ರಿಯಲ್ ಎಸ್ಟೇಟ್ ಉದ್ಯಮಿ ಹಠಾತ್ತನೆ ಹೃದಯಾಘಾತಕ್ಕೆ ಬಲಿ ; ಪಿಲಾರು ದೇಲಂತಬೆಟ್ಟಿನಲ್ಲಿ ವಾರದ ಅಂತರದಲ್ಲಿ ಬಾವ - ಬಾಮೈದ ಸಾವು ! 

20-01-26 10:00 pm       Mangalore Correspondent   ಕರಾವಳಿ

ಪ್ರಗತಿಪರ ಕೃಷಿಕ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಸೋಮೇಶ್ವರ ಗ್ರಾಮದ ಪಿಲಾರು ದೇಲಂತ ಬೆಟ್ಟು ನಿವಾಸಿ ರಘುರಾಮ ಶೆಟ್ಟಿ (50) ಮಂಗಳವಾರ ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ಹಠಾತ್ತನೆ ಸಾವನ್ನಪ್ಪಿದ್ದಾರೆ. 

ಉಳ್ಳಾಲ, ಜ.20: ಪ್ರಗತಿಪರ ಕೃಷಿಕ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಸೋಮೇಶ್ವರ ಗ್ರಾಮದ ಪಿಲಾರು ದೇಲಂತ ಬೆಟ್ಟು ನಿವಾಸಿ ರಘುರಾಮ ಶೆಟ್ಟಿ (50) ಮಂಗಳವಾರ ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ಹಠಾತ್ತನೆ ಸಾವನ್ನಪ್ಪಿದ್ದಾರೆ. 

ಬೆಳಗ್ಗೆ ಲವಲವಿಕೆಯಿಂದಲೇ ಪುತ್ರನನ್ನ ಶಾಲೆಗೆ ಬಿಟ್ಟು ಬಂದು, ತೋಟದ ಕೆಲಸದಲ್ಲಿ ತೊಡಗಿಸಿದ್ದ ರಘುರಾಮ್ ಅವರು ದಣಿದ ಕಾರಣ ಮನೆಯೊಳಗೆ ನಿದ್ದೆಗೆ ಜಾರಿದ್ದರು. ಮನೆಗೆ ಬಂದಿದ್ದ ಸಹೋದರಿ ರಘುರಾಮ್ ಅವರನ್ನ ಎಬ್ಬಿಸಲು ಹೋದಾಗ ರಘು ಅವರ ದೇಹವು ಪ್ರತಿಕ್ರಿಯಿಸದಿದ್ದಾಗ ವೈದ್ಯರನ್ನ ಕರೆಸಿ ಪರಿಶೀಲಿಸಿದ್ದು, ವೈದ್ಯರು ಹೃದಯಾಘಾತದಿಂದ ಸಾವನ್ನಪ್ಪಿರೋದಾಗಿ ಖಚಿತ ಪಡಿಸಿದ್ದಾರೆ. ಕಳೆದ ವಾರ ಜ.12ರ ಸೋಮವಾರ ರಘುರಾಮ್ ಶೆಟ್ಟಿಯವರ ಬಾವ (ಸಹೋದರಿಯ ಪತಿ) ಚಂದ್ರಹಾಸ್ ಶೆಟ್ಟಿ ಅವರು ಶಬರಿಮಲೆ ಯಾತ್ರೆಗೆ ತೆರಳಿದ್ದ ವೇಳೆ ಎರಿಮಲೆಯಲ್ಲಿ ಹೃದಯಾಘಾತದಿಂದ‌ ಸಾವನ್ನಪ್ಪಿದ್ದರು. ಮಾರನೇ ದಿನ ಮಂಗಳವಾರ ಚಂದ್ರಹಾಸ್ ಅವರ ಪಾರ್ಥಿವ ಶರೀರವನ್ನ ತಂದು ಅಂತ್ಯಕ್ರಿಯೆ ನಡೆಸಲಾಗಿತ್ತು. ಇದೀಗ ಚಂದ್ರಹಾಸ್ ಅವರ ಬಾಮೈದ ರಘುರಾಮ್ ಅವರು ಮಂಗಳವಾರದಂದೇ ಅಕಾಲಿಕವಾಗಿ ಸಾವನ್ನಪ್ಪಿದ್ದು, ಪಿಲಾರು ದೇಲಂತಬೆಟ್ಟುವಿನ ಮನೆಯಲ್ಲಿ ವಾರದಂತರದಲ್ಲೇ ಎರಡು ಸಾವು ಸಂಭವಿಸಿದ್ದು ಕುಟುಂಬಸ್ಥರನ್ನ ದುಃಖದ ಕಡಲಲ್ಲಿ ಮುಳುಗಿಸಿದೆ.

ಮೃತ ರಘುರಾಮ್ ಅವರ ಅಂತ್ಯಕ್ರಿಯೆ ಮಂಗಳವಾರ ಸಂಜೆ ಪಿಲಾರು ದೇಲಂತಬೆಟ್ಟುವಿನ ಅವರ ಸ್ವಗೃಹದ ಗದ್ದೆಯಲ್ಲಿ ನಡೆಯಿತು. ರಘುರಾಮ್ ಅವರ ಸಹೋದರ ಪುರುಷೋತ್ತಮ ಶೆಟ್ಟಿ ಸೋಮೇಶ್ವರ ಪುರಸಭೆಯ ವಿಪಕ್ಷ ನಾಯಕರಾಗಿದ್ದು, ಸೋಮೇಶ್ವರ ಪುರಸಭೆಯ ಉಪಾಧ್ಯಕ್ಷರಾದ ರವಿಶಂಕರ ಸೋಮೇಶ್ವರ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ಗಟ್ಟಿ ಪರ್ಯತ್ತೂರು, ಮೂಡಾ ಅಧ್ಯಕ್ಷರಾದ ಸದಾಶಿವ ಉಳ್ಳಾಲ್ ಮೊದಲಾದ ಗಣ್ಯರು ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಂಡರು.

ಲಕ್ನೋದಲ್ಲಿರುವ ವಿಧಾನಸಭೆಯ ಸಭಾಪತಿಗಳಾದ ಯು.ಟಿ.ಖಾದರ್ ಅವರು ರಘುರಾಮ್ ಶೆಟ್ಟಿ ಅವರ ಅಕಾಲಿಕ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ರಘುರಾಮ್ ಅವರು ಕೃಷಿಕರಲ್ಲದೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿದ್ದು ಸ್ಥಳೀಯ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ದೇಣಿಗೆ ನೀಡಿ ಸಹಕರಿಸುತ್ತ ಜನಾನುರಾಗಿಯಾಗಿದ್ದರು. ಮೃತ ರಘುರಾಮ್ ಅವರು ಪತ್ನಿ, ಓರ್ವ ಪುತ್ರ, ಸಹೋದರ, ಸಹೋದರಿಯರನ್ನ ಅಗಲಿದ್ದಾರೆ.

Raghuram Shetty (50), a progressive farmer and real estate entrepreneur from Pilaru Delantabettu in Someshwar village, died of a sudden heart attack at his residence on Tuesday morning. His death comes just a week after his brother-in-law also died of a heart attack during the Sabarimala pilgrimage, plunging the family into deep grief.