U T Khader, KDP Meeting, Bharath Sheety, Harish Poonja, Manglore: ಕೆಡಿಪಿ ಸಭೆಯಲ್ಲಿ ಕೆಆರ್‌ಐಡಿಎಲ್ ಕಮಿಷನ್ ಕಿಡಿ ; ‘ಮಕ್ಕಳಾಟಿಕೆ’ ಎಂದ ಖಾದರ್‌ಗೆ ಭರತ್ ಶೆಟ್ಟಿ-ಪೂಂಜಾ ತಿರುಗೇಟು, ಸಚಿವ-ಶಾಸಕರ ನಡುವೆ ತೀವ್ರ ವಾಕ್ಸಮರ!

15-09-26 06:52 pm       HK News Staffer   ಕರಾವಳಿ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪರಿಶೀಲನಾ ಸಭೆ ತೀವ್ರ ವಾಕ್ಸಮರ, ಗದ್ದಲ ಹಾಗೂ ರಾಜಕೀಯ ಜಟಾಪಟಿಗೆ ಸಾಕ್ಷಿಯಾಯಿತು. ಕೆಆರ್‌ಐಡಿಎಲ್‌ನಲ್ಲಿ ಬಿಲ್ ಪಾಸ್ ಮಾಡಲು ಶೇ.7ರಷ್ಟು ಕಮೀಷನ್ ಪಡೆಯಲಾಗುತ್ತಿದೆ ಎಂಬ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಅವರ ಪತ್ರ, ಕಸ್ತೂರಿ ರಂಗನ್ ವರದಿ ವಿಚಾರ ಸಭೆಯಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು.

ಮಂಗಳೂರು , ಸೆ.15: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪರಿಶೀಲನಾ ಸಭೆ ತೀವ್ರ ವಾಕ್ಸಮರ, ಗದ್ದಲ ಹಾಗೂ ರಾಜಕೀಯ ಜಟಾಪಟಿಗೆ ಸಾಕ್ಷಿಯಾಯಿತು. ಕೆಆರ್‌ಐಡಿಎಲ್‌ನಲ್ಲಿ ಬಿಲ್ ಪಾಸ್ ಮಾಡಲು ಶೇ.7ರಷ್ಟು ಕಮೀಷನ್ ಪಡೆಯಲಾಗುತ್ತಿದೆ ಎಂಬ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಅವರ ಪತ್ರ, ಕಸ್ತೂರಿ ರಂಗನ್ ವರದಿ ವಿಚಾರ ಸಭೆಯಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು.

ಕೆಆರ್‌ಐಡಿಎಲ್ ಕಮಿಷನ್ ಆರೋಪ: ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಬಿಜೆಪಿ ಪಟ್ಟು

ಕೆಆರ್‌ಐಡಿಎಲ್ ಕಾಮಗಾರಿಗಳ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಮಂಗಳೂರು ಉತ್ತರ ಶಾಸಕ ಡಾ. ವೈ.ಭರತ್ ಶೆಟ್ಟಿ ಹಾಗೂ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿಷಯವನ್ನು ಪ್ರಸ್ತಾಪಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. “ಪುತ್ತೂರಿನ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಅವರೇ ಕೆಆರ್‌ಐಡಿಎಲ್‌ನಲ್ಲಿ ಅಧಿಕಾರಿಗಳು ಬಿಲ್ ಪಾಸ್ ಮಾಡಲು ಶೇ.7ರಷ್ಟು ಕಮೀಷನ್ ವಸೂಲಿ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳಿಗೆ ಅಧಿಕೃತ ಪತ್ರ ಬರೆದಿದ್ದಾರೆ. ಆಡಳಿತ ಪಕ್ಷದ ಶಾಸಕರೇ ಇಂತಹ ಗಂಭೀರ ಆರೋಪ ಮಾಡಿರುವಾಗ ಅಭಿವೃದ್ಧಿ ಕಾಮಗಾರಿಗಳ ಕಥೆ ಏನು? ಕೆಆರ್‌ಐಡಿಎಲ್‌ಗೆ ಕೆಲಸ ಕೊಡುವುದನ್ನು ನಿಲ್ಲಿಸಬೇಕು. ಇಲಾಖಾ ಮಟ್ಟದ ತನಿಖೆ ಕಣ್ಣೊರೆಸುವ ತಂತ್ರವಾಗಬಾರದು. ಈ ವಿಚಾರದಲ್ಲಿ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕು” ಎಂದು ಡಾ. ಭರತ್ ಶೆಟ್ಟಿ ಆಗ್ರಹಿಸಿದರು.

ಹರೀಶ್ ಪೂಂಜಾ ಮಾತನಾಡಿ, “ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಅವರದ್ದೇ ಶಾಸಕರು ಬಯಲಿಗೆಳೆದಿದ್ದಾರೆ. ಇದು 60 ಪರ್ಸೆಂಟ್ ಸರ್ಕಾರ. ಜಿಲ್ಲೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹಾಲಿ ಜಡ್ಜ್ ತನಿಖೆ ಆಗಲೇಬೇಕು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶೂನ್ಯ ಭ್ರಷ್ಟಾಚಾರ ಎನ್ನುತ್ತಾರೆ. ಆದರೆ ಆಡಳಿತ ಪಕ್ಷದ ಶಾಸಕರೇ ಕಮೀಷನ್ ಕುರಿತು ಪತ್ರ ಬರೆದಿದ್ದಾರೆ” ಎಂದು ವಾಗ್ದಾಳಿ ನಡೆಸಿದರು. “ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲೇ ಈ ಬಗ್ಗೆ ತನಿಖೆಗೆ ನಿರ್ಣಯ ಕೈಗೊಳ್ಳಬೇಕು” ಎಂದು ಅವರು ಒತ್ತಾಯಿಸಿದರು.

‘ಮಕ್ಕಳಾಟಿಕೆ’ ಪದಕ್ಕೆ ಕೆಂಡಾಮಂಡಲ ;

ಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲದ ನಡುವೆ ಸಚಿವ ಯು.ಟಿ. ಖಾದರ್ “ಇದು ಮಕ್ಕಳಾಟಿಕೆ ಅಲ್ಲ, ಸಭೆ ನಿಯಮಾವಳಿ ಪ್ರಕಾರ ನಡೆಯಬೇಕು” ಎಂದು ಹೇಳಿದಾಗ ಭರತ್ ಶೆಟ್ಟಿ ಹಾಗೂ ಹರೀಶ್ ಪೂಂಜಾ ಆಕ್ಷೇಪ ವ್ಯಕ್ತಪಡಿಸಿದರು. “ಭ್ರಷ್ಟಾಚಾರ ಪ್ರಶ್ನಿಸಿದರೆ ಮಕ್ಕಳಾಟಿಕೆ ಎನ್ನುತ್ತೀರಾ? ಜನಪ್ರತಿನಿಧಿಗಳ ಧ್ವನಿಯನ್ನು ಹೀಗೆ ಹತ್ತಿಕ್ಕಬೇಡಿ” ಎಂದು ಇಬ್ಬರೂ ಶಾಸಕರು ಸಚಿವರೊಂದಿಗೆ ತೀವ್ರ ವಾಗ್ವಾದ ನಡೆಸಿದರು.

ಕೆಆರ್‌ಐಡಿಎಲ್ ಆರೋಪಕ್ಕೆ ಖಾದರ್ ಸ್ಪಷ್ಟನೆ;

ಗದ್ದಲ ಶಮನಗೊಳಿಸಲು ಮುಂದಾದ ಯು.ಟಿ. ಖಾದರ್, “ಅಶೋಕ್ ಕುಮಾರ್ ರೈ ಅವರು ಪತ್ರ ಬರೆದ ಬೆನ್ನಲ್ಲೇ ಆರ್‌ಡಿಪಿಆರ್ ಸಚಿವರಿಗೆ ಪತ್ರ ಬರೆದು ಪರಿಶೀಲನೆಗೆ ಕೋರಿದ್ದೇನೆ. ಈಗಾಗಲೇ ಸೂಪರಿಂಟೆಂಡೆಂಟ್ ಇಂಜಿನಿಯರ್ ಮಟ್ಟದ ಸಮಿತಿ ತನಿಖೆ ಆರಂಭಿಸಿದೆ” ಎಂದು ತಿಳಿಸಿದರು. “ಕೇವಲ ಯಾರೋ ಒಬ್ಬ ಗುತ್ತಿಗೆದಾರ ಹೇಳಿದ ಮಾತ್ರಕ್ಕೆ ಪ್ರಾಮಾಣಿಕ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಂದಿಸಬಾರದು. ಸತ್ಯಾಸತ್ಯತೆ ತಿಳಿಯಲು ಕಾನೂನು ಚೌಕಟ್ಟಿನಲ್ಲಿ ಯಾವ ತನಿಖಾ ಸಂಸ್ಥೆಗೆ ವಹಿಸಬೇಕೋ ಅದನ್ನು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ” ಎಂದು ಸಚಿವರು ಹೇಳಿದರು.

ಕಸ್ತೂರಿ ರಂಗನ್ ವರದಿ: ‘ಕೇವಲ ತಿರಸ್ಕಾರ ಸಾಲದು, ಕೇರಳ ಮಾದರಿ ಸಮೀಕ್ಷೆ ನಡೆಸಿ’

ಪಶ್ಚಿಮ ಘಟ್ಟ ಸಂರಕ್ಷಣೆಗೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿ ವಿಚಾರವೂ ಸಭೆಯಲ್ಲಿ ಪ್ರಮುಖ ಚರ್ಚೆಗೆ ಕಾರಣವಾಯಿತು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, “ವರದಿ ಜಾರಿಯಿಂದ ಕರಾವಳಿಯ ರೈತರು, ಅಡಿಕೆ-ರಬ್ಬರ್ ಬೆಳೆಗಾರರು ಆತಂಕದಲ್ಲಿದ್ದಾರೆ. ವೈಮಾನಿಕ ಸಮೀಕ್ಷೆಯಲ್ಲಿ ತೋಟಗಳನ್ನೂ ಅರಣ್ಯ ಎಂದು ನಮೂದಿಸಲಾಗಿದೆ. ರಾಜ್ಯ ಸರ್ಕಾರ ಈ ಹಿಂದೆ ಏಳು ಬಾರಿ ಸಂಪುಟದಲ್ಲಿ ವರದಿಯನ್ನು ತಿರಸ್ಕರಿಸಿದೆ” ಎಂದರು.

“ಸೆಪ್ಟೆಂಬರ್ 18ರ ಜಿಲ್ಲಾ ಸಚಿವ ಸಂಪುಟ ಸಭೆ ಹಾಗೂ ಮುಂಬರುವ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಜಾರಿಗೊಳಿಸುವುದಿಲ್ಲ ಎಂಬ ನಿರ್ಣಾಯಕ ತೀರ್ಮಾನ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು. ಹರೀಶ್ ಪೂಂಜಾ, “ವರದಿಯನ್ನು ಕೇವಲ ವಿರೋಧಿಸಿದರೆ ಸಾಲದು. ಗ್ರೀನ್ ಟ್ರಿಬ್ಯೂನಲ್ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ಸರ್ಕಾರದ ನಿಲುವು ಸಾಬೀತುಪಡಿಸಲು ನಮ್ಮ ಬಳಿ ದಾಖಲೆಗಳಿರಬೇಕು. ಕೇರಳ ಸರ್ಕಾರ ತಾಲೂಕು ಮಟ್ಟದಲ್ಲಿ ಗ್ರೌಂಡ್ ಸರ್ವೆ ನಡೆಸಿ ನಿಖರ ವರದಿ ಸಿದ್ಧಪಡಿಸಿದೆ” ಎಂದು ಹೇಳಿದರು.

“ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 43 ಗ್ರಾಮಗಳು ಬಾಧಿತವಾಗುತ್ತಿದ್ದು, ಕಂದಾಯ ಮತ್ತು ಅರಣ್ಯ ಇಲಾಖೆಗಳ ಸಮನ್ವಯದಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಗ್ರಾಮಸಭೆ ನಡೆಸಿ ಸಾರ್ವಜನಿಕ ಆಕ್ಷೇಪಣೆಗಳನ್ನು ದಾಖಲಿಸಬೇಕು” ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಖಾದರ್, “2012-13ರಲ್ಲಿ ರಮಾನಾಥ ರೈ ಅವರು ಅರಣ್ಯ ಸಚಿವರಾಗಿದ್ದಾಗಲೇ ವಲಯವಾರು ಸಮಿತಿ ರಚಿಸಿ, ಲಕ್ಷಾಂತರ ಹೆಕ್ಟೇರ್ ಜಾಗವನ್ನು ಕೈಬಿಡುವಂತೆ ಸುಪ್ರೀಂ ಕೋರ್ಟ್‌ಗೆ ರಾಜ್ಯದಿಂದ ವರದಿ ಕಳುಹಿಸಲಾಗಿತ್ತು. ಈಗಲೂ ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಜನಸಾಮಾನ್ಯರ ಮೇಲೆ ಯಾವುದೇ ನಿರ್ಬಂಧ ಹೇರಲು ಬಿಡುವುದಿಲ್ಲ” ಎಂದು ಭರವಸೆ ನೀಡಿದರು.

The quarterly Karnataka Development Programme (KDP) review meeting held under the chairmanship of Dakshina Kannada District In-charge Minister U.T. Khader at the Nethravathi Hall of the Dakshina Kannada Zilla Panchayat on Tuesday witnessed heated arguments, uproar and a political confrontation. A letter by Congress MLA Ashok Kumar Rai alleging that a 7% commission was being demanded for clearing bills related to Karnataka Rural Infrastructure Development Limited (KRIDL) works, along with the Kasturirangan report, triggered intense debate during the meeting.