ಸಾರ್ವಜನಿಕ ಬಾವಿ ಪಕ್ಕದಲ್ಲೇ ಕೊಳವೆ ಬಾವಿ ; ಸ್ಥಳೀಯರ ವಿರೋಧ, ಜಟಾಪಟಿ- ಕಾಮಗಾರಿಗೆ ತಡೆ,  ಬಾವಿಯೇ ಮಾಡ್ತೀನಿ ಎಂದ ಮನೆ ಮಾಲೀಕ

13-06-23 02:55 pm       HK News Desk   ಕರಾವಳಿ

ಸಾರ್ವಜನಿಕ ಬಾವಿಯಿರುವ ನೂರು ಮೀಟರ್ ವ್ಯಾಪ್ತಿಯೊಳಗಿನ ಖಾಸಗಿ ಜಾಗದಲ್ಲಿ‌ ಕೊಳವೆ ಬಾವಿ ನಿರ್ಮಾಣಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ಕುಂಪಲ ಮೂರುಕಟ್ಟೆಯ ಬಲ್ಯ ಎಂಬಲ್ಲಿ ನಡೆದಿದ್ದು, ಸ್ಥಳಕ್ಕೆ ಬಂದ ಕೋಟೆಕಾರು ಪಟ್ಟಣ ಪಂಚಾಯತ್ ಕಿರಿಯ ಅಭಿಯಂತರ ಬೋರ್ ವೆಲ್ ಕಾಮಗಾರಿಯನ್ನ‌ ತಡೆ ಹಿಡಿದಿದ್ದಾರೆ.

ಉಳ್ಳಾಲ, ಜೂ.13: ಸಾರ್ವಜನಿಕ ಬಾವಿಯಿರುವ ನೂರು ಮೀಟರ್ ವ್ಯಾಪ್ತಿಯೊಳಗಿನ ಖಾಸಗಿ ಜಾಗದಲ್ಲಿ‌ ಕೊಳವೆ ಬಾವಿ ನಿರ್ಮಾಣಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ಕುಂಪಲ ಮೂರುಕಟ್ಟೆಯ ಬಲ್ಯ ಎಂಬಲ್ಲಿ ನಡೆದಿದ್ದು, ಸ್ಥಳಕ್ಕೆ ಬಂದ ಕೋಟೆಕಾರು ಪಟ್ಟಣ ಪಂಚಾಯತ್ ಕಿರಿಯ ಅಭಿಯಂತರ ಬೋರ್ ವೆಲ್ ಕಾಮಗಾರಿಯನ್ನ‌ ತಡೆ ಹಿಡಿದಿದ್ದಾರೆ. 

ಕುಂಪಲದ ಮೂರುಕಟ್ಟೆ ಬಲ್ಯ ಎಂಬಲ್ಲಿ ಸರ್ವೇ ಸಂಖ್ಯೆ 202/1 ರಲ್ಲಿ ಸಂತೋಷ್ ಪ್ರಭು ಎಂಬವರು ಐದು ಸೆಂಟ್ಸ್ ಜಾಗ ಹೊಂದಿದ್ದು ಇಲ್ಲಿ ಕೊಳವೆ ಬಾವಿ ತೋಡಲು ಕೋಟೆಕಾರು ಪಟ್ಟಣ ಪಂಚಾಯತ್ಗೆ ಮನವಿ ಸಲ್ಲಿಸಿದ್ದರು. ಸರಕಾರಿ ಬಾವಿಯ 500 ಮೀಟರ್ ಒಳಗಡೆ ಕೊಳವೆ ಬಾವಿ‌  ತೋಡಲು ನಿರಾಕ್ಷೇಪಣ ಪತ್ರ ನೀಡಲು ಪಂಚಾಯತಿಗೆ ಅಧಿಕಾರ ಇಲ್ಲದ ಕಾರಣ ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂ ವಿಜ್ಞಾನಿಯವರಿಗೆ ಪಂಚಾಯತ್ ಕಡೆಯಿಂದ ಮನವಿ ನೀಡಲಾಗಿತ್ತು. 

ಸ್ಥಳ ಪರಿಶೀಲನೆ ನಡೆಸಿದ್ದ ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂ ವಿಜ್ಞಾನಿ ದಾವೂದ್ ಅವರು ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ವರದಿ ನೀಡಿದ್ದರು. ಹಿರಿಯ ಭೂ ವಿಜ್ಞಾನಿ ದಾವೂದ್  ಅವರ ಶಿಫಾರಸಿನಂತೆ ಜಿಲ್ಲಾಧಿಕಾರಿ ಕಾರ್ಯಾಲಯದಿಂದ ಕೆಲ ಷರತ್ತುಗಳೊಂದಿಗೆ ಸಂತೋಷ್ ಪ್ರಭು ಅವರಿಗೆ ಕೊಳವೆ ಬಾವಿ ತೋಡಲು ಅನುಮತಿ ನೀಡಲಾಗಿತ್ತು.

ಅನುಮತಿ ದೊರೆತಂತೆ ಸಂತೋಷ್ ಪ್ರಭು ಅವರು ನಿನ್ನೆ ರಾತ್ರಿಯೇ ತರಾತುರಿಯಲ್ಲಿ‌ ಕೊಳವೆ ಬಾವಿ ಕೊರೆಯಲು ಮುಂದಾಗಿದ್ದರು. ನೀರಿಲ್ಲದೆ ಕಂಗೆಟ್ಟಿದ್ದ ಸ್ಥಳೀಯರು ತೀವ್ರ ಪ್ರತಿರೋಧ ಒಡ್ಡಿದ್ದು ಕಾಮಗಾರಿಯನ್ನ ತಡೆದಿದ್ದಾರೆ. ಇಂದು ಬೆಳಗ್ಗೆ ಕೊಳವೆ ಬಾವಿ ಕಾಮಗಾರಿ ಪ್ರದೇಶಕ್ಕೆ ಕೋಟೆಕಾರು ಪಟ್ಟಣ ಪಂಚಾಯತ್ ಕಿರಿಯ ಅಭಿಯಂತರ ದಿನೇಶ್.ಕೆ ಅವರು ಭೇಟಿ ನೀಡಿ ಜನಾಕ್ರೋಶಕ್ಕೆ ಮಣಿದು ಕಾಮಗಾರಿಯನ್ನ ತಡೆಹಿಡಿದಿದ್ದಾರೆ. 

ದಿನೇಶ್ ಕೆ ಅವರು ಪಟ್ಟಣ ಪಂಚಾಯತ್ ಕಚೇರಿಗೆ ಸಂತೋಷ್ ಪ್ರಭು ಮತ್ತು ಸ್ಥಳೀಯರನ್ನ ಕರೆಸಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸಂತೋಷ್ ಪ್ರಭು ಅವರು ಜಿಲ್ಲಾಧಿಕಾರಿ ಕಚೇರಿಯ ಷರತ್ತಿನನ್ವಯ ಬೋರ್ ವೆಲ್ ಕೊರೆದು ಸ್ಥಳೀಯರಿಗೆ ನೀರಿನ ಸಮಸ್ಯೆ ಉಂಟಾದಲ್ಲಿ ಪಂಚಾಯತ್ ಮುಖಾಂತರ ರೇಷನಿಂಗ್ ನಡೆಸಿ ಜನರಿಗೆ ನೀರು ಕೊಡುವುದಾಗಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಭಿಯಂತರರು ಬೋರ್ ವೆಲ್ ಕೊರೆದು ಜನರಿಗೆ ನೀರು ಕೊಡುವುದಾದರೆ ಮೂರು ಸೆಂಟ್ಸ್ ಜಾಗವನ್ನ ಪಂಚಾಯತ್ಗೆ ಕೊಡುವುದಾಗಿ ದಾನ ಪತ್ರ ಬರೆದು ಕೊಡಲು ಹೇಳಿದ್ದಾರೆ. ಇರೋದೇ ಐದು ಸೆಂಟ್ಸ್ ಜಾಗದಲ್ಲಿ ಮೂರು ಸೆಂಟ್ಸ್ ಜಾಗವನ್ನ ದಾನ ನೀಡಿದರೆ ಗತಿಯೇನಂತ ಜಾಗದ ಮಾಲೀಕ ಸಂತೋಷ್ ಪ್ರಭು ಹೇಳಿದ್ದು, ತಾನು ಆ ಜಾಗದಲ್ಲಿ ಬಾವಿಯನ್ನ ಅಗೆಯೋದಾಗಿ ಹೇಳಿದ್ದು ಅದಕ್ಕೆ ಊರವರು ಸಹಕಾರ ನೀಡಬೇಕಾಗಿ ಕೋರಿದ್ದು ಪ್ರಕರಣ ರಾಜಿಯಲ್ಲಿ ಇತ್ಯರ್ಥಗೊಂಡಿದೆ.

Mangalore Fight over borewell next to water well at Kumpala, borewell work stopped by Panchyath officals