ಬ್ರೇಕಿಂಗ್ ನ್ಯೂಸ್

Hassan Accident, 9 killed, Update: ಗಣೇಶ ಮೆರವಣಿಗೆ ಮೇಲೆ ಕ್ಯಾಂಟರ್ ಹರಿದು ದುರಂತ ; ಮೃತರ ಸಂಖ್ಯೆ 9ಕ್ಕೇರಿಕೆ, ಮೃತರಲ್ಲಿ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು, ತಾಯಿಗೆ ಒಬ್ಬನೇ ಮಗ, ಕಿತ್ತು ತಿನ್ನುವ ಬಡತನ ಮಧ್ಯೆಯೂ ಓದಿಸುತ್ತಿದ್ದ ತಾಯಿ ! 

13-09-25 04:31 pm       HK News Desk   ಕರ್ನಾಟಕ

ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಕ್ಯಾಂಟರ್ ಲಾರಿ ಹರಿದ ದುರಂತದಲ್ಲಿ ಅಸುನೀಗಿದವರ ಸಂಖ್ಯೆ 9ಕ್ಕೇರಿದೆ. ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪ್ರವೀಣ್ ಕುಮಾರ್ ಎಂಬ ವಿದ್ಯಾರ್ಥಿ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ.

ಹಾಸನ, ಸೆ.13: ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಕ್ಯಾಂಟರ್ ಲಾರಿ ಹರಿದ ದುರಂತದಲ್ಲಿ ಅಸುನೀಗಿದವರ ಸಂಖ್ಯೆ 9ಕ್ಕೇರಿದೆ. ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪ್ರವೀಣ್ ಕುಮಾರ್ ಎಂಬ ವಿದ್ಯಾರ್ಥಿ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ. ಪ್ರವೀಣ್ ಮೂಲತಃ ಬಳ್ಳಾರಿಯವನಾಗಿದ್ದು ಹಾಸನದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ. 

ಮೃತರಲ್ಲಿ ಮೂವರು ಎಂಜಿನಿಯರಿಂಗ್​ ವಿದ್ಯಾರ್ಥಿಗಳು. ಬಳ್ಳಾರಿ ಮೂಲದ ಪ್ರವೀಣ್​ ಕುಮಾರ್​, ಚಿತ್ರದುರ್ಗದ ವಿದ್ಯಾರ್ಥಿ ಮಿಥುನ್ ಮತ್ತು ಚಿಕ್ಕಮಗಳೂರು ಜಿಲ್ಲೆಯ ಸುರೇಶ್​​ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ತವರಿಗೆ ತರಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಪ್ರವೀಣ್ ಕುಮಾರ್ ಬಳ್ಳಾರಿ ಜಿಲ್ಲೆಯ ನಾಗಲಕೇರಿ ನಿವಾಸಿಯಾಗಿದ್ದು ಪಾರ್ಥಿವ ಶರೀರ ಬರುತ್ತಿದ್ದಂತೆ ಒಬ್ಬನೇ ಮಗನನ್ನು ಕಳೆದುಕೊಂಡ ತಾಯಿ ಸುಶೀಲಮ್ಮ ಎದೆ ಬಡಿದುಕೊಂಡು ಕಿರುಚಾಡಿದ್ದಾರೆ. ನಾಗಲಕೇರಿ ಏರಿಯಾದ ಜನರು ತಾಯಿಯ ಕಣ್ಣೀರು ಕಂಡು ಮಮ್ಮಲ ಮರುಗಿದ್ದಾರೆ. ಇವರದು ಬಡ ಕುಟುಂಬವಾಗಿದ್ದು ಬಳ್ಳಾರಿಯಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡಿದ ಬಳಿಕ ಪ್ರವೀಣ್​ ಎಂಜಿನಿಯರಿಂಗ್ ಓದಲು ಹಾಸನಕ್ಕೆ ತೆರಳಿದ್ದ. ಎಂಜಿನಿಯರಿಂಗ್​ ಕೊನೆಯ ಸೆಮಿಸ್ಟರ್​ನಲ್ಲಿ ಓದುತ್ತಿದ್ದ. ತಂದೆ ಇಲ್ಲದ ಮಗನಿಗೆ ತಾಯಿಯೇ ಆಸರೆಯಾಗಿದ್ದರು. ಮಗನ ವಿದ್ಯಾಭ್ಯಾಸಕ್ಕೆ ಹಗಲಿರುಳು ಕಷ್ಟ ಪಡುತ್ತಿದ್ದ ತಾಯಿ, ಅದಕ್ಕಾಗಿ ಖಾಸಗಿ ಆಸ್ಪತ್ರೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಮಗ ಒಳ್ಳೆಯ ಕೆಲಸ ಪಡೆದು ಮನೆಗೆ ಆಧಾರವಾಗುತ್ತಾನೆ ಎಂದು ನೂರಾರು ಕನಸುಗಳನ್ನು ಕಟ್ಟಿದ್ದ ಸುಶೀಲಮ್ಮ ಕನಸು ನುಚ್ಚುನೂರಾಗಿದೆ. 

ಹುಟ್ಟುಹಬ್ಬ ಬೆನ್ನಲ್ಲೇ ಮಿಥುನ್​ ದುರಂತ ಅಂತ್ಯ 

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕು ಮೂಲದ ಮಿಥುನ್, ಹೊಳೆನರಸೀಪುರದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಮೊನ್ನೆ ರಾತ್ರಿಯಷ್ಟೇ ತನ್ನ ಹುಟ್ಟುಹಬ್ಬ ಆಚರಿಸಿಕೊಂಡಿದ್ದ. ಸ್ನೇಹಿತರು ಕೇಕ್​ ಕಟ್‌ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ನಿನ್ನೆ ಇವರ ಊರಲ್ಲಿ ಹಬ್ಬ ಇತ್ತು. ಮಗನಿಗೆ ಫೋನ್ ಮಾಡಿದ್ದ ಅಪ್ಪ, ಹಬ್ಬಕ್ಕೆ ಮನೆಗೆ ಬಾ ಅಂತಾ ಕರೆದಿದ್ದರು. ಆದರೆ ಮಿಥುನ್‌ ಆರ್ಕೆಸ್ಟ್ರಾ ಇದೆ. ಗಣೇಶ ಮೆರವಣಿಗೆ ನೋಡ್ಕೊಂಡು ಬರ್ತೀನಿ ಅಂತ ಹೇಳಿದ್ದ. ವಿಧಿಯಾಟಕ್ಕೆ ಈತನೂ ಟ್ರಕ್‌ ನಡಿಗೆ ಬಿದ್ದು ಬಲಿಯಾಗಿದ್ದಾನೆ. ಮನೆಗೆ ಆಸರೆಯಾಗಬೇಕಿದ್ದ ಹುಡುಗ ವಿಧಿಯಾಟಕ್ಕೆ ಬಲಿಯಾಗಿದ್ದಾನೆ. 

ಬ್ರೇಕ್ ಬದಲು ಎಕ್ಸಿಲೇಟರ್ ತುಳಿದಿದ್ನಾ ಚಾಲಕ ? 

ಗಣೇಶ ಮೆರವಣಿಗೆ ಮೇಲೆ ಕ್ಯಾಂಟರ್ ಲಾರಿ ಹರಿದ ಘಟನೆಯ ವಿಡಿಯೋ ವೈರಲ್ ಆಗಿದ್ದು ಕ್ಯಾಂಟರ್ ಖಾಸಗಿ ಸರಕು ಸಾಗಣೆ ಕಂಪನಿಗೆ ಸೇರಿದ್ದೆಂದು ತಿಳಿದುಬಂದಿದೆ. ಹಾಸನ ಜಿಲ್ಲಾ ಕೇಂದ್ರದಿಂದ ಹೊಳೆನರಸೀಪುರದ ಕಡೆಗೆ ಕ್ಯಾಂಟರ್ ತೆರಳುತ್ತಿತ್ತು. ಒಂದೆಡೆ ಗಣೇಶ ಮೆರವಣಿಗೆ ಆಗುತ್ತಿದ್ದರೆ ಮೊಸಳೆ ಹೊಸಳ್ಳಿ ತಲುಪಿದಾಗ ಎದುರುಗಡೆಯಿಂದ ಬೈಕ್ ಬಂದಿತ್ತು. ಬೈಕ್ ಗೆ ಮೊದಲು ಡಿಕ್ಕಿ ಹೊಡೆದ ಕ್ಯಾಂಟರ್ ಆನಂತರ, ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ವಿಭಜಕವನ್ನು ದಾಟಿ ಮತ್ತೊಂದು ಕಡೆಯಲ್ಲಿದ್ದ ಮೆರವಣಿಗೆಯ ಮೇಲೆ ನುಗ್ಗಿದೆ. ಕ್ಯಾಂಟರ್ ಡಿಕ್ಕಿ ಹೊಡೆದಿದ್ದ ಬೈಕ್ ಚಾಲಕ ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಟ್ರಕ್ ಚಾಲಕ ಬೈಕ್ ಬಂತೆಂದು ಬ್ರೇಕ್ ಹೊಡೆಯೋ ಬದಲು ಎಕ್ಸಿಲೇಟರ್ ಒತ್ತಿದ್ದನೇ ಎಂಬ ಶಂಕೆ ಮೂಡಿದೆ. ಚಾಲಕ ಭುವನೇಶ್ ನನ್ನು ಸ್ಥಳೀಯರು ಕ್ಯಾಂಟರ್ ನಿಂದ ಹೊರಗೆಳೆದು ಥಳಿಸಿದ್ದಾರೆ. ಬಳಿಕ ಸ್ಥಳೀಯ ಸರ್ಕಾರಿ ಆಸ್ಪತ್ರಗೆ ದಾಖಲಿಸಲಾಗಿದೆ. ಈತ ಹೊಳೆನರಸೀಪುರದ ಕಟ್ಟೆಬೆಳಗುಲಿಯ ನಿವಾಸಿ ಎಂದು ಗುರುತಿಸಲಾಗಿದೆ.

ನಸುಕಿನಲ್ಲಿ ಪೋಸ್ಟ್ ಮಾರ್ಟಂ 

ಘಟನೆಯಲ್ಲಿ ಗಾಯಗೊಂಡಿದ್ದ 19 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿ ಇಬ್ಬರನ್ನು ಐಸಿಯುಗೆ ಸೇರಿಸಲಾಗಿತ್ತು. ಒಬ್ಬನಿಗೆ ಪಕ್ಕೆಲುಬು ಮೂಳೆ ಮುರಿದಿದ್ದರಿಂದ ತುರ್ತು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಆಸ್ಪತ್ರೆ ವರದಿ ಪ್ರಕಾರ, ಮೃತದೇಹಗಳನ್ನು ನಸುಕಿನ ಮೂರೂವರೆ ಗಂಟೆಗೆ ಪೋಸ್ಟ್ ಮಾರ್ಟಂ ಮಾಡಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

​The death toll in the tragic incident where a truck plowed into a Ganesha immersion procession has risen to nine. Praveen Kumar, a student who was seriously injured and hospitalized, died this morning. Praveen, originally from Ballari, was studying engineering in Hassan. ​Three engineering students were among the deceased: Praveen Kumar from Ballari, Mithun from Chitradurga, and Suresh from Chikkamagaluru. The bodies have been brought to their hometowns, and the families' grief is palpable.