Ashok Rai, Puttur News: 'ಉಸ್ತುವಾರಿ ಸಚಿವರಿಗೆ ಹಣ ಸಂದಾಯ ಮಾಡಲಿಕ್ಕಿದೆ' ಎಂದು ಗುತ್ತಿಗೆದಾರರಿಗೆ ಒತ್ತಡ ; ಮಂಗಳೂರಿನ ಕೆಆರ್ ಐಡಿಎಲ್ ಇಬ್ಬರು ಇಂಜಿನಿಯರ್ ಗಳ ವಿರುದ್ಧ ಶಾಸಕ ಅಶೋಕ ರೈ ಮುಖ್ಯಮಂತ್ರಿಗೆ ದೂರು 

31-08-26 11:04 pm       HK News Staffer   ಕರಾವಳಿ

ಉಸ್ತುವಾರಿ ಸಚಿವರಿಗೆ ಮತ್ತು ಇಲಾಖೆಯ ಸಚಿವರಿಗೆ ಹಣ ಸಂದಾಯ ಮಾಡಲಿಕ್ಕಿದೆ ಎಂದು ಹೇಳಿ ಮಂಗಳೂರಿನ ಕೆಆರ್ ಐಡಿಎಲ್ ಅಧಿಕಾರಿಗಳು ಗುತ್ತಿಗೆದಾರರಿಗೆ ಹಣಕ್ಕಾಗಿ ಒತ್ತಡ ಹೇರಿ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ರೈ ಅವರು ಸಿಎಂ ಡಿ.ಕೆ.ಶಿವಕುಮಾರ್ ಗೆ ಪತ್ರ ಬರೆದಿದ್ದು ಕ್ರಮಕ್ಕೆ ಆಗ್ರಹಿಸಿದ್ದಾರೆ. 

ಮಂಗಳೂರು, ಆ.31: ಉಸ್ತುವಾರಿ ಸಚಿವರಿಗೆ ಮತ್ತು ಇಲಾಖೆಯ ಸಚಿವರಿಗೆ ಹಣ ಸಂದಾಯ ಮಾಡಲಿಕ್ಕಿದೆ ಎಂದು ಹೇಳಿ ಮಂಗಳೂರಿನ ಕೆಆರ್ ಐಡಿಎಲ್ ಅಧಿಕಾರಿಗಳು ಗುತ್ತಿಗೆದಾರರಿಗೆ ಹಣಕ್ಕಾಗಿ ಒತ್ತಡ ಹೇರಿ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ರೈ ಅವರು ಸಿಎಂ ಡಿ.ಕೆ.ಶಿವಕುಮಾರ್ ಗೆ ಪತ್ರ ಬರೆದಿದ್ದು ಕ್ರಮಕ್ಕೆ ಆಗ್ರಹಿಸಿದ್ದಾರೆ. 

ಮಂಗಳೂರು ಕೆಆರ್ ಐಡಿಎಲ್ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ವಿಜಯ್ ಹಾಗೂ ಕಿರಿಯ ಇಂಜಿನಿಯರ್ ಪ್ರಜ್ವಲ್ ಎಂಬಿಬ್ಬರು ಹಣಕ್ಕಾಗಿ ಒತ್ತಡ ಹೇರಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಕಾಂಗ್ರೆಸ್ ಶಾಸಕರೇ ಮುಖ್ಯಮಂತ್ರಿಗೆ ದೂರು ಸಲ್ಲಿಸಿದ್ದು ದೂರಿನ ಪ್ರತಿಯನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿದ್ದಾರೆ. 

ಇವರ ಕರ್ತವ್ಯ ನಿರ್ವಹಣೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪಗಳು ಹಾಗೂ ದೂರುಗಳು ಕೇಳಿಬಂದಿವೆ. ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ ವಿವಿಧ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇಲಾಖೆಯ ಸಚಿವರ ಹೆಸರಲ್ಲಿ ಮಾಸಿಕವಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಸಚಿವರಿಗೆ ಹಣ ಸಂದಾಯ ಮಾಡಬೇಕಾಗುತ್ತದೆ ಎಂದು ಹೇಳಿ ಗುತ್ತಿಗೆದಾರರಿಂದ ಅಧಿಕಾರಿಗಳ ಹಣ ವಸೂಲಿ ಮಾಡುತ್ತಿದ್ದಾರೆ. ಕೆ.ಆರ್.ಐ.ಡಿ.ಎಲ್. ಚಾರ್ಜ್ ಹೆಸರಿನಲ್ಲಿ ಶೇ.7ರ ವರೆಗೆ ಹೆಚ್ಚುವರಿ ಹಣವನ್ನು ಪಡೆಯಲಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದ ಗುತ್ತಿಗೆದಾರರಿಗೆ ಬೆದರಿಕೆ ಒಡ್ಡಿರುವ ಬಗ್ಗೆ ಗಂಭೀರ ದೂರುಗಳು ಬಂದಿರುತ್ತವೆ. 

ಸಾರ್ವಜನಿಕ ಹಣದಿಂದ ಕೈಗೊಳ್ಳಲಾಗುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಪಾರದರ್ಶಕತೆ, ಗುಣಮಟ್ಟ ಹಾಗೂ ನಿಯಮಾನುಸಾರ ಕಾರ್ಯನಿರ್ವಹಣೆ ಅತ್ಯಂತ ಅಗತ್ಯವಾಗುತ್ತದೆ. ಆದರೆ, ಮೇಲ್ಕಂಡ ಅಧಿಕಾರಿಗಳ ವಿರುದ್ಧ ಕೇಳಿಬರುತ್ತಿರುವ ಆರೋಪಗಳು ಸತ್ಯವೇ ಎಂದು ಪರಿಶೀಲನೆ ಮಾಡಬೇಕು. ಸತ್ಯವಾದರೆ, ಅದು ಸಾರ್ವಜನಿಕ ಹಣದ ದುರುಪಯೋಗಕ್ಕೆ ಕಾರಣವಾಗುತ್ತದೆ. ಇಲಾಖೆಯ ಘನತೆ ಹಾಗೂ ಸಾರ್ವಜನಿಕರ ವಿಶ್ವಾಸಕ್ಕೆ ಧಕ್ಕೆ ಉಂಟುಮಾಡುವ ಗಂಭೀರ ವಿಷಯವಾಗಿದೆ. 

ಆದ್ದರಿಂದ, ಮೇಲ್ಕಂಡ ಅಧಿಕಾರಿಗಳ ವಿರುದ್ಧ ಬಂದಿರುವ ದೂರುಗಳ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತ ಹಾಗೂ ಸಮಗ್ರ ಇಲಾಖಾ ತನಿಖೆ ನಡೆಸಬೇಕು.  ತನಿಖೆ ಪೂರ್ಣಗೊಳ್ಳುವವರೆಗೆ ಸದ್ರಿ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಆಡಳಿತಾತ್ಮಕ ದೃಷ್ಟಿಯಿಂದ ಬೇರೆಡೆಗೆ ವರ್ಗಾವಣೆ ಮಾಡುವ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅಧಿಕಾರಿಗಳ ವಿರುದ್ಧ ಶಾಸಕ ಅಶೋಕ ರೈ ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ.