ರಾಜ್ಯಕ್ಕೆ ಮುಂಗಾರು ವಿಳಂಬ ; ಕೇರಳ ಪ್ರವೇಶವೇ ಒಂದು ವಾರ ದೂರ, ಕರಾವಳಿಯಲ್ಲಿ ಬಿಸಿಲ ಝಳ ಹೆಚ್ಚಳ 

05-06-23 03:15 pm       Mangalore Correspondent   ಕರಾವಳಿ

ಈ ಬಾರಿಯೂ ರಾಜ್ಯಕ್ಕೆ ಮುಂಗಾರು ಆಗಮನ ವಿಳಂಬವಾಗಿದೆ. ಬೇಸಗೆ ಮಳೆಯೂ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದೆ ಬಿಸಿಲ ಝಳವೂ ಹೆಚ್ಚಾಗಿದ್ದು ಕರಾವಳಿ ಭಾಗದಲ್ಲಿ ಜನರು ತತ್ತರಿಸುವಂತಾಗಿದೆ.

ಮಂಗಳೂರು, ಜೂನ್ 5 : ಈ ಬಾರಿಯೂ ರಾಜ್ಯಕ್ಕೆ ಮುಂಗಾರು ಆಗಮನ ವಿಳಂಬವಾಗಿದೆ. ಬೇಸಗೆ ಮಳೆಯೂ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದೆ ಬಿಸಿಲ ಝಳವೂ ಹೆಚ್ಚಾಗಿದ್ದು ಕರಾವಳಿ ಭಾಗದಲ್ಲಿ ಜನರು ತತ್ತರಿಸುವಂತಾಗಿದೆ. 2019ರಲ್ಲಿಯೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಜೂನ್ ಆರಂಭದಲ್ಲಿ ಮಳೆಯಾಗದೆ ನಿಧಾನವಾಗಿ ಮುಂಗಾರು ಆಗಮಿಸಿತ್ತು. 

ಭಾರತೀಯ ಹವಾಮಾನ ಇಲಾಖೆ ಈ ಬಾರಿ ಜೂ.4ರ ವೇಳೆಗೆ ಮುಂಗಾರು ಮಾರುತಗಳು ಕೇರಳ ಪ್ರವೇಶಿಸಲಿವೆ ಎಂದು ತಿಳಿಸಿತ್ತು. ಆದರೆ ಸದ್ಯದ ಸ್ಥಿತಿ ಪ್ರಕಾರ, ಕೇರಳದಲ್ಲಿ ಮಳೆಯಾಗುವುದೇ  ಇನ್ನೂ 4-5 ದಿನ ತಡವಾಗುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯ ಕರಾವಳಿಗೆ ಮಳೆ ಬರುವಾಗ ವಿಳಂಬ ಆಗಬಹುದು. 2019ರಲ್ಲಿ ಜೂ. 8ರಂದು ಮುಂಗಾರು ಮಾರುತ ಕೇರಳ ಪ್ರವೇಶಿಸಿತ್ತು. ಆನಂತರ, ದೇಶದ ವಿವಿಧೆಡೆ ಮಳೆ ಆವರಿಸುವಲ್ಲಿ ವಿಳಂಬವಾಗಿತ್ತು. ಕೇರಳದ ಬಳಿಕ ಒಂದೆರಡು ದಿನದಲ್ಲಿ ರಾಜ್ಯ ಕರಾವಳಿಗೆ ಮುಂಗಾರು ತಲುಪುವುದು ವಾಡಿಕೆ. ಕೇರಳಕ್ಕೆ ಮಳೆ ಮೋಡಗಳು ಪ್ರವೇಶಿಸುತ್ತಿದ್ದಂತೆ ಅರಬಿ ಸಮುದ್ರದಲ್ಲಿ ಚಂಡಮಾರುತ ಸೃಷ್ಟಿಯಾಗಿ ಕರ್ನಾಟಕಕ್ಕೆ ಬರಬೇಕಿದ್ದ ಮುಂಗಾರಿಗೆ ತಡೆಯಾಗಿತ್ತು. ರಾಜ್ಯಕ್ಕೆ ಮುಂಗಾರು ತಲುಪುವಾಗ ಕೊನೆಗೆ ಜೂನ್ 14 ಆಗಿತ್ತು. 

ಪಶ್ಚಿಮದಿಂದ ಪ್ರತೀ ಗಂಟೆಗೆ 30-40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವಿಕೆ, ಗಾಳಿಯ ಚಲನೆ, ಕಡಲಿನಲ್ಲಿ ಅಬ್ಬರ ಹೆಚ್ಚಾಗುವುದು ಮತ್ತು 48 ಗಂಟೆಗಳ ನಿರಂತರ ಮಳೆ ಸುರಿಯುವಿಕೆ ಮೊದಲಾದ ಲಕ್ಷಣಗಳನ್ನು ಅವಲೋಕಿಸಿ ಹವಾಮಾನ ಇಲಾಖೆ ಮುಂಗಾರಿನ ಆಗಮನವನ್ನು ಘೋಷಿಸುತ್ತದೆ. ಈ ಬಾರಿ ಆ ರೀತಿಯ ವಿದ್ಯಮಾನ ಇನ್ನೂ ಉಂಟಾಗಿಲ್ಲ. ಕೇರಳ, ಕರ್ನಾಟಕದ ಒಂಬತ್ತು ನಿಗದಿತ ಕೇಂದ್ರಗಳಲ್ಲಿ ನಿರಂತರ ಮಳೆಯಾಗಿದ್ದು ಕಂಡುಬಂದರೆ ಮಾತ್ರ ಮುಂಗಾರು ಘೋಷಣೆ ಮಾಡುತ್ತಾರೆ. 

ಕಳೆದ ವರ್ಷ ಮೇ 29ಕ್ಕೆ ಕೇರಳ ಕರಾವಳಿಗೆ ಮುಂಗಾರು ಅಪ್ಪಳಿಸಿದ ಎರಡರಿಂದ ಮೂರು ದಿನಗಳಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿತ್ತು. ಆದರೆ ಸದ್ಯ ಆ ರೀತಿಯ ವಾತಾವರಣ ಇಲ್ಲ. ಇನ್ನು 4-5 ದಿನಗಳ ಒಳಗಾಗಿ ಕೇರಳ ಕರಾವಳಿ ಭಾಗಕ್ಕೆ ಮುಂಗಾರು ಆಗಮಿಸುವ ನಿರೀಕ್ಷೆ ಹೊಂದಲಾಗಿದೆ. ಬಳಿಕ ಎರಡರಿಂದ ಮೂರು ದಿನಗಳ ಒಳಗೆ ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಉತ್ತಮ ಮಳೆ ಸುರಿಯಬಹುದು. ಈ ಬಾರಿ ಬೇಸಗೆ ಮಳೆಯೂ ಉತ್ತಮವಾಗಿ ಆಗಿಲ್ಲದ ಕಾರಣ ಮುಂಗಾರು ವಿಳಂಬ ಕೃಷಿ ಚಟುವಟಿಕೆಗಳ ಮೇಲೂ ಪ್ರಭಾವ ಬೀರಲಿದೆ.

As the weather conditions over sea are not favourable, monsoon will be delayed this year. The pre-monsoon showers also did not pour as expected. Mercury is soaring and people are suffering due to heat and water scarcity. In 2019 also, similar situation was created. Indian Meteorological Department said that monsoon will enter Kerala on June 4. However, according to the present trend it will be delayed by another four to five days.