ಸೌದಿಗೆ ನವೆಂಬರ್ 30ರ ವರೆಗೆ ವಿಮಾನ ಸೇವೆ ರದ್ದು ; ಇಂಡಿಗೋ ಸಂಸ್ಥೆ ಪ್ರಕಟಣೆ, ಭದ್ರತಾ ಆತಂಕದ ಹಿನ್ನೆಲೆ ಮುನ್ನೆಚ್ಚರಿಕೆ

18-11-26 11:28 pm       HK News Desk   ದೇಶ - ವಿದೇಶ

ಸೌದಿ ಅರೇಬಿಯಾದಲ್ಲಿ ಉದ್ಭವಿಸಿರುವ ಆತಂಕದ ಪರಿಸ್ಥಿತಿ ಹಿನ್ನೆಲೆಯಲ್ಲಿ ನವೆಂಬರ್ 30ರ ವರೆಗೆ ಭಾರತದಿಂದ ಸೌದಿ ಅರೇಬಿಯಾಕ್ಕೆ ತೆರಳುವ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳ ಹಾರಾಟವನ್ನು ಪ್ರಮುಖ ವಿಮಾನಯಾನ ಇಂಡಿಗೋ ರದ್ದುಗೊಳಿಸಿದೆ.

ನವದೆಹಲಿ, ನ.18: ಸೌದಿ ಅರೇಬಿಯಾದಲ್ಲಿ ಉದ್ಭವಿಸಿರುವ ಆತಂಕದ ಪರಿಸ್ಥಿತಿ ಹಿನ್ನೆಲೆಯಲ್ಲಿ ನವೆಂಬರ್ 30ರ ವರೆಗೆ ಭಾರತದಿಂದ ಸೌದಿ ಅರೇಬಿಯಾಕ್ಕೆ ತೆರಳುವ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳ ಹಾರಾಟವನ್ನು ಪ್ರಮುಖ ವಿಮಾನಯಾನ ಇಂಡಿಗೋ ರದ್ದುಗೊಳಿಸಿದೆ. 

ಈ ಕುರಿತು ಪ್ರಯಾಣ ಸಲಹೆಯನ್ನು ಬಿಡುಗಡೆ ಮಾಡಿರುವ ಇಂಡಿಗೋ ಸಂಸ್ಥೆಯು ಭಾರತದಿಂದ ಸೌದಿಯ ನಾಲ್ಕು ಪ್ರಮುಖ ನಗರಗಳಾದ ಜೆದ್ದಾ, ಮದೀನಾ, ರಿಯಾದ್ ಹಾಗೂ ದಮ್ಮಾಮ್ ಸಂಪರ್ಕಿಸುವ ಎಲ್ಲಾ ವಿಮಾನ ಸೇವೆಗಳು ಈ ತಿಂಗಳ ಅಂತ್ಯದ ವರೆಗೆ ಅಮಾನತ್ತಿನಲ್ಲಿ ಇರಲಿವೆ‌ ಎಂದು ಸ್ಪಷ್ಟಪಡಿಸಿದೆ. 

ಸೌದಿ ಅರೇಬಿಯಾದಲ್ಲಿ ಪ್ರಸ್ತುತ ತಲೆದೋರಿರುವ ಭದ್ರತಾ ಸಂಬಂಧಿ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗೆ ತಮ್ಮ ಮೊದಲ ಆದ್ಯತೆ ಎಂದು ಇಂಡಿಗೋ ಹೇಳಿದ್ದು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಕಾಲಕ್ಕೆ ತಕ್ಕಂತೆ ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ. ವಿಮಾನ ರದ್ದತಿಯಿಂದ ತೊಂದರೆಗೊಳಗಾದ ಗ್ರಾಹಕರಿಗೆ ಅಗತ್ಯವಿರುವ ಸಹಾಯವನ್ನು ಒದಗಿಸಲು ಬದ್ಧವಾಗಿರುವುದಾಗಿ ಸಂಸ್ಥೆ ಭರವಸೆ ನೀಡಿದೆ. ಟಿಕೆಟ್ ಬುಕಿಂಗ್ ವೇಳೆ ಪ್ರಯಾಣಿಕರು ನೀಡಿರುವ ನೋಂದಾಯಿತ ಇಮೇಲ್ ವಿಳಾಸ ಹಾಗೂ ದೂರವಾಣಿ ಸಂಖ್ಯೆಗಳ ಮೂಲಕ ಅವರಿಗೆ ಈ ಮಾಹಿತಿಯನ್ನು ತಲುಪಿಸಲಾಗುತ್ತಿದೆ.

ಸೌದಿ ಅರೇಬಿಯಾಗೆ ಪ್ರಯಾಣಿಸಲು ಟಿಕೆಟ್ ಕಾಯ್ದಿರಿಸಿರುವ ಪ್ರಯಾಣಿಕರು ತಮ್ಮ ವಿಮಾನದ ಪ್ರಸ್ತುತ ಸ್ಥಿತಿಯನ್ನು ತಿಳಿದುಕೊಳ್ಳುವಂತೆ ಮತ್ತು ಇಂಡಿಗೋ ಕಳುಹಿಸುವ ಅಧಿಕೃತ ಸಂದೇಶಗಳನ್ನು ಗಮನಿಸುವಂತೆ ಮನವಿ ಮಾಡಲಾಗಿದೆ.