಿ ಹಲವು ಬಾರಿ ಆಕ್ಷೇಪಗಳು ಕೇಳಿಬಂದಿದ್ದವು.

An Asian Development Bank (ADB) loan originally taken for improving water supply and underground drainage infrastructure in Mangaluru has reportedly ballooned from ₹380.34 crore to ₹1,375.17 crore due to accumulated interest and penal charges, with the Mangaluru City Corporation (MCC) yet to repay even a single instalment.