ಗೃಹ ಪ್ರವೇಶ ದಿನವೇ ಎಂಟ್ರಿ ಕೊಟ್ಟಿದ್ದ ಬ್ಯಾಂಕ್ ಸಿಬಂದಿ ! ನೆಂಟರಿಷ್ಟರ ಮುಂದೆಯೇ ಮಾನ ಹರಾಜು, ನಂಬಿದ್ದ ಮಹಿಳೆಯಿಂದಲೇ ಮೋಸ, ಕುಂಪಲದ ಯುವತಿ ಸಾವಿಗೆ ಟ್ವಿಸ್ಟ್ !     

08-06-23 10:39 pm       Mangalore Correspondent   ಕರಾವಳಿ

ಒಂದೆಡೆ ಮನೆ ಖರೀದಿಸಿ ಗೃಹ ಪ್ರವೇಶದ ಸಂಭ್ರಮ. ಮತ್ತೊಂದೆಡೆ, ಅದೇ ವೇಳೆಗೆ ಬ್ಯಾಂಕ್ ಅಧಿಕಾರಿಗಳು ಬಂದು ಮನೆ ಜಪ್ತಿ ಮಾಡುವ ಬೆದರಿಕೆ ಹಾಕಿದ್ದರು.

ಉಳ್ಳಾಲ, ಜೂ.8: ಒಂದೆಡೆ ಮನೆ ಖರೀದಿಸಿ ಗೃಹ ಪ್ರವೇಶದ ಸಂಭ್ರಮ. ಮತ್ತೊಂದೆಡೆ, ಅದೇ ವೇಳೆಗೆ ಬ್ಯಾಂಕ್ ಅಧಿಕಾರಿಗಳು ಬಂದು ಮನೆ ಜಪ್ತಿ ಮಾಡುವ ಬೆದರಿಕೆ ಹಾಕಿದ್ದರು. ನಂಬಿದ ಮಹಿಳೆಯಿಂದಲೇ ಮೋಸ ಹೋಗಿದ್ದು ಮತ್ತು ಸಂಬಂಧಿಕರು, ಕುಟುಂಬಸ್ಥರ ಎದುರಲ್ಲೇ ಬ್ಯಾಂಕಿನವರು ಮಾನ ಹರಾಜು ಹಾಕಿದ್ದೇ ಕುಂಪಲದ ಯುವತಿ ದಿಢೀರ್ ಸಾವಿಗೆ ಕಾರಣ ಎನ್ನುವ ಆರೋಪ ಕೇಳಿಬಂದಿದೆ.
 
ಮೂಲತಃ ಮಂಗಳೂರು ಬಳಿಯ ಫರಂಗಿಪೇಟೆಯ ಸದ್ಯ ಕುಂಪಲ ಚಿತ್ರಾಂಜಲಿ ನಗರದ ನಿವಾಸಿ ಅಶ್ವಿನಿ ಬಂಗೇರ (25) ಮೊನ್ನೆಯಷ್ಟೇ ಗೃಹ ಪ್ರವೇಶ ಮಾಡಿಕೊಂಡಿದ್ದ ಮನೆಯಲ್ಲೇ ಸಾವಿಗೆ ಶರಣಾಗಿರುವುದು ಪ್ರಜ್ಞಾವಂತರ ಮನ ಕಲಕಿದೆ. ದುಬೈನಲ್ಲಿ ಉದ್ಯೋಗದಲ್ಲಿದ್ದ ಅಶ್ವಿನಿ ಕೆಲವು ದಿನಗಳ ಹಿಂದಷ್ಟೇ ಊರಿಗೆ ಆಗಮಿಸಿದ್ದಳು. ದುಬೈಯಲ್ಲಿದ್ದಾಗಲೇ ಸಂಗೀತಾ ಎಂಬ ಮಹಿಳೆಯ ಪರಿಚಯವಾಗಿತ್ತು. ಆಕೆ ಪ್ರಸ್ತಾಪಿಸಿದಂತೆ ಕುಂಪಲದಲ್ಲಿರುವ ಮನೆಯನ್ನು ಖರೀದಿಸಲು ಅಶ್ವಿನಿ ಮುಂದಾಗಿದ್ದಳು. ಮನೆಗೆ ಬ್ಯಾಂಕ್ ಸಾಲ ಇರುವ ಬಗ್ಗೆಯೂ ಸಂಗೀತಾ ತಿಳಿಸಿದ್ದಳು ಎನ್ನಲಾಗಿದೆ.


 
ಅದರಂತೆ ಬ್ಯಾಂಕ್ ಸಾಲ ಪೂರ್ತಿ ಪಾವತಿಯಾದ ಬಳಿಕವೇ ಅಶ್ವಿನಿ ಹೆಸರಿಗೆ ಮನೆಯನ್ನು ನೋಂದಣಿ ಮಾಡಿಸುವುದಾಗಿ ಮಾತುಕತೆ ಆಗಿತ್ತು. ಕರ್ನಾಟಕ ಬ್ಯಾಂಕ್ನಿಂದ ಮನೆಗೆ ಸಾಲ ಪಡೆದಿದ್ದು, 18 ಲಕ್ಷ ರೂ. ಪಾವತಿ ಬಾಕಿಯಿತ್ತು. ಬ್ಯಾಂಕ್ ಸಾಲದ ಕಾರಣಕ್ಕೆ ಸಂಗೀತಾ ಮನೆ ಮಾರಲು ಮುಂದಾಗಿದ್ದು, ಅಶ್ವಿನಿ ಜೊತೆಗೆ ಮಾತುಕತೆ ಮಾಡಿ ಮೊದಲೇ ಏಳು ಲಕ್ಷ ರೂಪಾಯಿ ನಗದು ಪಡೆದಿದ್ದಳು. ಆನಂತರ, ತಿಂಗಳ ಇಎಂಐ ಪಾವತಿಗೆಂದು ಅಶ್ವಿನಿ ಬಳಿಯಿಂದ ಎಂಟು ತಿಂಗಳ ಕಾಲ 17 ಸಾವಿರ ರೂ.ನಂತೆ ಪಡೆಯುತ್ತಿದ್ದಳು. ಸಂಗೀತಾಳನ್ನು ನಂಬಿ, ಅಶ್ವಿನಿ ಹಣ ನೀಡುತ್ತಿದ್ದಳು ಎನ್ನಲಾಗುತ್ತಿದೆ. ಆದರೆ ಸಂಗೀತಾ ಆ ಹಣವನ್ನು ಬ್ಯಾಂಕಿಗೆ ಕಟ್ಟದೆ ವಂಚಿಸಿದ್ದಾಳೆ.
 
ಇತ್ತ ಜೂ.5ರಂದು ಕುಂಪಲದ ಚಿತ್ರಾಂಜಲಿ ನಗರದಲ್ಲಿ ಅಶ್ವಿನಿ ಬಂಗೇರ ತನ್ನ ಸಂಬಂಧಿಕರು, ಗೆಳೆಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ಗೃಹಪ್ರವೇಶ ನಡೆಸಿದ್ದರು. ನೆಂಟರು ಮನೆಯಲ್ಲಿದ್ದಾಗಲೇ ಅದೇ ದಿನ ಸಂಜೆ ವೇಳೆಗೆ ಬ್ಯಾಂಕ್ ಸಿಬ್ಬಂದಿ ಸೀಝರ್ ಗಳ ಜೊತೆಗೆ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಕಳೆದ ಒಂದು ವರ್ಷದಿಂದ ಇಎಂಐ ಪಾವತಿ ಮಾಡಿಲ್ಲ. ತಕ್ಷಣ ಏಳು ಲಕ್ಷ ರೂ. ಕಟ್ಟಬೇಕು. ಇಲ್ಲದಿದ್ದಲ್ಲಿ ಮನೆಯನ್ನು ಜಪ್ತಿ ಮಾಡುವುದಾಗಿ ಆವಾಜ್ ಹಾಕಿದ್ದಾರೆ. ನೆಂಟರಿಷ್ಟರ ಎದುರಲ್ಲೇ ಬ್ಯಾಂಕ್ ಅಧಿಕಾರಿಗಳು ಮಾನ ಹರಾಜು ಮಾಡಿದ್ದರಿಂದ ಅಶ್ವಿನಿ ಅಂದೇ ಅರ್ಧ ಕುಸಿದು ಹೋಗಿದ್ದಳು. ಅಲ್ಲದೆ, ಜೂನ್ 8ರಂದು ಬ್ಯಾಂಕಿಗೆ ಬಂದು ಉಳಿದ ಮೊತ್ತ ಕಟ್ಟುವಂತೆ ಹೇಳಿದ್ದು ಅಶ್ವಿನಿಯನ್ನು ಖಿನ್ನಳಾಗಿಸಿತ್ತು.


 
ಬ್ಯಾಂಕಿಗೆ ತೆರಳಬೇಕು ಅನ್ನುವ ಚಿಂತೆಯಲ್ಲೇ ರಾತ್ರಿಯಿಡೀ ಕೊರಗಿದ್ದ ಅಶ್ವಿನಿ, ಗೆಳತಿಯೊಬ್ಬಳ ಜೊತೆ ಮಾತನಾಡಿ ಗೋಗರೆದಿದ್ದಾಳೆ. ಕೊನೆಗೆ ಹಣದ ವ್ಯವಸ್ಥೆ ಆಗಿಲ್ಲವೆಂದು ಮನೆಯ ಮೂಲೆಯಲ್ಲಿದ್ದ ಸಾಮಾನ್ಯ ನೋಟ್ ಪ್ಯಾಡ್ ಬುಕ್ಕಿನಲ್ಲಿ ಸುದೀರ್ಘ ಪತ್ರ ಬರೆದಿದ್ದಾಳೆ. ಇಂಗ್ಲಿಷ್ ಲಿಪಿಯನ್ನು ಬಳಸಿ ತುಳು ಭಾಷೆಯಲ್ಲೇ 23 ಪುಟಗಳ ಪತ್ರವನ್ನು ಬರೆದಿದ್ದು ತಾನು ನಂಬಿದ ಮಹಿಳೆಯಿಂದಲೇ ಮೋಸ ಹೋಗಿರುವುದನ್ನು ಬರೆದು ದುಃಖಿಸಿದ್ದಾಳೆ. ಆಬಳಿಕ ತನ್ನ ಕೋಣೆಯಲ್ಲೇ ಸೀರೆಯನ್ನು ಕುಣಿಕೆಯಾಗಿಸಿ ಸಾವಿಗೆ ಶರಣಾಗಿದ್ದಾಳೆ. ಗುರುವಾರ ಬೆಳಗ್ಗೆ ಗೆಳತಿಯೊಬ್ಬಳು ಫೋನ್ ಕರೆ ಸ್ವೀಕರಿಸುತ್ತಿಲ್ಲವೆಂದು ಮನೆಗೆ ಬಂದಾಗಲೇ ತಾಯಿ ಮತ್ತು ಮನೆಯಲ್ಲಿದ್ದ ಇತರರಿಗೆ ಅಶ್ವಿನಿ ಸಾವು ಕಂಡಿರುವುದು ಗೊತ್ತಾಗಿತ್ತು.
 

ಐ ಲವ್ ಯೂ ನಿಖಿಲ್ !

ತನ್ನ ಸಾವಿಗೆ ತಾನೇ ಕಾರಣ, ಡೆತ್ ನೋಟನ್ನು ಪೊಲೀಸರು ಕೇವಲ ಓದಿದರೆ ಸಾಕು. ತನಿಖೆ ನಡೆಸಬೇಕಿಲ್ಲ ಎಂದು ಬರೆದಿಟ್ಟಿರುವ ಅಶ್ವಿನಿ, ತನಗೆ ಮೋಸ ಮಾಡಿರುವ ಸಂಗೀತಾ ಅನ್ನುವ ಮಹಿಳೆಯ ಬಗ್ಗೆ ಉಲ್ಲೇಖಿಸಿದ್ದಾಳೆ. ತಾನು ಮೊದಲಿನಿಂದಲೂ ಪ್ರೀತಿಸುತ್ತಿದ್ದ ಸೋಮೇಶ್ವರದ ಹುಡುಗ ನಿಖಿಲ್ ಬಗ್ಗೆ ಬರೆದುಕೊಂಡಿದ್ದಾಳೆ. ಐ ಲವ್ ಯೂ ನಿಖಿಲ್, ನಾನು ದೂರ ಹೋಗುತ್ತಿದ್ದೇನೆ ಎಂದು ಬರೆದಿದ್ದು ತನ್ನ ಬಳಿಯಿರುವ ಐಫೋನ್ ಮೊಬೈಲನ್ನು ಆತನಿಗೆ ನೀಡುವಂತೆ ಹೇಳಿದ್ದಾಳೆ.  
 
ಸ್ನೇಹಿತರೇ ಆಕೆಯನ್ನು ಕೊಂದರು !

 
ಮಗಳ ದಿಢೀರ್ ಸಾವಿನಿಂದ ನೊಂದಿರುವ ತಾಯಿ ದೇವಕಿ, ಮಗಳ ಸಾವಿಗೆ ಆಕೆಯ ಸ್ನೇಹಿತರೇ ಕಾರಣ ಎಂದು ಸಿಟ್ಟು ಹೊರಹಾಕಿದ್ದಾರೆ. ಸೋಮೇಶ್ವರದ‌ ನಿಖಿಲ್, ಮತ್ತಿಬ್ಬರು ಯುವತಿಯರು ಅಶ್ವಿನಿ ಜೊತೆಗೆ ನಿರಂತರ ಒಡನಾಟ ಇರಿಸಿಕೊಂಡಿದ್ದರು. ಗೃಹಪ್ರವೇಶದ ನಂತರವೂ ಮನೆಯ ಟೆರೇಸಿನಲ್ಲಿ ಕುಳಿತು ಸಿಗರೇಟು, ಬೀಯರ್ ಪಾರ್ಟಿ ಮಾಡಿದ್ದರು. ಮಗಳಿಗೂ ಕುಡಿತದ ಚಟ ತೋರಿಸಿ ಹಾಳು ಮಾಡುತ್ತಿದ್ದರು. ಆಕೆಗೂ ಸ್ನೇಹಿತರೇ ಮುಖ್ಯವಾಗಿತ್ತು. ತಾಯಿಯ ನೆನಪೇ ಇರಲಿಲ್ಲ. ದುಬೈಯಿಂದ ಬರುವ ವಿಚಾರವೂ ನನಗೆ ಗೊತ್ತಿರಲಿಲ್ಲ. ಆಕೆ ಬರೋದು ಸ್ನೇಹಿತರಿಗೆ ತಿಳಿದಿತ್ತು. ಮನೆ ಖರೀದಿಸಿರುವ ವಿಚಾರವೂ ನನ್ನ ಗಮನಕ್ಕೆ ಬಂದಿರಲಿಲ್ಲ. ಇದೀಗ ಆಕೆಯನ್ನು ಗೆಳೆಯರೇ ಸೇರಿ ಮುಗಿಸಿದ್ದಾರೆ. ನನ್ನನ್ನು ಅನಾಥಳನ್ನಾಗಿ ಮಾಡಿದ್ದಾರೆ ಎಂದು ತಾಯಿ ಗೋಗರೆದಿದ್ದಾರೆ.

ಗೃಹ ಪ್ರವೇಶದ ಐದೇ ದಿನದಲ್ಲಿ ನೇಣುಬಿಗಿದು ಆತ್ಮಹತ್ಯೆ ; ಬ್ಯಾಂಕ್ ಲೋನ್ ಇದ್ದ ಮನೆ ಖರೀದಿಸಿ ಸಂಕಷ್ಟ, ಪ್ರಿಯಕರನಿಗೆ ಪತ್ರ ಬರೆದಿಟ್ಟು ಯುವತಿ ಸಾವು 

Kumpala House warming girl suicide in Kumpala, Bank employee harassment reason for suicide in Mangalore.