ಡೀಪ್ ಫೇಕ್ ಮೂಲಕ ನಗ್ನ ಚಿತ್ರ, ಧ್ವನಿ ನಕಲಿಸಿ ಸೈಬರ್​ ವಂಚನೆ ; ಕಾಲ್​ ರಿಸೀವ್‌ ಮಾಡುವ ಮುನ್ನ ಇರಲಿ ಎಚ್ಚರ, ವಂಚನೆಯನ್ನು ತಪ್ಪಿಸುವುದು ಹೇಗೆ ? 

01-09-23 08:00 pm       HK News Desk   ದೇಶ - ವಿದೇಶ

ಇಂದಿನ ದಿನಮಾನದಲ್ಲಿ ತಂತ್ರಜ್ಞಾನವು ಅಗಾಧ ಬೆಳವಣಿಗೆ ಸಾಧಿಸಿದೆ. ದಿನನಿತ್ಯದ ಕೆಲಸ ಕಾರ್ಯಗಳನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಹೊಸ ಹೊಸ ತಾಂತ್ರಿಕ ಅನ್ವೇಷಣೆಗಳು ನಡೆಯುತ್ತಲೇ ಇವೆ.

ನವದೆಹಲಿ, ಸೆಪ್ಟೆಂಬರ್ 1: ಇಂದಿನ ದಿನಮಾನದಲ್ಲಿ ತಂತ್ರಜ್ಞಾನವು ಅಗಾಧ ಬೆಳವಣಿಗೆ ಸಾಧಿಸಿದೆ. ದಿನನಿತ್ಯದ ಕೆಲಸ ಕಾರ್ಯಗಳನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಹೊಸ ಹೊಸ ತಾಂತ್ರಿಕ ಅನ್ವೇಷಣೆಗಳು ನಡೆಯುತ್ತಲೇ ಇವೆ. ಫೇಸ್ ಸ್ವೈಪ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ ಎಂಬುದು ಇಂಥದೇ ಒಂದು ತಂತ್ರಜ್ಞಾನವಾಗಿದೆ. ಆದರೆ ಈಗ ಸೈಬರ್​ ವಂಚಕರು ಈ ತಂತ್ರಜ್ಞಾನವನ್ನು ಬಳಸಿಕೊಂಡು ವಂಚನೆಯ ಕೃತ್ಯಗಳನ್ನು ಎಸಗುತ್ತಿದ್ದಾರೆ. ಈ ಮುನ್ನ ಸೈಬರ್ ಕಳ್ಳರು ನಿಮ್ಮ ಪರಿಚಯದವರಿಗೆ, ಬಂಧು ಮಿತ್ರರಿಗೆ ಕರೆ ಮಾಡಿ ನಿಮ್ಮದೇ ಅನಿಸುವ ಧ್ವನಿಯಲ್ಲಿ ಮಾತನಾಡಿ ಅವರಿಂದ ಹಣ ಕೀಳುತ್ತಿದ್ದರು. ಆದರೆ ವಂಚನೆಯ ಈ ಮಾರ್ಗ ಈಗ ಹಳೆಯದಾಗಿದೆ. ಈಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​​ ಫೇಸ್​ ಸ್ವೈಪಿಂಗ್​ ತಂತ್ರಜ್ಞಾನದ ಮೂಲಕ ವೀಡಿಯೊ ಕಾಲ್ ಮಾಡಿ ಹಣ ದೋಚುವ ಹೊಸ ದಂಧೆ ಆರಂಭವಾಗಿದೆ.

ಈವರೆಗೆ 6 ಪ್ರಕರಣ:

ಫೇಸ್​ ಸ್ವ್ಯಾಪಿಂಗ್ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಮೂಲಕ ಸೈಬರ್ ಅಪರಾಧಿಗಳು ಜನರ ಹಣವನ್ನು ದೋಚುತ್ತಿದ್ದಾರೆ. ದೇಶದ ರಾಜಧಾನಿ ದೆಹಲಿಯಲ್ಲಿ ಈ ತಂತ್ರದಿಂದ 5 ವಂಚನೆ ಪ್ರಕರಣಗಳು ನಡೆದ ಬಗ್ಗೆ ವರದಿಯಾಗಿದೆ. ಗುರುಗ್ರಾಮದಲ್ಲಿ ಕೂಡ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ವಂಚನೆ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ.

ಕೃತಕ ಬುದ್ಧಿಮತ್ತೆಯ ಫೇಸ್​ ಸ್ವ್ಯಾಪಿಂಗ್​ ವಂಚನೆ ನಡೆಯುವುದು ಹೀಗೆ:

ಸೈಬರ್ ಕಳ್ಳರು ಮೊದಲಿಗೆ ನಿಮ್ಮ ಸೋಶಿಯಲ್ ಮೀಡಿಯಾ ಖಾತೆಯಿಂದ ನಿಮ್ಮ ಫೋಟೊ ಅಥವಾ ವೀಡಿಯೊಗಳನ್ನು ಕಾಪಿ ಮಾಡಿಕೊಳ್ಳುತ್ತಾರೆ. ನಂತರ ಕೃತಕ ಬುದ್ಧಿಮತ್ತೆ ಫೇಸ್ ಸ್ವ್ಯಾಪಿಂಗ್ ತಂತ್ರಜ್ಞಾನ ಬಳಸಿ ನಿಮ್ಮ ಪರಿಚಯದವರಿಗೆ ಕಾಲ್ ಮಾಡುತ್ತಾರೆ. ಆ ಕಡೆ ಮಾತನಾಡುತ್ತಿರುವವರಿಗೆ ನಿಮ್ಮದೇ ಮುಖ ಕಾಣಿಸೂತ್ತಿರುತ್ತದೆ. ಆದರೆ ವಾಸ್ತವದಲ್ಲಿ ನೀವು ಕಾಲ್​ನಲ್ಲಿ ಇರುವುದೇ ಇಲ್ಲ. ನಂತರ ತುಂಬಾ ಅರ್ಜೆಂಟ್​ ಇದೆ ಅಂತ ಅಥವಾ ಏನೋ ಕಷ್ಟ ಇದೆ ಅಂತ ಹೇಳಿ ನಿಮ್ಮ ಪರಿಚಯದವರಿಂದ ಖಾತೆಗೆ ಹಣ ಹಾಕಿಸಿಕೊಂಡು ಮಾಯವಾಗುತ್ತಾರೆ.

ಸೈಬರ್ ಅಪರಾಧಿಗಳ ಹೊಸ ಅಸ್ತ್ರ:ಫೇಸ್​​ ಸ್ವ್ಯಾಪಿಂಗ್ ಮೂಲಕ ಒಬ್ಬ ವ್ಯಕ್ತಿಗೆ ಯಶಸ್ವಿಯಾಗಿ ವಂಚಿಸಿದ ನಂತರ ತಕ್ಷಣವೇ ಅದಕ್ಕಾಗಿ ಬಳಸಿದ ನಂಬರ್​ ಅನ್ನು ಬಿಸಾಡಲಾಗುತ್ತದೆ. ಮತ್ತೊಂದು ವಂಚನೆಗೆ ಹೊಸ ನಂಬರ್​ ಅನ್ನೇ ಬಳಸಲಾಗುತ್ತದೆ. ಈ ಕೃತಕ ಬುದ್ಧಿಮತ್ತೆ ವಂಚೆನೆಯ ವಿಧಾನದಲ್ಲಿ ಮುಖ ಮತ್ತು ಧ್ವನಿ ಎರಡನ್ನೂ ನಕಲು ಮಾಡಿ ಅಪರಾಧ ಎಸಗಲಾಗುತ್ತದೆ.

ವಂಚನೆಯನ್ನು ತಪ್ಪಿಸುವುದು ಹೇಗೆ?:

ಯಾವುದೇ ಹೊಸ ಸಂಖ್ಯೆಯಿಂದ ನಿಮ್ಮ ಸಂಬಂಧಿಕರ ಧ್ವನಿಯಲ್ಲಿ ಕರೆ ಬಂದರೂ, ನೀವು ವಂಚನೆಗೆ ಬಲಿಯಾಗಬಹುದು. ನೀವು ಯಾವುದೇ ರೀತಿಯ ಸೈಬರ್ ವಂಚನೆಗೆ ಬಲಿಯಾಗಿದ್ದರೆ, ತಕ್ಷಣವೇ ನಿಮ್ಮ ಹತ್ತಿರದ ಸೈಬರ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ. ಇಲ್ಲದಿದ್ದರೆ, ತಕ್ಷಣ 1930ಗೆ ಕರೆ ಮಾಡಿ. ಇದು ದೇಶಾದ್ಯಂತ ಸೈಬರ್ ಅಪರಾಧ ಸಹಾಯವಾಣಿ ಸಂಖ್ಯೆಯಾಗಿದೆ.

Be careful about Deep fake of getting pictures naked and Fake voice before picking phone calls.