Mangalore Murder: ಕುಡಿದ ಮತ್ತಿನಲ್ಲಿ ಮೊಬೈಲ್ ವಿಚಾರಕ್ಕೆ ಹತ್ಯೆ ; ಅಣ್ಣನನ್ನೇ ಇರಿದು ಕೊಂದ ತಮ್ಮ, ಮಂಗಳೂರಿನಲ್ಲಿ ಬೆಳಗಾವಿ ಸೋದರರ ಕೋಳಿ ಜಗಳ

31-08-26 12:01 pm       HK News Staffer   ಕ್ರೈಂ

ಕುಡಿದ ಮತ್ತಿನಲ್ಲಿ ಮೊಬೈಲ್ ವಿಚಾರಕ್ಕೆ ಜಗಳ ನಡೆದು ತಮ್ಮನೇ ಅಣ್ಣನನ್ನು ಚೂರಿಯಿಂದ ಎದೆಗೆ ಇರಿದು ಕೊಂದ ಘಟನೆ ನಗರದ ಕೊಟ್ಟಾರ ಬಳಿಯಲ್ಲಿ ನಡೆದಿದೆ. ಕೊಟ್ಟಾರ ಕ್ರಾಸ್ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಬೆಳಗಾವಿ ಮೂಲದ ಅಡಿವೆಪ್ಪ ಕುಂಬಾರ (43) ಮೃತ ವ್ಯಕ್ತಿ. 

ಮಂಗಳೂರು, ಆ.31: ಕುಡಿದ ಮತ್ತಿನಲ್ಲಿ ಮೊಬೈಲ್ ವಿಚಾರಕ್ಕೆ ಜಗಳ ನಡೆದು ತಮ್ಮನೇ ಅಣ್ಣನನ್ನು ಚೂರಿಯಿಂದ ಎದೆಗೆ ಇರಿದು ಕೊಂದ ಘಟನೆ ನಗರದ ಕೊಟ್ಟಾರ ಬಳಿಯಲ್ಲಿ ನಡೆದಿದೆ. ಕೊಟ್ಟಾರ ಕ್ರಾಸ್ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಬೆಳಗಾವಿ ಮೂಲದ ಅಡಿವೆಪ್ಪ ಕುಂಬಾರ (43) ಮೃತ ವ್ಯಕ್ತಿ. 

ಬೆಳಗಾವಿ ಬೈಲಹೊಂಗಲ ತಾಲೂಕಿನವರಾದ ಈರವ್ವ ಮತ್ತು ಅವರ ಇಬ್ಬರು ಪುತ್ರರು ಹಾಗೂ ಕುಟುಂಬ ಸದಸ್ಯರು ಮಂಗಳೂರಿನಲ್ಲಿ ನೆಲೆಸಿದ್ದು ಈರವ್ವ ಕೊಟ್ಟಾರ ಬಳಿಯಲ್ಲಿ ಗೂಡಂಗಡಿ ನಡೆಸುತ್ತಿದ್ದಾರೆ.‌ ಇವರ ಪುತ್ರರಾದ ಅಡಿವೆಪ್ಪ ಮತ್ತು ರಾಜು ವಿಪರೀತ ಕುಡಿತದ ಚಟ ಹೊಂದಿದ್ದು ಕೂಲಿ ಕೆಲಸ ಮಾಡಿಕೊಂಡಿದ್ದಾರೆ. 

ಆ.30ರ ನಿನ್ನೆ ಸಂಜೆ ತಮ್ಮ ರಾಜು ಬಳಿಯಿದ್ದ ಮೊಬೈಲನ್ನು ಅಣ್ಣ ಕಿತ್ತುಕೊಂಡಿದ್ದು ಇದರ ಬಗ್ಗೆ ಗೂಡಂಗಡಿ ಎದುರಲ್ಲಿ ಜಗಳವಾಗಿತ್ತು. ಬಳಿಕ ತಾಯಿಯೇ ಜಗಳ ಬಿಡಿಸಿ ಮೊಬೈಲ್ ನ್ನು ರಾಜುಗೆ ಕೊಡಿಸಿದ್ದರು. ಇಬ್ಬರಿಗೂ ಮದುವೆಯಾಗಿದ್ದರೂ ಕುಡಿತದ ಕಾರಣ ಪತ್ನಿಯರು ಇವರೊಂದಿಗೆ ಇರದೆ ಕಾವೂರಿನಲ್ಲಿ ಬೇರೆ ಮನೆ ಮಾಡಿಕೊಂಡಿದ್ದರು. ಹೀಗಾಗಿ ನಿನ್ನೆ ರಾತ್ರಿ ತಾಯಿ ಅಂಗಡಿಯಲ್ಲಿರುವಾಗ ಇಬ್ಬರು ಪುತ್ರರು ಮನೆಗೆ ಹೋಗಿ ಜಗಳ ಮಾಡಿದ್ದು ಈ ವೇಳೆ ರಾಜು ಚೂರಿಯಿಂದ ಅಣ್ಣನ ಎದೆಗೆ ಇರಿದಿದ್ದಾನೆ.‌ ರಾತ್ರಿ 10.30ರ ಸುಮಾರಿಗೆ ಪಕ್ಕದ ಮನೆಯ ಪ್ರೀತಮ್ ಎನ್ನುವಾತ ಬಂದು ನೋಡಿದಾಗ, ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ತಾಯಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಉರ್ವಾ ಪೊಲೀಸರಿಗೆ ತಿಳಿಸಿದ್ದು ತೀವ್ರ ರಕ್ತಸ್ರಾವದಿಂದ ನೆಲಕ್ಕೊರಗಿದ್ದ ಅಡಿವೆಪ್ಪನನ್ನು ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಕರೆದೊಯ್ದ ವೇಳೆ ಆತ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. 

ಉರ್ವಾ ಠಾಣೆ ಪೊಲೀಸರು ಆರೋಪಿ ರಾಜುವನ್ನು ಬಂಧಿಸಿದ್ದು ಘಟನೆ ಬಗ್ಗೆ ತಾಯಿ ಈರವ್ವ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.